ಗಂಡನಿಗೆ ಈ ರೀತಿಯ ನಾಚಿಕೆ ಯಾಕೆ?

ಪ್ರ : ಅವರನ್ನು ನಾನು ಎರಡು ವರ್ಷ ಪ್ರೀತಿಸಿದ ನಂತರ ಮದುವೆಯಾಗಿದ್ದು. ಮದುವೆಗಿಂತ ಮೊದಲು ಅವರು ನನ್ನ ಜೊತೆ ತುಂಬಾ ಆತ್ಮೀಯವಾಗಿದ್ದರೂ ಒಮ್ಮೆಯೂ ಅವರು ನನ್ನನ್ನು ದೈಹಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿರಲಿಲ್ಲ. ಉಳಿದ ನನ್ನ ಗೆಳೆಯರು ಸ್ವಲ್ಪ ಫ್ರೆಂಡ್ಲಿಯಿದ್ದ ತಕ್ಷಣ ಮುಂದುವರಿಯಲು ನೋಡುತ್ತಿದ್ದರು. ಆದರೆ ಇವರ ಈ ಸಂಯಮ ನನಗೆ ಇಷ್ಟವಾಗಿಯೇ ಇವರನ್ನು ಮೆಚ್ಚಿದ್ದೆ. ಈಗ ಮದುವೆಯಾಗಿ ಆರು ತಿಂಗಳಾಯಿತು. ಇನ್ನೂ ಅವರು ನನ್ನ ಜೊತೆ ಸೇರಿಲ್ಲ. ಪ್ರೀತಿಯ ಮಾತಾಡುತ್ತಾರೆ, ಹೊರಗಡೆ ಸುತ್ತುತ್ತಾರೆ, ಹೆಗಲ ಮೇಲೆ ಕೈಹಾಕಿ ಫೋಟೋಗೆ ಫೋಸ್ ಕೊಡುತ್ತಾರೆ. ಆದರೆ ಬೆಡ್‍ನಲ್ಲಿ ಸಂಕೋಚ ತೋರಿಸುತ್ತಾರೆ. ನಾನೇ ಅವರನ್ನು ಅಪ್ಪಿಹಿಡಿದು ಮಲಗಿದರೂ ಮುಂದುವರಿಯುವುದಿಲ್ಲ. ಕೆನ್ನೆಗೆ ಮುತ್ತಿಟ್ಟು ಮಲಗುತ್ತಾರೆ. ನನಗೂ ಆ ವಿಷಯದಲ್ಲಿ ಅಡ್ವಾನ್ಸ್ ಮಾಡಲು ಸಂಕೋಚವೆನಿಸುತ್ತದೆ. ನಾನು ಮನಸಾರೆ ಪ್ರೀತಿಸಿ ಮದುವೆಯಾದವರೊಡನೆ ನನಗೆಲ್ಲ ವನ್ನೂ ಹಂಚಿಕೊಳ್ಳಬೇಕೆನ್ನುವ ತವಕವಿದೆ. ಅವರಿಗ್ಯಾಕೆ ಅಷ್ಟೊಂದು ಹಿಂಜರಿಕೆಯಿರಬಹುದು? 

: ಅವರಿಗೆ ಆತ್ಮವಿಶ್ವಾಸದ ಕೊರತೆಯಿರಬಹುದು ಅಂತ ನನ್ನ ಭಾವನೆ. ಕೆಲವರಿಗೆ ಹೆಂಡತಿ ತನಗಿಂತ ಎಲ್ಲ ವಿಷಯದಲ್ಲಿ ಮುಂದಿದ್ದಾಳೆ ಅನ್ನುವ ಭಾವನೆಯಿದ್ದರೆ ಸೆಕ್ಸ್‍ನಲ್ಲಿಯೂ ಅವರಿಗೇನೋ ಹಿಂಜರಿಕೆಯಿರುವ ಪ್ರಮೇಯ ಇರುತ್ತದೆ. ಆದರೆ ನೀವಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟೇ ಮದುವೆಯಾಗಿದ್ದರಿಂದ ಆ ರೀತಿಯ ಕೀಳರಿಮೆ ಅವರಲ್ಲಿ ಇರಲಿಕ್ಕಿಲ್ಲ. ಕೆಲವರಿಗೆ ಕೌಟುಂಬಿಕ ಅಥವಾ ಇನ್ಯಾವುದೋ ಟೆನ್ಷನ್ ಅತಿಯಾಗಿದ್ದರೆ ಸೆಕ್ಸ್ ಬೇಡ ಅನಿಸಬಹುದು. ಅಥವಾ ಸೆಕ್ಸ್‍ನಲ್ಲಿ ಅತೀ ಉತ್ಸಾಹ ತೋರುವ ಹುಡುಗರು ನಿಮಗಿಷ್ಟವಾಗುತ್ತಿರಲಿಲ್ಲ ಎನ್ನುವುದು ಅವರಿಗೆ ಗೊತ್ತಿರುವುದರಿಂದ ಆ ವಿಷಯದಲ್ಲಿ ಇನ್ನೂ ಸಂಕೋಚ ತೋರಿಸುತ್ತಿರಲೂಬಹುದು. ನೀವೇ ಹಗ್ಗಿಂಗ್, ಕಿಸ್ಸಿಂಗ್ ಮೂಲಕ ಅವರನ್ನು ಅದಕ್ಕೆ ಉತ್ತೇಜಿಸಿ. ನಿಮ್ಮ ಗಂಡನ ಜೊತೆ ನೀವು ಸುಖಪಡಲು ಸಂಕೋಚ ತೋರಿಸಬೇಡಿ. ಅವರನ್ನು ನೀವು ಬಯಸುತ್ತಿದ್ದೀರಿ ಎನ್ನುವ ಸಂದೇಶ ಕೊಡಿ. ಅವರಿಗೆ ದೈಹಿಕವಾಗಿ ಏನಾದರೂ ದೌರ್ಬಲ್ಯವಿದೆಯಾ ಎನ್ನುವ ಕಡೆಯೂ ಗಮನಹರಿಸಿ. ಅವರೊಡನೆ ಎಲ್ಲ ವಿಷಯದಲ್ಲೂ ಮುಕ್ತವಾಗಿ ಮಾತಾಡಿ ಮೊದಲು ಅವರ ಈ ರೀತಿಯ ವರ್ತನೆಗೆ ಕಾರಣ ತಿಳಿದುಕೊಳ್ಳಿ. ಅಗತ್ಯವಿದ್ದರೆ ಲೈಂಗಿಕ ತಜ್ಞರನ್ನೂ ಭೇಟಿಯಾಗಿ.