ನಮ್ಮ ಸಂಬಂಧವನ್ನು ಗುಟ್ಟಾಗಿಡಬೇಕೇಕೆ ?

 

ಒಮ್ಮೆ ಅವನು ದುಡಿಯಲು ಪ್ರಾರಂಭಿಸಿದ ನಂತರ, ಅಲ್ಲಿಯವರೆಗೂ ನಿಮ್ಮ ನಡುವಿನ ಸಂಬಂಧ ಇದೇರೀತಿ ಮುಂದುವರಿದರೆ ಆಗ ನಿಮ್ಮನ್ನು ಅವನ ಮನೆಯವರಿಗೆ ಪರಿಚಯಿಸುವಂತೆ ಒತ್ತಾಯಿಸಬಹುದು.

ಪ್ರ : ನನಗೀಗ 21 ವರ್ಷ. ಒಂದು ವರ್ಷದಿಂದ ನನ್ನ ಕಾಲೇಜ್ಮೇಟ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ. ನಮ್ಮ ಮಧ್ಯೆ ಎಲ್ಲವೂ ಸರಿಯಾಗಿಯೇ ಇದೆ. ಅದರೆ ಅವನಿನ್ನೂ ನಮ್ಮ ಸಂಬಂಧವನ್ನು ಬಹಿರಂಗಗೊಳಿಸಿಲ್ಲ. ನಾವಿನ್ನೂ ಕ್ಲೋಸ್‍ಫ್ರೆಂಡ್ಸ್ ಅಂತಲೇ ಅವನ ಸ್ನೇಹಿತರಿಗೆ ಹೇಳಿದ್ದಾನೆ. ಅವನ ಕುಟುಂಬದವರಿಗೆ ನನ್ನನ್ನು ಇನ್ನೂ ಪರಿಚಯಿಸಿಲ್ಲ. ನಾವಿಬ್ಬರೂ ಜೊತೆಯಿರುವಾಗ ಯಾರಾದರೂ ಅವನ ಪರಿಚಯಸ್ಥರು ಎದುರಿಗೆ ಸಿಕ್ಕರೆ ಅವನು ಕೂಡಲೇ ನನ್ನಿಂದ ದೂರ ಸರಿದುಬಿಡುತ್ತಾನೆ. ಅವನೇಕೆ ನಮ್ಮ ಸಂಬಂಧವನ್ನು ಗುಟ್ಟಾಗಿಡಲು ಬಯಸುವುದು? ನಾನು ನನ್ನ ಸ್ನೇಹಿತೆಯರಿಗೆ ಮತ್ತು ಮನೆಯವರಿಗೆ ಇವನನ್ನು ಇಂಟ್ರೊಡ್ಯೂಸ್ ಮಾಡಿಕೊಟ್ಟಿದ್ದೇನೆ. ನಮ್ಮ ರಿಲೇಶನ್ಶಿಪ್ಪನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲೂ ಬಯಸುತ್ತಿದ್ದೇನೆ. ನಮ್ಮಿಬ್ಬರ ಮುಂದಿನ ಜೀವನದ ಬಗ್ಗೆ ಕನಸೂ ಕಾಣುತ್ತಿದ್ದೇನೆ. ಆದರೆ ಅವನಿನ್ನೂ ಅವನ ಮನೆಯವರಿಗೆ ನನ್ನ ವಿಷಯ ಹೇಳದಿದ್ದುದು ನೋಡಿದರೆ ನನ್ನನ್ನು ಅವರು ಒಪ್ಪಲಿಕ್ಕಿಲ್ಲವೆಂತ ಅವನಿಗೆ ಭಯವಿರಬಹುದು ಅನಿಸುತ್ತಿದೆ. ಆ ವಿಷಯ ಮಾತಾಡಲೇ ಅವನು ಅವಕಾಶ ಕೊಡುತ್ತಿಲ್ಲ. ಉಳಿದಂತೆ ಅವನು ಒಳ್ಳೆಯ ಹುಡುಗ. ನನ್ನ ಬಗ್ಗೆ ಕೇರ್ ತೆಗೆದುಕೊಳ್ಳುತ್ತಾನೆ. ನನಗೀಗ ಯಾವ ರೀತಿ ಮುಂದುವರಿಯಬೇಕು ಅಂತಲೇ ಅರ್ಥವಾಗುತ್ತಿಲ್ಲ. ಸಲಹೆ ಕೊಡುತ್ತೀರಾ?

: ಎಲ್ಲರ ಮನೆಯಲ್ಲೂ ನಿಮ್ಮ ಮನೆಯಲ್ಲಿರುವ ಹಾಗೆ ಮುಕ್ತ ವಾತಾವರಣ ಇರುವುದಿಲ್ಲ. ಕಿರಿಯರು ಎಲ್ಲ ವಿಷಯಗಳನ್ನು ತಮ್ಮ ಹೆತ್ತವರ ಜೊತೆ ಹಂಚಿಕೊಳ್ಳುವಷ್ಟು ಅವರಿಗೆ ಸ್ವಾತಂತ್ರ್ಯವೂ ಇರುವುದಿಲ್ಲ. ಅದೂ ಅಲ್ಲದೇ ನೀವಿಬ್ಬರೂ ಇನ್ನೂ ಓದುತ್ತಿರುವವರು. ಮದುವೆಯಾಗಲು ಇನ್ನೂ ಕೆಲವು ವರ್ಷಗಳೇ ಇವೆಯಾದ್ದರಿಂದ ಈಗಲೇ ನಿಮ್ಮ ಪ್ರೀತಿಯ ವಿಷಯ ಜಗಜ್ಜಾಹಿರು ಮಾಡುವ ಗಡಿಬಿಡಿ ಇಲ್ಲ ಅಂತ ಅವನು ತಿಳಿದಿರಬಹುದು. ನಿಮಗೆ ಅವನ ಮೇಲೆ ಭರವಸೆ ಇದ್ದರೆ ನಿಮ್ಮ ಓದು ಮುಗಿದು ಉದ್ಯೋಗ ಹಿಡಿಯುವವರೆಗೂ ತಾಳ್ಮೆಯಿಂದ ಕಾಯಿರಿ. ಒಮ್ಮೆ ಅವನು ದುಡಿಯಲು ಪ್ರಾರಂಭಿಸಿದ ನಂತರ, ಅಲ್ಲಿಯವರೆಗೂ ನಿಮ್ಮ ನಡುವಿನ ಸಂಬಂಧ ಇದೇ ರೀತಿ ಮುಂದುವರಿದರೆ ಆಗ ನಿಮ್ಮನ್ನು ಅವನ ಮನೆಯವರಿಗೆ ಪರಿಚಯಿಸುವಂತೆ ಒತ್ತಾಯಿಸಬಹುದು. ನೀವೂ ಅಷ್ಟೇ, ಪ್ರೀತಿಸುತ್ತಿದ್ದೀರಿ ಅಂತ ಯಾವಾಗಲೂ ಅದೇ ಗುಂಗಿನಲ್ಲಿ ಇರದಿರಿ. ಅತಿಯಾದ ಸಲಿಗೆಯೂ ಬೇಡ. ಸೆಕ್ಸ್ ಸಂಬಂಧವಂತೂ ಖಂಡಿತಾ ಸಲ್ಲ. ನಿಮ್ಮ ಈಗಿನ ಕರ್ತವ್ಯದ ಬಗ್ಗೆಯೂ ಗಮನ ಇರಲಿ. ಜಾಸ್ತಿ ಸೆಂಟಿಮೆಂಟಲ್ ಆಗದೇ ಕಾಲಕ್ಕೇ ಎಲ್ಲವನ್ನೂ ಬಿಡುವುದು ಉತ್ತಮ.