ಬೈಕಂಪಾಡಿ ಕೈಗಾರಿಕಾ ವಲಯ ರಸ್ತೆ ಬಗ್ಗೆ ಯಾಕಿಷ್ಟು ನಿರ್ಲಕ್ಷ

ಮಂಗಳೂರಿನಲ್ಲಿರುವ ಪ್ರಮುಖ ಇಂಡಸ್ಟ್ರಿ ವಲಯವೆಂದರೆ ಬೈಕಂಪಾಡಿ ಕೈಗಾರಿಕಾ ವಲಯ. ಆದರೆ ಆ ರಸ್ತೆ ನೋಡಿದರೆ ಹಳ್ಳಿಗಾಡಿನ ಒಳರಸ್ತೆಗಳೂ ಅದಕ್ಕಿಂತ ಉತ್ತಮವಾಗಿರುತ್ತದೆ. ಸಾವಿರಾರು ಜನರು ಪ್ರತಿನಿತ್ಯ ಉಪಯೋಗಿಸುವ ಈ ರಸ್ತೆ ಜನಪ್ರತಿನಿಧಿಗಳಿಗೆ ಮುಖ್ಯವೇ ಅಲ್ಲವಾಗಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ದೀಪಕ್ ಪೆಟ್ರೋಲ್ ಎದುರುಗಡೆಯಿಂದ ಇಂಡಸ್ಟ್ರಿ ವಲಯಕ್ಕೆ ಹೊಗುವ ರಸ್ತೆ ಕೆಟ್ಟು ವರ್ಷಗಳೇ ಕಳೆದವು. ಇನ್ನು ಪೋಸ್ಟ್ ಆಫೀಸ್, ವಿಜಯಾ ಬ್ಯಾಂಕ್ ಕಡೆಯಿಂದ ಇಂಡಸ್ಟ್ರಿ ವಲಯಕ್ಕೆ ಹೋಗುವ ರಸ್ತೆಯಂತೂ ಕೇಳುವುದೇ ಬೇಡ. ಆಶ್ಚರ್ಯವೆಂದರೆ ಕೆನರಾ ಸಣ್ಣ ಕೈಗಾರಿಕಾ ಆಸೋಸಿಯೇಷನ್ ಆಫೀಸ್ ಎದುರುಗಡೆಯೇ ರಸ್ತೆ ಎಕ್ಕುಟ್ಟಿಹೋಗಿದೆ. ಆದರೂ ಅದರ ಬಗ್ಗೆ ಕೇಳುವವರೇ ಇಲ್ಲವಾಗಿದೆ
ಕಳೆದ ವಾರ ನನ್ನ ಮಗನನ್ನು ಕೂರಿಸಿಕೊಂಡು ಸ್ಕೂಟರಿನಲ್ಲಿ ಹೋಗುವಾಗ ಎದುರುಗಡೆ ಲೋಡು ತುಂಬಿದ ಲಾರಿ ಬಂತೆಂದು ಸ್ವಲ್ಪ ಸೈಡಿಗೆ ಹೋಗಲು ಪ್ರಯತ್ನಿಸಿದಾಗ ಸ್ಕೂಟರ್ ಸ್ಕಿಡ್ಡಾಗಿ ನಾನು ಮಗ ಇಬ್ಬರೂ ಕೆಳಗುರುಳಿದೆವು. ದೇವರ ದಯೆಯಿಂದ ಚಿಕ್ಕ ಪುಟ್ಟ ಗಾಯಗಳಾದರೂ ಪ್ರಾಣಾಪಾಯದಿಂದ ಪಾರಾದೆವು
ಚಿಂತೆಯ ವಿಷಯೆವೆಂದರೆ ಈಗಲೇ ಹೀಗಾದರೆ ಇನ್ನು ಮಳೆಗಾಲದಲ್ಲಿ ಆ ರಸ್ತೆಯಲ್ಲಿ ಹೋಗುವುದೇ ದುಸ್ತರ. ಹೊಂಡ ಯಾವುದು ರಸ್ತೆ ಯಾವುದು, ಎಂದು ಗೊತ್ತಾಗದೇ ಗಾಡಿ ಹೊಂಡಕ್ಕಿಳಿದರೆ ಸ್ಕೂಟರೇನು ಸಣ್ಣ ಕಾರೂ ಪಲ್ಟಿ ಹೊಡೆಯುವುದು ಗ್ಯಾರಂಟಿ. ಕೂಡಲೇ ಸಂಬಂಧಪಟ್ಟವರು ಆದ್ಯತೆ ಮೇರೆಗೆ ರಸ್ತೆ ದುರಸ್ತಿ ಮಾಡಬೇಕೆನ್ನುವುದು ಕಳಕಳಿಯ ವಿನಂತಿ

  • ಶಂಕರ ಪೂಜಾರಿ
    ಬೈಕಂಪಾಡಿ