ಕಮ್ಯೂನಿಸ್ಟರಿಗೆ ಬಾರಿಸುವ ತಾಕತ್ತು ಇದೆಯೆಂದು ಹೇಳಲು ನಳಿನ್ ಕೇರಳಕ್ಕೆ ಹೋಗಬೇಕಾಗಿತ್ತಾ

ಜನವರಿ 18ರ ಕರಾವಳಿ ಅಲೆಯ ಮುಖಪುಟದ ವರದಿ ಓದಿ ಈ ಪ್ರಶ್ನೆ ತನ್ನನ್ನು ತಾನೇ ಕೇಳುವಂತಾಯಿತು.
ಇಷ್ಟಕ್ಕೂ ಕೇರಳದಲ್ಲಿ ಬಿಜೆಪಿಯವರಿಗೆ ಬಂದಿರುವ ದೊಡ್ಡ ರೋಗವಾದರೂ ಏನೆಂದು ತಿಳಿಯದಾಗಿದೆ.

ಕಮ್ಯೂನಿಸ್ಟರು ದೇಶದ ಸಮಸ್ತ ದುಡಿಯುವ ವರ್ಗದ, ರೈತಾಪಿ ವರ್ಗದ ಪರವಾಗಿ ನಿಂತು, ಅವರ ಏಳಿಗೆಯನ್ನು ಬಯಸುವ ತತ್ವಾಧಾರಿತ ಪಕ್ಷವಾಗಿದೆ. ಆದರೆ ಬಿಜೆಪಿಗೆ ಅಂತದ್ದೇನಿದೆ ? ಆ ಪಕ್ಷದ ಹುಟ್ಟಿಗೆ ಕಾರಣವಾದ ಆರೆಸ್ಸೆಸ್ಸ್ ಧೋರಣೆಯೇ ಇಡೀ ದೇಶದಲ್ಲಿ ಜನರ ನಡುವೆ ವೈಷಮ್ಯ ಹುಟ್ಟಿಸಿ ದ್ವೇಷ ಸಾಧನೆಯ ಮೂಲಕ ಪಕ್ಷ ಕಟ್ಟುವಂತಹದ್ದು. ದ್ವೇಷಾಸೂಯೆ ಮತ್ತದರ ಜೊತೆಗೆ ಒಂದಷ್ಟು ದೇವರ ನಾಮ ಇಲ್ಲವಾದರೆ ಅವರಿಗೆ ಪಕ್ಷ ಕಟ್ಟಲು ಬೇರೆ ದಾರಿಯಿಲ್ಲ. ಕೊಲೆ, ಹಿಂಸೆ, ವೈರತ್ವ ಹೊರತುಪಡಿಸಿ ಸಂಘಟನೆ ಮತ್ತು ಪಕ್ಷವನ್ನು ಎಲ್ಲಿಯಾದರೂ ಬೆಳೆಸಿದ್ದಾರೆಯೇ ? ಯೋಚಿಸಿ ಹೇಳುವವರಾದರೆ ಇಲ್ಲವೆಂದೇ ಉತ್ತರವಾಗಿರುತ್ತದೆ.
ಬೆಳ್ಳಂಬೆಳಿಗ್ಗೆ ಎಬ್ಬಿಸಿ ಅಪ್ರಾಪ್ತ ಬಾಲಕರನ್ನು ಒಂದೆಡೆ ಸೇರಿಸಿ `ಮೈ ಶಿವಾಜಿ ಹೂಂ, ಮೈ ಔರಂಗಜೇಬ ಹೂಂ’ ಅಂತ ತಮ್ಮ ತಮ್ಮೊಳಗೆ ಯುದ್ಧ ಮಾಡುವ ರೀತಿಯಲ್ಲಿ ಮಕ್ಕಳನ್ನು ಆಟವಾಡಿಸಿ ಚಿಕ್ಕಂದಿನಲ್ಲೇ ದ್ವೇಷದ ವಿಷಬೀಜ ಬಿತ್ತುವ ಮೂಲಕ ದೇಶಾದ್ಯಂತ ಕಟ್ಟಿದ ಆರೆಸ್ಸೆಸ್ಸ್ಸಿನಂತಹ ಸಂಘಟನೆಯಲ್ಲಿದ್ದುಕೊಂಡು ಬೇರೆ ಪಕ್ಷದವರನ್ನು ದಾಳಿ ನಡೆಸುವವರೆಂದು ಹಣೆಪಟ್ಟಿ ಕಟ್ಟಲು ಹೊರಟರೆ ನಳಿನ್ ಮಾತನ್ನು ನಂಬುವುದಾದರೂ ಹೇಗೆ ?
ಆರೆಸ್ಸೆಸ್ಸನ್ನು ಕಟ್ಟಿ ಬೆಳೆಸಿದ ಮುತ್ಸದ್ದಿಯೊಬ್ಬರಾದ ಎ ಕೆ ಸುಬ್ಬಯ್ಯರವರು ಆ ವಿಷ ವರ್ತುಲದಿಂದ ಹೊರಬಂದು ಬರೆದಿರುವ “ಆರೆಸ್ಸೆಸ್ಸ್ ಒಂದು ವಿಷ ವೃಕ್ಷ” ಎಂಬ ತಲೆಬರಹದ ಪುಸ್ತಕದಲ್ಲಿ ಒಂದು ಸುಳ್ಳನ್ನು ನೂರು ಸಲ ಹೇಳಿ ಸತ್ಯವಾಗಿಸುವ ಗೋಬೆಲ್ ತಂತ್ರವನ್ನು ಆರೆಸ್ಸೆಸ್ ಕಾರ್ಯಕರ್ತರ ತಲೆಯಲ್ಲಿ ಹೇಗೆ ತುಂಬಲಾಗುತ್ತದೆ ಎಂದು ವಿವರಿಸಿದ್ದಾರೆ.
ಫೈಜಾಬಾದಿನಲ್ಲಿನ ಬಾಬ್ರಿ ಮಸೀದಿಯನ್ನು ಒಡೆದು ಅಯೋಧ್ಯೆ ರಾಮನ ಹೆಸರು ಹೇಳುವ ಮೊದಲು ದೇಶದಲ್ಲೇ ನಗಣ್ಯವಾಗಿದ್ದ ನಳಿನರ ಪಕ್ಷವು ಒಮ್ಮಿಂದೊಮ್ಮೆಗೆ ತನ್ನ ಸಂಸದರ, ಶಾಸಕರ ಸಂಖ್ಯೆಗಳನ್ನು ಹೆಚ್ಚಿಸಿರುವುದು ಒಬ್ಬರನೊಬ್ಬರು ಕತ್ತಿ, ಚೂರಿ, ತ್ರಿಶೂಲ ಹಿಡಿದು ಕೊಲೆ ಮಾಡಿಸಿದ ಮೂಲಕವೇ.
2002ರಲ್ಲಿ ಗುಜರಾತ್ ರಾಜ್ಯದಲ್ಲಿ ಭೀಕರತೆ ಕಂಡಿದ್ದು ಜನರ ಸ್ನೇಹಮಿಲನದಿಂದಲ್ಲ. ಕೋಮು ದ್ವೇಷದ ಹೆಸರಿನಲ್ಲಿ ರಕ್ತಮಾಂಸದ ಮುದ್ದೆಗಳನ್ನು ಕತ್ತಿಯ ಮೊನೆಯಲ್ಲಿ ತೂಗಿ ಕೇಕೆ ಹಾಕಿದ್ದರಿಂದ.
ಸಹೋದರಿ ರಾಜ್ಯಗಳೆಂದೇ ಹೆಸರಾಗಿರುವ ಈಶಾನ್ಯ ಭಾರತದ ರಾಜ್ಯಗಳಲ್ಲಿ ಇತ್ತೀಚೆಗೆ ಕೋಮು ದ್ವೇಷದ ಕಿಚ್ಚು ಹಚ್ಚಿದ್ದು ನಿಮ್ಮ ಪಕ್ಷದ ಅಧ್ಯಕ್ಷರಾದ ಅಮಿತ್‍ಶಾರವರ ಭೇಟಿಯ ನಂತರವೇ.
ಕಮ್ಯೂನಿಸ್ಟ್ ಬೇರೂರಿರುವ ಕೇರಳದಲ್ಲಿ ಧರ್ಮದ ಹೆಸರಿನಲ್ಲಿ ಈ ಪ್ರಯೋಗವನ್ನು ನಡೆಸಲು ಸಾಧ್ಯವಾಗದಿರುವುದರಿಂದ ಬಿಜೆಪಿಯು ತನ್ನ ರಾಜಕೀಯ ದ್ವೇಷವನ್ನು ಹರಡಲು ಆರಂಭಿಸಿ ಕೆಲವು ವರ್ಷಗಳೇ ಸಂದವು.
ಕಳೆದ ಐದು ವರ್ಷಗಳ ಅವಧಿಯಲ್ಲಿ ಕೇರಳ ರಾಜ್ಯದಲ್ಲಿ 480ಕ್ಕೂ ಅಧಿಕ ಸಿಪಿಐಎಂ ಕಾರ್ಯಕರ್ತರು ಆರೆಸ್ಸೆಸ್ಸ್ ಹಿಂಸೆಗೆ ಬಲಿಯಾಗಿದ್ದಾರೆ. ಕಣ್ಣೂರು ಜಿಲ್ಲೆಯೊಂದರಲ್ಲೆ ಅತ್ಯಧಿಕವಾಗಿ 87 ಸಿಪಿಐಎಂ ಕಾರ್ಯಕರ್ತರು ಬಿಜೆಪಿ ದ್ವೇಷಕ್ಕೆ ಬಲಿಯಾಗಿದ್ದಾರೆ. ಈಗಲೂ ಅಸಹನೀಯವಾದ ಪ್ಯಾಸಿಸ್ಟ್ ರೀತಿಯ ವರ್ತನೆ ಅಲ್ಲಿನ ಬಿಜೆಪಿ ಕಾರ್ಯಕರ್ತರದ್ದಾಗಿದೆ.
ಇದನ್ನೆಲ್ಲಾ ಮರೆ ಮಾಚಿಸಿ, ಕೇರಳದಲ್ಲಿ ಸಿಪಿಐಎಂ ಕಾರ್ಯಕರ್ತರಿಂದಲೇ ತನ್ನ ಪಕ್ಷದವರ ಮೇಲೆ ದಾಳಿಯಾಗುತ್ತಿದೆ ಎಂದು ಹೇಳಿದರೆ ಕೇರಳಿಗರನ್ನು ಹುಂಬರೆಂದು ತಿಳಿದಂತಾದೀತು ನಳಿನರೇ. ಸುರೇಂದ್ರನ್ ಅವರಿಗೆ ಸತ್ಯ ಸಂಗತಿ ಏನೆಂಬುದು ತಿಳಿದಿರುವುದರಿಂದಲೇ ನಿಮ್ಮ ಕನ್ನಡದ ಭಾಷಣವನ್ನು ಅವರು ಮಲಯಾಳಕ್ಕೆ ತರ್ಜುಮೆ ಮಾಡುವಾಗ ಎಡವಟ್ಟಾಗಿರುವುದು ಎಂಬುದನ್ನು ಕೇರಳಿಗರು ಅರ್ಥಮಾಡಿಕೊಂಡಿದ್ದಾರೆ.
ಬಾರಿಸು ಕನ್ನಡ ಡಿಂಡಿಮವಾ ಎಂದು ಕೇರಳದಲ್ಲಿ ಹೇಳಿದ್ದರೆ ಕನ್ನಡಿಗರಿಗಂತೂ ಖುಷಿಯಾಗುತ್ತಿತ್ತು. ಆದರೆ ನೀವು ಕನ್ನಡ ಭಾಷೆಯನ್ನು ಬಳಸಿ ಬಾರಿಸು ಕೆನ್ನೆಗೆ ಢಿಂ ಢಿಂ ಎಂದಿರಲ್ಲಾ… ತುಂಬಾ ಬೇಸರವಾಗಿದೆ

  • ಬಾಬು ಪಿಲಾರ್  ತೊಕ್ಕೊಟ್ಟು