ಏಟಿಎಂ ವಂಚಕರನ್ನು ಹಿಡಿಯಲು ಪೊಲೀಸ್ ಇಲಾಖೆ ಏಕೆ ಅಸಮರ್ಥ?

ನಿನ್ನೆ ಮತ್ತೆ ನಮ್ಮ ನಗರದಲ್ಲಿಯೇ ಒಂದು ಮಹಿಳೆ ಹಿಂದಿವಾಲ ಏಟಿಎಮ್ ಕಾರ್ಡ್ ವಂಚಕರಿಂದ ಮೋಸ ಹೋಗಿ 25 ಸಾವಿರ ರೂಪಾಯಿ ಕಳೆದುಕೊಂಡಿದ್ದಾಳೆ. ಏಟಿಎಮ್ ಕಾರ್ಡ್ ವಂಚನೆ ಬಗ್ಗೆ ಪೋಲಿಸರು ಜನ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದರೂ ಜನರು ಮೋಸ ಹೋಗುತ್ತಿರುವುದು ದುರದೃಷ್ಟಕರ ಎಂದು ಪತ್ರಿಕೆಗಳವರು ಹೇಳುತ್ತಾರೆ. ಆದರೆ ಇಲ್ಲಿ ಮೂಲ ತಪ್ಪು ಇರುವುದು ಪೋಲಿಸರಲ್ಲಿಯೇ. ಹಿಂದಿನ ನಾಲ್ಕೈದು ವರ್ಷಗಳಿಂದ ನಮ್ಮ ರಾಜ್ಯವೊಂದರಲ್ಲೇ ಐದು ಸಾವಿರಕ್ಕಿಂತ ಹೆಚ್ಚು ಇಂತಹ ವಂಚನೆ ನಡೆದಿದ್ದರೂ ಪೋಲಿಸರು ಈ ವರೆಗೆ ಒಂದೇ ಒಂದು ಪ್ರಕರಣದಲ್ಲಿ ದಿಲ್ಲಿ ಮೂಲದ ಈ ವಂಚಕರನ್ನು ಹಿಡಿಯುವ ಪ್ರಯತ್ನವನ್ನೇ ಮಾಡಿಲ್ಲ. ಪೋಲಿಸರು ಕೇವಲ ಸಂತ್ರಸ್ತರ ದೂರು ದಾಖಲಿಸಿಕೊಂಡು ಮರೆತು ಬಿಡುತ್ತಾರೆ. ಅದನ್ನು ತನಿಖೆ ನಡೆಸುವ ಗೋಜಿಗೆ ಹೋಗುವುದೇ ಇಲ್ಲ.
ನಿಜವಾಗಿ ಈ ವಂಚಕರನ್ನು ಸುಲಭವಾಗಿ ಹಿಡಿಯಬಹುದು, ಕಾರಣ ಅವರು ನಗದು ಹಣ ಡ್ರಾ ಮಾಡಿರುವುದಿಲ್ಲ. ಅವರು ನಮ್ಮ ಏಟಿಎಮ್ ಕಾರ್ಡ್ ಉಪಯೋಗಿಸಿ ಆನ್ಲೈನ್ ಮಾರ್ಕೆಟಿಂಗ್ ಕಂಪನಿಯಿಂದ ವಸ್ತುಗಳನ್ನು ಖರೀದಿಸಿರುತ್ತಾರೆ. ಮೋಸಹೋಗಿರುವ ಸಂತ್ರಸ್ತರ ಬ್ಯಾಂಕ್ ಪಾಸ್ ಬುಕ್ಕಿನಲ್ಲಿ ಯಾವ ಆನ್ಲೈನ್ ಕಂಪನಿಗೆ ನಮ್ಮ ಖಾತೆಯಿಂದ ಹಣ ವರ್ಗಾವಣೆ ಆಗಿವೆ ಎಂದು ಸುಲಭದಲ್ಲಿ ಪೋಲಿಸರು ಗುರುತಿಸಬಹುದು. ಹಾಗೂ ಆ ಮಾರ್ಕೆಟಿಂಗ್ ಕಂಪನಿಯ ಹತ್ತಿರ ಯಾವ ವಿಳಾಸಕ್ಕೆ ವಸ್ತುಗಳನ್ನು ಡೆಲಿವರಿ ಮಾಡಲಾಯಿತು ಎಂಬ ರೆಕಾರ್ಡ್ ಸಹ ಇರುತ್ತದೆ. ಪೋಲಿಸರು ಈ ಎಲ್ಲಾ ವಿವರ ಪಡೆದು ಸುಲಭದಲ್ಲಿ ಇಂತಹ ವಂಚನೆ ಕೇಸುಗಳನ್ನೂ ಹಿಡಿಯುವದಿಲ್ಲ ಎಂದರೆ ಕಾರಣವೇನು ? ಮೊಬೈಲ್ ಕರೆಗಳ ಆಧಾರದಲ್ಲಿ ಎಂತೆಂತಹದ್ದೋ ಕಠಿಣ ಕೊಲೆ ಕೇಸುಗಳನ್ನು ಪೋಲಿಸರು ಹಿಡಿದಿರುವಾಗ ಇಂತಹ ಸುಲಭದ ಏಟಿಎಮ್ ವಂಚಕರನ್ನು ಹಿಡಿಯಲು ಪೆಲೀಸರಿಗೆ ಏನು ಕಷ್ಟ ? ಹೇಗೂ ಸಂತ್ರಸ್ತನ ಫೆನಿನಲ್ಲಿ ವಂಚಕನ ಫೆನ್ ನಂಬರ್ ರಜಿಸ್ಟರ್ ಆಗಿರುತ್ತದೆ ತಾನೇ ? ಮನಸಿದ್ದರೆ ಮಾರ್ಗವಿದೆ. ಜನರೆಲ್ಲಾ ಡೆಬಿಟ್ ಕಾರ್ಡ್ / ಏಟಿಎಮ್ ಕಾರ್ಡ್ ಬಳಸಿ ನಗದುರಹಿತ ವ್ಯವಹಾರಕ್ಕೆ ತಯಾರಾಗಬೇಕು ಎಂದು ನಮ್ಮ ಪ್ರಧಾನಿಗಳು ದಿನಾಲೂ ಉಪದೇಶಿಸುತ್ತಾರೆ. ಆದರೆ ಇಂತಹ ವಂಚಕ ಗ್ಯಾಂಗ್ ಪ್ರಧಾನಿಗಳ ದಿಲ್ಲಿಯಲ್ಲಿಯೇ ಕಾರ್ಯಾಚರಿಸುತ್ತಿರುವಾಗ ನಗದುರಹಿತ ವ್ಯವಹಾರಕ್ಕೆ ಮುಂದಾಗಿ ಮುಗ್ಧ ಬಡವರು ವಂಚಕರಿಗೆ ಹಣ ಕಳೆದುಕೊಂಡು ನಗದು-ರಹಿತ ವ್ಯವಹಾರದಂತೆ ಕಣ್ಣೀರು ರಹಿತವಾಗಿ ದುಖಿಸುವಾಗ ಪ್ರಧಾನಿಗಳ ಪರಿಹಾರವೇನು ?

  • ರಾಮಕೃಷ್ಣ ಏ ಕೆ, ಅಶೋಕ್ ನಗರ  ಮಂಗಳೂರು