ಅವಳಿಗ್ಯಾಕೆ ಆ ರೀತಿ ಬಿಗುಮಾನ?

ಪ್ರ : ಅವಳು ನನಗೆ ಪಿಯುಸಿಯಿಂದಲೂ ಫ್ರೆಂಡ್. ಕಾಲೇಜು ಮುಗಿಯುವ ಸಮಯದಲ್ಲಿ ಇಬ್ಬರೂ ಗಾಢವಾಗಿ ಪ್ರೀತಿಸುತ್ತಿದ್ದೆವು. ನಾವು ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರೂ ನಮ್ಮ ಮಧ್ಯೆ ಆಗಾಗ ಚಿಕ್ಕಪುಟ್ಟ ಕ್ಲಾಶಸ್ ಆಗ್ತಾನೇ ಇತ್ತು. ಅದಕ್ಕೆ ಮುಖ್ಯ ಕಾರಣ ನನ್ನ ಪೊಸೆಸಿವ್‍ನೆಸ್. ಅವಳು ನನಗೇ ಪ್ರಾಮುಖ್ಯತೆ ಕೊಡಬೇಕು ಅನ್ನುವ ಹಠ ನನ್ನದಾಗಿತ್ತು. ಅವಳು ಯಾವುದೇ ಕೆಲಸ ಮಾಡುತ್ತಿದ್ದರೂ ನಾನು ಕರೆದಾಗ ಅವಳು ಅದನ್ನೆಲ್ಲ ಬಿಟ್ಟು ಬರಲೇಬೇಕು ಅನ್ನುವುದು ತಾಕೀತು. ನನ್ನ ಕರೆ ಬಂದರೆ ಅವಳು ಯಾರ ಜೊತೆ ಮಾತಾಡುತ್ತಿದ್ದರೂ ಕಟ್ ಮಾಡಿ ನನ್ನ ಕರೆಯನ್ನೇ ರಿಸೀವ್ ಮಾಡದಿದ್ದರೆ ಆದಿನ ಅವಳ ಜನ್ಮ ಜಾಲಾಡಿಬಿಡುತ್ತಿದ್ದೆ. ಅವಳಿಗೆ ಇಂತಹ ವಿಷಯದಲ್ಲಿ ನನ್ನ ಬಗ್ಗೆ ಅಸಮಾಧಾನ ಇದ್ದು ನನ್ನ ಜೊತೆ ಕೆಲವು ಬಾರಿ ಜಗಳವಾಡಿದ್ದರೂ ನನ್ನ ಮೇಲಿನ ಪ್ರೀತಿ ಅವಳಿಗೆ ಕಡಿಮೆಯಾಗಿರಲಿಲ್ಲ. ಆದರೆ ಆ ಒಂದು ದಿನದ ನನ್ನ ಅತಿರೇಕ ಅವಳನ್ನು ನನ್ನಿಂದಲೇ ದೂರಹೋಗುವಂತೆ ಮಾಡಿದೆ. ಅಂದು ಅವಳು ತನ್ನ ಅಜ್ಜನಿಗೆ ಹುಶಾರಿಲ್ಲ ಅಂತ ಹೇಳಿ ಊರಿಗೆ ಹೋಗಿದ್ದಳು. ನಾನು ಆ ದಿನ ಸಂಜೆ ಎಷ್ಟು ಬಾರಿ ಫೋನ್ ಮಾಡಿದರೂ ಅವಳು ರಿಸೀವ್ ಮಾಡಿಲ್ಲ. ಮರುದಿನ ಅವಳು ಊರಿಗೆ ಮರಳಿದ ವಿಷಯ ಗೊತ್ತಾಗಿ ಅವಳ ರೂಮಿಗೆ ಹೋಗಿ ಅವಳಿಗೆ ಮಾತಾಡಲೂ ಅವಕಾಶ ಕೊಡದೇ ಮನಸ್ವೇಚ್ಛೆ ಹಾರಾಡಿ ವಾಪಾಸಾದೆ. ಕೊನೆಗೆ ಗೊತ್ತಾಗಿದ್ದು ಅಂದು ಅವಳ ಅಜ್ಜ ತೀರಿಹೋಗಿದ್ದರಿಂದ ಅವಳು ಅವರ ಅಂತ್ಯಸಂಸ್ಕಾರದಲ್ಲಿ ತೊಡಗಿದ್ದಳು ಅಂತ. ಕೊನೆಗೆ ನನ್ನ ಬಗ್ಗೆಯೇ ನನಗೆ ಕೋಪ ಬಂದು ಅವಳ ಹತ್ತಿರ ಹೋಗಿ ಕ್ಷಮೆ ಕೇಳಲು ಹೋದಾಗ ಅವಳು ಬಾಗಿಲನ್ನೇ ತೆಗೆಯಲಿಲ್ಲ. ಅಂದಿನಿಂದ ಅವಳು ನನ್ನ ಮುಖವನ್ನೇ ನೋಡುತ್ತಿಲ್ಲ. ಕಾಲ್ ಮಾಡಿದರೆ ಫೋನೇ ರಿಸೀವ್ ಮಾಡುತ್ತಿಲ್ಲ. ನಾನು ಅಂತಹ ಕ್ಷಮಿಸಲಾರದ ತಪ್ಪು ಮಾಡಿದೆನೇ? ಅವಳು ಆ ರೀತಿ ನನ್ನ ಬಗ್ಗೆ ಅಸಡ್ಡೆ ತೋರುವುದು ಸರಿಯೇ? ನನಗೂ ಸ್ವಾಭಿಮಾನ ಇಲ್ಲವಾ? ಆದರೂ ಆಕೆ ಮಾತಾಡದಿರುವುದನ್ನು ಸಹಿಸಲು ಆಗುತ್ತಿಲ್ಲ. ಆಕೆ ನನಗೆ ಬೇಕು. ಏನು ಮಾಡಲಿ?

: ಮನುಷ್ಯರಿಗೆ ಸ್ವಾಭಿಮಾನ ಇರಬೇಕು, ನಿಜ. ಆದರೆ ನಿಮಗಿರುವುದು ದುರಭಿಮಾನ. ನೀವು ಅವಳನ್ನು ಪ್ರೀತಿಸುತ್ತಿರಬಹುದು, ಆದರೆ ಆಕೆಗೆ ತನ್ನದೇ ಆದ ವ್ಯಕ್ತಿತ್ವವೇ ಇರಬಾರದಾ? ಪ್ರೀತಿಸುವವರಿಗೆ ಮೊದಲ ಪ್ರಯೋರಿಟಿ ಕೊಡಬೇಕು ಅನ್ನುವುದು ಸತ್ಯವಾದರೂ ನೀವೊಬ್ಬರೇ ಅಲ್ಲವಲ್ಲ ಅವಳ ಜೀವನದಲ್ಲಿ. ಆಕೆಯೇನು ಆಕಾಶದಿಂದ ಬಿದ್ದವಳಲ್ಲ. ನೀವು ಆಕೆಯ ಜೀವನದಲ್ಲಿ ಬರುವುದಕ್ಕಿಂತ ಮೊದಲೇ ಅವಳಿಗೆ ಒಂದು ಕುಟುಂಬವಿತ್ತು ಅನ್ನುವುದನ್ನು ಮರೆತುಬಿಟ್ಟಿರಾ? ಒಂದು ವೇಳೆ ಆ ಹುಡುಗಿ ತನ್ನ ಹೆತ್ತವರ ಹತ್ತಿರವೇ ಮಾತಾಡುತ್ತ್ತಿದ್ದರೂ ನಿಮ್ಮ ಕರೆ ಬಂತು ಅಂದಾಕ್ಷಣ ಅವರ ಕಾಲ್ ಕಟ್ ಮಾಡಿ ನಿಮಗೆ ಉತ್ತರಿಸಬೇಕಿತ್ತು ಅಂದರೆ ನೀವೇನು ಹಿಟ್ಲರ್ ಸಂತತಿಯವರಾ? ಅವಳು ಇಷ್ಟು ದಿನವಾದರೂ ನಿಮ್ಮಂತವರ ಜೊತೆ ಇದ್ದಿದ್ದೇ ಆಶ್ಚರ್ಯ. ಪ್ರೀತಿಸುತ್ತಿದ್ದೇನೆ ಅನ್ನುವ ಒಂದೇ ಕಾರಣಕ್ಕೆ ಅವಳು ನಿಮ್ಮ ಈ ಅತಿರೇಕವನ್ನು ಇಷ್ಟು ದಿನ ಸಹಿಸಿಕೊಂಡಿದ್ದಳು. ಆಕೆಯಿನ್ನೂ ನಿಮ್ಮ ಹೆಂಡತಿಯೂ ಆಗಿಲ್ಲ. ಈಗಲೇ ನಿಮ್ಮ ಈ ಜಬರ್‍ದಸ್ತು. ಆಕೆಯ ಅಜ್ಜನ ನಿಧನದ ಸಮಯದಲ್ಲೂ ನೀವು ಅವಳಿಗೆ ನೈತಿಕವಾಗಿ ಧೈರ್ಯ ತುಂಬುವ ಬದಲು ನೀವು ಕೂಗಾಡಿದ್ದು ಅವಳಿಗೆ ಇನ್ನು ಇಂತಹ ಮನುಷ್ಯನ ಜೊತೆ ಏಗುವುದು ಸಾಧ್ಯವಿಲ್ಲ ಅಂತ ನಿರ್ಣಾಯಕವಾಗಿ ಅನಿಸುವಂತೆ ಮಾಡಿತು. ಈಗಾದರೂ ನೀವು ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ಇನ್ನೊಬ್ಬರ ಬೇಕುಬೇಡಗಳಿಗೂ ಪ್ರಯೋರಿಟಿ ಕೊಡುವುದನ್ನು ಮೊದಲು ಕಲಿಯಿರಿ. ನೀವು ನೂರಕ್ಕೆ ನೂರು ಸುಧಾರಿಸಿದರೆ ಮಾತ್ರ ಆಕೆ ಬಳಿ ಹೋಗಿ ಬೇಷರತ್ ಕ್ಷಮೆಯಾಚಿಸಿ. ಅವಳು ಇಂದಲ್ಲ ನಾಳೆ ನಿಮ್ಮನ್ನು ಪುನಃ ಸ್ವೀಕರಿಸಬಹುದು.