ನೋಟು ಅಮಾನ್ಯ ಸಮರ್ಥನೆಗೆ ಬಿಜೆಪಿ ದೇಶಪ್ರೇಮದ ಅಸ್ತ್ರವನ್ನೇಕೆ ಬಳಸುತ್ತಿದೆ ?

ಪ್ರಧಾನಿ ಮೋದಿಯನ್ನು ಬೆಂಬಲಿಸದಿರುವವರು ದೇಶದ್ರೋಹಿಗಳೆಂದು ಮಹಾರಾಷ್ಟ್ರ ಸೀಎಂ ಫಡ್ನವಿಸ್ ಮತ್ತು ಸರಕಾರೀ ಸಂತ ರಾಮದೇವ್ ಘೋಷಿಸಿಬಿಟ್ಟಿದ್ದಾರೆ. ಆರೆಸ್ಸೆಸ್ ಪ್ರೇರಿತ ಈ ನೀತಿಯ ಹಿಂದೆ ಮೋದಿ ಎಂದರೆ ಭಾರತ, ಭಾರತ ಎಂದರೆ ಮೋದಿ ಎಂಬ ಅಹಂಭಾವದ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತಿದೆ.

  • ಸಿದ್ದಾರ್ಥ ಭಾಟಿಯಾ

ಪ್ರಧಾನಿ ನರೇಂದ್ರ ಮೋದಿ ನೋಟು ರದ್ದತಿಯ ತಮ್ಮ ನಿರ್ಧಾರವನ್ನು ಸಾರ್ವಜನಿಕವಾಗಿ ಪ್ರಕಟಿಸಿದ ಕೆಲವೇ ದಿನಗಳಲ್ಲಿ ದೇಶಪ್ರೇಮ ಮತ್ತು ರಾಷ್ಟ್ರೀಯವಾದದ ಭಾವನೆಗಳು ಕೇಂದ್ರ ಸ್ಥಾನವನ್ನು ಆಕ್ರಮಿಸಿವೆ. ಪ್ರಧಾನಿ ಘೋಷಣೆಯಾದ ಕೂಡಲೇ ಬಾಬಾ ರಾಮದೇವ್ ಮೋದಿಯ ಅಮಾನ್ಯೀಕರಣ ನೀತಿಯನ್ನು ಬೆಂಬಲಿಸ ದಿರುವವರೆಲ್ಲರೂ ದೇಶದ್ರೋಹಿಗಳು ಎಂದು ಘೋಷಿಸಿಬಿಟ್ಟರು. ಗಡಿಯಲ್ಲಿ ದೇಶ ಕಾಯುವ ಯೋಧರನ್ನೂ ಸಂವಾದಕ್ಕೆ ಎಳೆಯಲಾಯಿತು. ತಮ್ಮದೇ ಆದ ಹಣ ಪಡೆಯಲು ಗಂಟೆಗಟ್ಟಳೆ ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಲ್ಲುವ ಜನಸಾಮಾನ್ಯರಿಗೂ ಗಡಿಯಲ್ಲಿ ದೇಶ ಕಾಯುವ ಯೋಧರಿಗೂ ಹೇಗೆ ಸಂಬಂಧ ಕಲ್ಪಿಸಲು ಸಾಧ್ಯ ? ಆದರೆ ದೇಶಭಕ್ತರಿಗೆ ಇದು ಸುಲಭವಾಗಿ ತೋರುತ್ತದೆ. ಯೋಧರ ತ್ಯಾಗ ಬಲಿದಾನಗಳ ಮುಂದೆ ಇವೆಲ್ಲಾ ಗೌಣ ಎನ್ನುವ ಅಹಮಿಕೆ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ದೇಶಭಕ್ತಿಯ ಉನ್ಮಾದವನ್ನು ಆಗಾಗ್ಗೆ ಕೆಣಕುವ ವಿಕೃತ ಮನೋಭಾವವನ್ನು ಹೊರತುಪಡಿಸಿದರೆ ಇಲ್ಲಿ ಮತ್ತಾವ ಅರ್ಥವೂ ಕಾಣುವುದಿಲ್ಲ. ಹಾಸ್ಯಾಸ್ಪದ ಎನಿಸುತ್ತದೆಯಷ್ಟೆ. ಆದರೆ ಭಾವೋನ್ಮಾದಕ್ಕೆ ಒಳಗಾಗಿರುವ ಬಲಪಂಥೀಯ ಯೋಧರು ದೇಶಭಕ್ತಿಯ ಉದ್ವೇಗ ಮತ್ತು ಉನ್ಮಾದವನ್ನು ಈ ರೀತಿ ಬಳಸಿಕೊಳ್ಳುವುದರ ಹಿಂದೆ ಒಂದು ನಿರ್ದಿಷ್ಟ ಉದ್ದೇಶ ಇರುವುದು ಸ್ಪಷ್ಟ.

ಈಗ ಈ ಸಂವಾದದ ಅಂಗಣದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವಿಸ್ ಧುಮುಕಿದ್ದಾರೆ. ತಮ್ಮ ರಾಜ್ಯಕ್ಕೆ ಬೃಹತ್ ಬಂಡವಾಳವನ್ನು ಆಹ್ವಾನಿಸಲು ತುದಿಗಾಲಲ್ಲಿ ನಿಂತಿರುವ ಎಂಬಿಎ ಪದವೀಧರ ಫಡ್ನವಿಸ್ ತಮ್ಮ ಯತ್ನದಲ್ಲಿ ವಿಫಲವಾಗುತ್ತಲೇ ಇದ್ದಾರೆ. ಅದೇ ವೇಳೆ ಅವರ ಆರೆಸ್ಸೆಸ್ ಪ್ರೇರಿತ ಚಿಂತನೆಗಳೂ ವ್ಯಕ್ತವಾಗುತ್ತಲೇ ಇವೆ. ಅಮಾನ್ಯೀಕರಣವನ್ನು ಕುರಿತು ಪ್ರತಿಕ್ರಯಿಸಿದ ಫಡ್ನವಿಸ್, ಪ್ರಧಾನಿ ಮೋದಿಯನ್ನು ಬೆಂಬಲಿಸದಿರುವವರು ದೇಶದ್ರೋಹಿಗಳೆಂದು ಘೋಷಿಸಿ ಬಿಟ್ಟಿದ್ದಾರೆ. ಆರೆಸ್ಸೆಸ್ ಪ್ರೇರಿತ ಈ ನೀತಿಯ ಹಿಂದೆ ಮೋದಿ ಎಂದರೆ ಭಾರತ, ಭಾರತ ಎಂದರೆ ಮೋದಿ ಎಂಬ ಅಹಂಭಾವದ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಮೋದಿಯನ್ನು ಅನು ಮಾನಿಸುವುದು ದೇಶವನ್ನೇ ಅನುಮಾನಿಸಿದಂತೆ ಎಂದು ಪರಿಗಣಿಸಲಾಗುತ್ತಿದೆ. ಕೇಂದ್ರ ಸಚಿವ ಕಿರಣ್ ರಿಜ್ಜು ಇದೇ ಧೋರಣೆಯನ್ನು ಮುಂದುವರೆಸಿ ಸರ್ಕಾರವನ್ನು ಪ್ರಶ್ನಿಸುವುದೇ ಅಪರಾಧ ಎಂದು ಹೇಳಿದ್ದಾರೆ.  ಯೋಧರ ಹಿಂದೆ ಅವಿತುಕೊಳ್ಳುವ ಮೂಲಕ ಈ ಜನನಾಯಕರು ಪ್ರಜೆಗಳಿಂದ ಎದುರಾಗುವ ಸವಾಲುಗಳನ್ನು ನಿರ್ಲಕ್ಷಿಸುವುದು ಸುಲಭವಾಗುತ್ತದೆ. ಸರ್ಕಾರದ ನೀತಿಗಳ ಆರ್ಥಿಕ ಸ್ವರೂಪ, ಸಾಮಾಜಿಕ ಪರಿಣಾಮ ಮತ್ತು ದೀರ್ಘಕಾಲಿಕ ದುಷ್ಪರಿಣಾಮಗಳು ಚರ್ಚೆಗೆ ಒಳಗಾಗುವುದೇ ಇಲ್ಲ.

ಕಳೆದ ಮಾರ್ಚಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಂಡ ನಿರ್ಣಯದಲ್ಲಿ ಭಾರತ್ ಮಾತಾ ಕಿ ಜೈ ಎಂದು ಹೇಳಲು ಒಲ್ಲೆ ಎನ್ನುವುದು ದೇಶದ್ರೋಹಕ್ಕೆ ಸಮಾನ ಎಂದು ಘೋಷಿಸಲಾಯಿತು. ಇಲ್ಲಿ ಸಂವಿಧಾನದಲ್ಲಿರುವ ಭಾರತ ಎಂಬ ಪದವನ್ನು ಬಳಸಿಕೊಳ್ಳಲಾಗಿದೆ. ಆದರೆ ಅದೇ ಸಂವಿಧಾನದಲ್ಲಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಲಾಗಿಲ್ಲ ಎನ್ನುವುದು ವಾಸ್ತವ.

ರಾಷ್ಟ್ರೀಯವಾದ ಸದಾ ಒಂದು ಭಾವನಾತ್ಮಕ ಅಸ್ತ್ರವಾಗಿಯೇ ರಾಜಕೀಯ ಪಕ್ಷಗಳನ್ನು ಕಾಪಾಡುತ್ತಲೇ ಬಂದಿದೆ. ವಿರೋಧಿಗಳನ್ನು ಮಣಿಸಲು, ದಮನಿಸಲು ಮತ್ತು ಸುಮ್ಮನಾಗಿಸಲು ಇದು ಪ್ರಬಲ ಅಸ್ತ್ರವಾಗಿದ್ದು ಬಿಜೆಪಿ ಮತ್ತು ಆರೆಸ್ಸೆಸ್ ಈ ಅಸ್ತ್ರವನ್ನು ಬಳಸುತ್ತಲೇ ಬಂದಿವೆ. ಆದರೆ ರಾಷ್ಟ್ರೀಯವಾದ ಮತ್ತು ದೇಶಭಕ್ತಿಯ ಭಾವನೆಗಳನ್ನು ಅತಿಯಾಗಿ ಬಳಸುತ್ತಾ ಹೋದರೆ ಮುಂದೊಂದು ದಿನ ಅದು ನಿಷ್ಫಲವಾಗುವ ಸಾಧ್ಯತೆಗಳೂ ಹೆಚ್ಚು. ಸಂಘಪರಿವಾರದ ಈ ಕುತಂತ್ರ ರಾಜಕಾರಣ ಜನಸಾಮಾನ್ಯರಿಗೆ ಅರಿವಾದರೆ ಬಿಜೆಪಿ ಭಾರಿ ಬೆಲೆ ತೆರಬೇಕಾಗುತ್ತದೆ. ಆದರೆ ಇದು ಕೇವಲ ಚುನಾವಣಾ ತಂತ್ರವಲ್ಲ, ಒಂದು ದೀರ್ಘ ಕಾಲಿಕ ಪಿತೂರಿ ಎನ್ನುವ ಅಪಾಯಕಾರಿ ಅಂಶವನ್ನು ನಾವು ಮರೆಯುವಂತಿಲ್ಲ.