ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ಅಧ್ಯಕ್ಷ ಷಾ ಕೋಪವೇಕೆ ?

ಕಪ್ಪು ಹಣ ಎಂಬುದು ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಅಥವಾ ನಿರ್ದಿಷ್ಟ ವ್ಯಕ್ತಿಗಳಿಗೆ ಸೀಮಿತವಾಗಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರದ ಪ್ರಭಾವಿಗಳ ಮೇಲಿನ ತನಿಖೆ ದಿನದಿಂದ ದಿನಕ್ಕೆ ಬಿಗಿಯಾಗಿರುತ್ತಿರುವ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೈವಾಡವಿದೆ ಎಂಬ ಮಾತು ಮಾತ್ರ ರಾಜಕೀಯ ವಲಯಗಳಲ್ಲಿ ದಟ್ಟವಾಗುತ್ತಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸ್ಕೆಚ್ ಹಾಕಿದ್ದಾರಾ ? ಹಾಗೆಂಬ ಅನುಮಾನಕ್ಕೆ ಪೂರಕವಾದ ಹಲವು ಬೆಳವಣಿಗೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದೆ.

ಇದಕ್ಕೇನು ಕಾರಣ ಅನ್ನುವುದನ್ನು ಹುಡುಕುತ್ತಾ ಹೋದರೆ ಕುತೂಹಲಕಾರಿ ಅಂಶ ಬಯಲಿಗೆ ಬರುತ್ತಿವೆ. ಮೊದಲನೆಯಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಿದ್ಧರಾಮಯ್ಯ ವಿರುದ್ಧ ಆಕ್ರೋಶಗೊಂಡಿರುವುದಕ್ಕೆ ಕಾರಣ ಇದೆ. ಕಳೆದ ನವೆಂಬರ್ 27ರಂದು ಬಿಜೆಪಿ ಓಬಿಸಿ ಸಮಾವೇಶ ನಡೆಯಿತಲ್ಲ ಈ ಸಮಾವೇಶಕ್ಕೆ  ಅಮಿತ್ ಷಾ ಬಂದಿದ್ದರು. ಹೀಗೆ ಬಂದವರು ಅಂದಿನ ಸಮಾವೇಶದಲ್ಲಿ ಸಿದ್ಧರಾಮಯ್ಯ ಸರಕಾರ ಭ್ರಷ್ಟ ಸರಕಾರ, ಇಂತಹ ಭ್ರಷ್ಟ ಸರಕಾರವನ್ನು ತೊಲಗಿಸಿ ಎಂದು ಸಮಾವೇಶದ ಮೂಲಕ ಕರೆ ನೀಡಿದ್ದರು. ಹೀಗೆ ಅಮಿತ್ ಷಾರ ಟೀಕೆಗೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇನ್ನಷ್ಟು ಕಟುವಾಗಿ ಪ್ರತಿಕ್ರಿಯಿಸಿ `ಅಮಿತ್ ಷಾ ಒಬ್ಬ ಕೊಲೆಗಡುಕ. ಕೇಂದ್ರದಲ್ಲಿ ಬಿಜೆಪಿ ಸರಕಾರ ಇಲ್ಲದೇ ಹೋಗಿದ್ದರೆ ಅವರು ಜೈಲಿನಲ್ಲಿರುತ್ತಿದ್ದರು. ಪಕ್ಕದಲ್ಲೇ ಜೈಲಿಗೆ ಹೋದ ಒಬ್ಬ ಕಡು ಭ್ರಷ್ಟನನ್ನಿಟ್ಟುಕೊಂಡು ಇವರು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದಿದ್ದರು. ಮೇಲ್ನೋಟಕ್ಕೆ ಗಮನಿಸಿದರೆ ಅಮಿತ್ ಷಾರ ಹೇಳಿಕೆಗೆ ಪ್ರತಿಯಾಗಿ ಸಿದ್ಧರಾಮಯ್ಯ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ನೀಡಿದರು ಅನ್ನಿಸುತ್ತದೆ. ಯಾವಾಗ ಈ ಬೆಳವಣಿಗೆಯಾಯಿತೋ ಅವತ್ತಿನಿಂದಲೇ ಐಟಿ, ಸಿಬಿಐ ಹಾಗೂ ಆರ್ಥಿಕ ಜಾರಿ ನಿರ್ದೇಶನಾಲಯ ಸಿದ್ಧರಾಮಯ್ಯ ಸರಕಾರದ ಪ್ರಭಾವಿಗಳ ವಿರುದ್ಧ ಬಿದ್ದವು.

ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿ ಚಿಕ್ಕರಾಯಪ್ಪ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿ ಜಯಚಂದ್ರ ವಿರುದ್ಧ ಆರಂಭವಾದ ಈ ದಾಳಿ ಇದೀಗ ಯಾವ ಮಟ್ಟಕ್ಕೆ ಮುಟ್ಟಿದೆ ಎಂದರೆ ತನಿಖೆಯ ಆಳಕ್ಕೆ ಇಳಿಯುತ್ತಿರುವ ತನಿಖಾ ಸಂಸ್ಥೆಗಳು ಹಲ ಮಂತ್ರಿಗಳು ಹಾಗೂ ಅಂತಿಮವಾಗಿ ಮುಖ್ಯಮಂತ್ರಿಗಳನ್ನು ಇದರಲ್ಲಿ ಸಿಲುಕಿ ಹಾಕಿಸುವಂತೆ ಕಾಣಿಸುತ್ತಿದೆ.

ಅಷ್ಟೇ ಅಲ್ಲ, ಈ ಮೂಲಕ ಮುಂದಿನ ಕೆಲ ದಿನಗಳಲ್ಲಿ ಸಿದ್ಧರಾಮಯ್ಯರ ನೇತೃತ್ವದ ಸರಕಾರ ಪರದಾಡುವಂತೆ ಮಾಡಲಿದೆ. ಇದು ಮೇಲ್ನೋಟಕ್ಕೆ ಕಾಣುವ ಲಕ್ಷಣಗಳು. ಕುತೂಹಲದ ಸಂಗತಿ ಎಂದರೆ ಕೇಂದ್ರದ ತನಿಖಾ ಸಂಸ್ಥೆಗಳು ಬೇರೆ ಯಾವ ರಾಜಕೀಯ ಪಕ್ಷದ ನಾಯಕರ ವಿರುದ್ಧವೂ ಇಷ್ಟು ಗಂಭೀರವಾಗಿ ತನಿಖೆ ನಡೆಸುತ್ತಿರುವ ಲಕ್ಷಣ ಕಂಡು ಬಂದಿಲ್ಲ.

ಕಪ್ಪು ಹಣ ಎಂಬುದು ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಅಥವಾ ನಿರ್ದಿಷ್ಟ ವ್ಯಕ್ತಿಗಳಿಗೆ ಸೀಮಿತವಾಗಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರದ ಪ್ರಭಾವಿಗಳ ಮೇಲಿನ ತನಿಖೆ ದಿನದಿಂದ ದಿನಕ್ಕೆ ಬಿಗಿಯಾಗಿರುತ್ತಿರುವ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೈವಾಡವಿದೆ ಎಂಬ ಮಾತು ಮಾತ್ರ ರಾಜಕೀಯ ವಲಯಗಳಲ್ಲಿ ದಟ್ಟವಾಗುತ್ತಲೇ ಇದೆ. ವಸ್ತುಸ್ಥಿತಿ ಎಂದರೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರವನ್ನು ದುರ್ಬಲಗೊಳಿಸಲು ಅಮಿತ್ ಷಾ ಈ ಹಿಂದೆಯೇ ಸ್ಕೆಚ್ ಹಾಕಲು ಶುರು ಮಾಡಿದ್ದÀರೂ ಫೆಬ್ರವರಿಯಲ್ಲಿ ನಡೆಯಲಿರುವ ಹಲವು ರಾಜ್ಯಗಳ ಅಸೆಂಬ್ಲಿ ಚುನಾವಣೆ ನಂತರ ದಿನ ನಿಗದಿ ಮಾಡಲು ತೀರ್ಮಾನ ಮಾಡಿದ್ದರು. ಪಕ್ಷದ ಕೆಲ ನಾಯಕರು ರಹಸ್ಯ ಮಾತುಕತೆಗಳಲ್ಲಿ ಹೇಳುವ ಹಾಗೆ, ಸರಕಾರದ ಹಲವು ಮಂತ್ರಿಗಳನ್ನು ಕೆಡಹುವ ಮೂಲಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರವನ್ನು ದುರ್ಬಲಗೊಳಿಸುವ ಅನಿವಾರ್ಯತೆ ಇದೆ ಎಂದು ಅಮಿತ್ ಷಾ ಪಕ್ಷದಲ್ಲಿ ನಡೆಯುವ ಆಂತರಿಕ ಚರ್ಚೆ ಸಂದರ್ಭ ಹೇಳುತ್ತಿದ್ದರಂತೆ.

ಆದರೆ ಇದೀಗ ಅವಧಿಗೂ ಮುನ್ನವೇ ಸಿದ್ಧರಾಮಯ್ಯ ಸರಕಾರದ ವಿರುದ್ಧ ಕಾರ್ಯಾಚರಣೆಗೆ ಇಳಿಯಲು ತನಿಖಾ ಸಂಸ್ಥೆಗಳಿಗೆ ಸೂಚನೆ ನೀಡಿದ್ದು ನವೆಂಬರ್ 27ರ ನಂತರ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಂದರೆ ಅಮಿತ್ ಷಾ ಹೇಳಿಕೆಗೆ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ ನಂತರದ ದಿನಗಳಲ್ಲಿ. ಹೀಗಾಗಿ ಇದು ಯಾವ ಹಂತಕ್ಕೆ ತಲುಪುತ್ತದೆ ಎಂದು ಹೇಳುವುದು ಕಷ್ಟ. ಒಟ್ಟಿನಲ್ಲಿ ಐಟಿ, ಸಿಬಿಐ ಹಾಗೂ ಆರ್ಥಿಕ ಜಾರಿ ನಿರ್ದೇಶನಾಲಯಗಳ ತನಿಖೆ ಗತಿ ಸಿದ್ಧರಾಮಯ್ಯ ಸರಕಾರಕ್ಕೆ ಮುಜುಗರ ಉಂಟು ಮಾಡಿರುವುದಂತೂ ಸುಳ್ಳಲ್ಲ.

ಒಟ್ಟಿನಲ್ಲಿ ರಾಜಕಾರಣದಲ್ಲಿ ಟೀಕೆ, ಪ್ರತಿ ಟೀಕೆ ಸಹಜ.  ಆದರೆ ಒಂದು ಟೀಕೆಗೆ ಎಂತಹ ಪ್ರತಿ ಟೀಕೆ ಬರುತ್ತದೆ ಎಂಬುದರ ಆಧಾರದ ಮೇಲೆ ದ್ವೇಷದ ತೀವ್ರತೆ ಹೆಚ್ಚುತ್ತದೆ.

ಅರ್ಥಾತ್, ರಾಜಕೀಯದಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಎಂಬುದೇ ನಡೆದೇ ನಡೆಯುತ್ತದೆ. ಆದರೆ ತಮ್ಮ ಟೀಕೆಗೆ ಮುಖ್ಯಮಂತ್ರಿ ಸಿದ್ಧರಾವiಯ್ಯ ಮಾಡಿದ ಪ್ರತಿ ಟೀಕೆಯಿಂದ ಸಿಟ್ಟುಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಲಕ್ಷಣಗಳು ಕಾಣುತ್ತಿಲ್ಲ. ಮುಂದೇನೋ ? ಕಾದು ನೋಡಬೇಕಿದೆ.

  • ಎಂ ಅವಿನಾಶ್ ಮಂಗಳೂರು