ಇಸ್ಲಾಮಿಕ್ ಬ್ಯಾಂಕಿಂಗ್ ಪರ ಆರ್ಬಿಐಗೆ ಏಕೆ ಒಲವು ?

ಇತ್ತೀಚೆಗೆ ಆರ್ ಬಿ ಐ ಇಸ್ಲಾಮಿಕ್ ಬ್ಯಾಂಕಿಂಗ್ ಸೌಲಭ್ಯವನ್ನು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಳವಡಿಸಲು ಶಿಫಾರಸು ಮಾಡಿದ್ದರೂ ಸಮರ್ಪಕವಾದ ಬೆಂಬಲ ದೊರೆಯದ ಕಾರಣ ನೆನೆಗುದಿಗೆ ಬಿದ್ದಿದೆ.

ಇಸ್ಲಾಮಿಕ್ ಬ್ಯಾಂಕಿಂಗ್ ಎಂದರೆ ಶರಿಯಾ ನಿಯಮಗಳ ಅನುಸಾರ ನಡೆಸಲಾಗುವ ಬ್ಯಾಂಕಿಂಗ್ ವ್ಯವಹಾರ.  ಇಸ್ಲಾಂ ಧರ್ಮದ ಅನುಸಾರ ಹಣಕ್ಕೆ ತನ್ನದೇ ಆದ ಅಂತರಿಕ ಮೌಲ್ಯ ಇರುವುದಿಲ್ಲ. ಹಾಗಾಗಿ ಹಣವನ್ನು ಲಾಭಕ್ಕೆ ಮಾರಿಕೊಳ್ಳುವುದು ಮತ್ತು ಶರಿಯಾ ನಿಯಮಗಳ ಪ್ರಕಾರ ಬಳಸುವುದಕ್ಕೆ ಮಾತ್ರ ಇಸ್ಲಾಂನಲ್ಲಿ ಸಮ್ಮತಿ ಇದೆ. ಹಣವನ್ನು ಬಾಡಿಗೆಗೆ ನೀಡುವಾಗ ಯಾವುದೇ ಶುಲ್ಕ ವಿಧಿಸಬಾರದೆಂದು ಶರಿಯಾದಲ್ಲಿ ಹೇಳಲಾಗಿದೆ. ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಹಣವನ್ನು ತೊಡಗಿಸುವುದನ್ನೂ ಇಸ್ಲಾಂ ಧರ್ಮ ಹರಾಮಿ ಎಂದು ಪರಿಗಣಿಸುತ್ತದೆ. ಈ ನಿಯಮಗಳನ್ನು ಖುರಾನ್‍ನಿಂದಲೇ ಪಡೆಯಲಾಗಿದೆ ಎನ್ನಲಾಗುತ್ತದೆ.

ಇಸ್ಲಾಮಿಕ್ ಬ್ಯಾಂಕಿನ ಮೊತ್ತ ಮೊದಲ ಯಶಸ್ವಿ ಪ್ರಯೋಗವನ್ನು ಮಲೇಷಿಯಾದ ತಾಬುಂಗ್ ಹಾಜಿ ಸಂಸ್ಥೆಯಲ್ಲಿ ಕಾಣಬಹುದು.  ಹಜ್ ಯಾತ್ರೆಗೆ ಬಡ್ಡಿ ರಹಿತ ಹಣ ಒದಗಿಸುವ ದೃಷ್ಟಿಯಿಂದ ಸ್ಥಾಪನೆಯಾದ ಈ ಸಂಸ್ಥೆ 1963ರಲ್ಲಿ 1281 ಠೇವಣಿದಾರರೊಂದಿಗೆ ಆರಂಭವಾಗಿತ್ತು. ಇಂದು 8,67,220 ಠೇವಣಿದಾರರು ಇದ್ದಾರೆ. ಒಂದು ಶತಕೋಟಿ ಮಲೇಷಿಯಾ ಡಾಲರ್ ಮೌಲ್ಯದ ಠೇವಣಿ ಸಂಗ್ರಹವಾಗಿದೆ. ಈ ಯಶಸ್ಸಿನ ನಂತರ ಈಜಿಪ್ಟಿನಲ್ಲಿ ಇಸ್ಲಾಮಿಕ್ ಬ್ಯಾಂಕುಗಳನ್ನು ಸ್ಥಾಪಿಸಲಾಯಿತು. 1972ರಲ್ಲಿ ಕೈರೋದ ನಸೀರ್ ಸೋಷಿಯಲ್ ಬ್ಯಾಂಕ್ ಸ್ಥಾಪನೆಯಾಗಿತ್ತು. ಇದೇ ದಶಕದಲ್ಲಿ ಅಂತಾರಾಷ್ಟ್ರೀಯ ಇಸ್ಲಾಮಿಕ್ ಬ್ಯಾಂಕ್ ಸ್ಥಾಪಿಸಲು ಸಲಹೆ ನೀಡಲಾಗಿತ್ತು.

ಇಸ್ಲಾಮಿಕ್ ಬ್ಯಾಂಕುಗಳು ಬಡ್ಡಿರಹಿತ ಬ್ಯಾಂಕಿಗ್ ವ್ಯವಹಾರ ನಡೆಸುತ್ತವೆ. ಇಸ್ಲಾಮಿಕ್ ಕಾನೂನಿನ ಪ್ರಕಾರ ರಿಬಾ ಅಥವಾ ಬಡ್ಡಿ ಎಂದರೆ ಅಧಿಕವಾಗಿರುವುದು ಎಂದರ್ಥ.

ಆದರೆ ಬಂಡವಾಳ ಹೂಡುವವನು ಮತ್ತೊಬ್ಬರ ಶ್ರಮದಿಂದ ತಾನು ಲಾಭ ಗಳಿಸಬಾರದು. ಹಾಗಾಗಿ ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಖಾತೆಗಳಿಗೆ ಬಡ್ಡಿ ನೀಡುವುದರ ಬದಲು ಲಾಭ ಅಥವಾ ನಷ್ಟದ ಖಾತೆಗಳನ್ನು ತೆರೆಯಲಾಗುತ್ತದೆ. ಈ ಸಂಗ್ರಹಿತ ಹಣವನ್ನು ಬಳಸಿ ಬ್ಯಾಂಕುಗಳು ಶರಿಯಾಗೆ ಅನುಸಾರವಾಗಿ ಸದುಪಯೋಗವಾಗುವಂತಹ ಚಟುವಟಿಕೆಗಳಲ್ಲಿ ತೊಡಗಿಸುತ್ತದೆ.   ಸಾರಾಯಿ, ಮಾದಕ ದ್ರವ್ಯಗಳು, ಯುದ್ಧ ಶಸ್ತ್ರಾಸ್ತ್ರಗಳ ಚಟುವಟಿಕೆಗಳಿಗೆ ಇಸ್ಲಾಮಿಕ್ ಬ್ಯಾಂಕುಗಳಲ್ಲಿ ಸ್ಥಾನವೇ ಇರುವುದಿಲ್ಲ. ಇಸ್ಲಾಮಿಕ್ ಬ್ಯಾಂಕುಗಳಲ್ಲಿ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವ ಹಲವಾರು ಸೌಕರ್ಯಗಳಿರುತ್ತವೆ.  ಮುದರ್‍ಬಾಹ್ (ಲಾಭ ಹಂಚಿಕೊಳ್ಳುವುದು -ಒಬ್ಬರು ಹಣಕಾಸು ನೀಡಿದರೆ ಮತ್ತೊಬ್ಬರು ತಮ್ಮ ಅನುಭವವನ್ನು ಹಂಚಿಕೊಳ್ಳುವ ಪದ್ಧತಿ) ಮುಷಾರಕ (ಇಬ್ಬರು ಗ್ರಾಹಕರು ಎಲ್ಲವನ್ನೂ ಸಮನಾಗಿ ನಿರ್ವಹಿಸುವುದು) ಮುರಾಬಹಾ (ವೆಚ್ಚ ಮತ್ತು ಲಾಭ ಸೇರಿದಂತೆ ಪರಿಗಣಿಸುವುದು) ಮತ್ತು ಇಜ್ರಾ (ಭೋಗ್ಯಕ್ಕೆ ನೀಡುವುದು).

ಇಸ್ಲಾಮಿಕ್ ಬ್ಯಾಂಕಿಂಗ್ ಪದ್ಧತಿಯನ್ನು ಸಂಪ್ರದಾಯವಾದಿಗಳು ಮತ್ತು ಆಧುನಿಕ ಬ್ಯಾಂಕರುಗಳು ಖಂಡಿಸುತ್ತಾರೆ. ಇಸ್ಲಾಮಿಕ್ ಬ್ಯಾಂಕ್ ಪರಿಕರಗಳಿಗೂ ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆ ಒದಗಿಸುವ ಸೌಕರ್ಯಗಳಿಗೂ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ತಜ್ಞರು ಹೇಳುತ್ತಾರೆ. ಆಧುನಿಕ ಇಸ್ಲಾಮಿಕ್ ಬ್ಯಾಂಕುಗಳು ಸಾಂಪ್ರದಾಯಿಕ ಪರಿಕರಗಳನ್ನು ಬಳಸಿಕೊಂಡೇ ತಮ್ಮ ವ್ಯವಹಾರ ನಡೆಸುವುದನ್ನು ಗಮನಿಸಬಹುದು.

ಮುದರ್ಬಾಹ್ ಎನ್ನಲಾಗುವ ಬ್ಯಾಂಕಿಂಗ್ ಸೌಲಭ್ಯ ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಾರ್ಟ್‍ಗೇಜ್ ಎಂದು ಕರೆಯಲ್ಪಡುತ್ತದೆ. ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉನ್ನತ ಮೌಲ್ಯಗಳ ಆಧಾರದ ಮೇಲೆ ರೂಪಿಸಲಾಗಿದೆಯಾದರೂ ಪ್ರಸ್ತುತ ಬ್ಯಾಂಕಿಂಗ್ ವ್ಯವಸ್ಥೆ ಈ ಮೌಲ್ಯಗಳನ್ನು ಉಳಿಸಿಕೊಂಡಿಲ್ಲ ಎಂದು ವಾದಿಸುವವರೂ ಇದ್ದಾರೆ.  ವಿಶ್ವ ಬ್ಯಾಂಕ್ ವರದಿಯೊಂದರ ಪ್ರಕಾರ ಸಾಂಪ್ರದಾಯಿಕ ಬ್ಯಾಂಕ್ ಮತ್ತು ಇಸ್ಲಾಮಿಕ್ ಬ್ಯಾಂಕ್ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಇಸ್ಲಾಮಿಕ್ ಬ್ಯಾಂಕಿಂಗ್ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಮತ್ತು ಇತರ ದೇಶಗಳಲ್ಲಿ ಪ್ರಚಲಿತವಾಗಿದ್ದರೂ ಹಲವಾರು ಇಸ್ಲಾಮೇತರ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಬ್ಯಾಂಕುಗಳಲ್ಲೂ ಸಹ ಇಸ್ಲಾಮಿಕ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಚೀನಾ, ಅಮೆರಿಕ, ಬ್ರಿಟನ್ ಮತ್ತು ಜರ್ಮನಿಯ ಬ್ಯಾಂಕುಗಳು ಇಸ್ಲಾಮಿಕ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುತ್ತಿವೆ. ಗ್ರೇಟ್ ಬ್ರಿಟನ್ನಿನಲ್ಲಿ ಶರಿಯಾ ಕಾನೂನು ಪಾಲಿಸುವ ಪ್ರಪ್ರಥಮ ಇಸ್ಲಾಮಿಕ್ ಬ್ಯಾಂಕ್  ಇಸ್ಲಾಮಿಕ್ ಬ್ಯಾಂಕ್ ಆಫ್ ಬ್ರಿಟನ್ 2014ರಲ್ಲಿ ಸುಕುಕ್ ಎಂದು ಗುರುತಿಸಲ್ಪಡುವ ಬಾಂಡುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

2008ರಲ್ಲಿ ಆರ್‍ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಸಲ್ಲಿಸಿದ ವರದಿಯೊಂದರಲ್ಲಿ ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅನುಸರಿಸುವಂತೆ ಶಿಫಾರಸು ಮಾಡಲಾಗಿತ್ತು. ಬ್ಯಾಂಕಿಂಗ್ ಸೇವೆಗಳನ್ನು ಬಳಸಿಕೊಳ್ಳಲು ಸಾಧ್ಯವಿಲ್ಲದವರಿಗೆ ಸೌಕರ್ಯಗಳನ್ನು ಒದಗಿಸಲು ಬಡ್ಡಿ ರಹಿತ ಬ್ಯಾಂಕುಗಳು ನೆರವಾಗುತ್ತವೆ ಎಂದು ರಘುರಾಮ್ ರಾಜನ್ ವರದಿಯಲ್ಲಿ ಹೇಳಲಾಗಿತ್ತು. ಭಾರತದ ಬ್ಯಾಂಕುಗಳಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುವುದರಿಂದ ಹಲವಾರು ಅನುಕೂಲತೆಗಳಿವೆ. ಭಾರತದ ಷೇರು ಮಾರುಕಟ್ಟೆಯಲ್ಲಿರುವ ಹಲವಾರು ಕಂಪನಿಗಳು ಶರಿಯಾ ಕಾನೂನು ಪಾಲಿಸುತ್ತವೆ.  ಹಾಗಾಗಿ ಇಸ್ಲಾಮಿಕ್ ಬ್ಯಾಂಕಿಂಗ್ ಪದ್ಧತಿಯನ್ನು ಪಾಲಿಸುವುದರ ಮೂಲಕ ಮುಸ್ಲಿಂ ಜನತೆಯನ್ನು ಬ್ಯಾಂಕಿಂಗ್ ಕ್ಷೇತ್ರದೆಡೆಗೆ ಆಕರ್ಷಿಸಲೂ ಸಾಧ್ಯವಿದೆ. ಇತ್ತೀಚೆಗೆ ಆರ್ ಬಿ ಐ ಇಸ್ಲಾಮಿಕ್ ಬ್ಯಾಂಕಿಂಗ್ ಸೌಲಭ್ಯವನ್ನು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಳವಡಿಸಲು ಶಿಫಾರಸು ಮಾಡಿದ್ದರೂ ಸಮರ್ಪಕವಾದ ಬೆಂಬಲ ದೊರೆಯದ ಕಾರಣ ನೆನೆಗುದಿಗೆ ಬಿದ್ದಿದೆ.

(ಸ್ಕ್ರಾಲ್.ಕಾಂ)