ಗೋರಖಪುರದಲ್ಲಿ ಆದಿತ್ಯನಾಥ್ ಏಕೆ ಜನಪ್ರಿಯ ?

ಐದು ಬಾರಿ ಸಂಸತ್ ಚುನಾವಣೆ ಗೆದ್ದಿರುವ ಅವರು ಪ್ರತಿ ಚುನಾವಣೆಯಲ್ಲೂ ಮತಗಳಿಕೆಯ ಪ್ರಮಾಣ ಹೆಚ್ಚಿಸಿಕೊಳ್ಳುತ್ತಲೆ ಹೋಗಿದ್ದಾರೆ.

  • ಧೃವ್ ಎಂ

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕುರಿತಂತೆ ಗೋರಖಪುರದ ಜನರೊಡನೆ ಮಾತನಾಡಿದರೆ ಒಬ್ಬೊಬ್ಬರೂ ಒಂದೊಂದು ಕಥೆ ಹೇಳುತ್ತಾರೆ. ತಮ್ಮ ಕೆಲಸಗಳು ಸುಗಮವಾಗಲು ಎಷ್ಟು ನೆರವಾಗಿದ್ದಾರೆ ಎಂದು ಶ್ಲಾಘಿಸುತ್ತಾರೆ.

ಗೋರಖಪುರ ಸುಂದರ ನಗರವೇನೂ ಅಲ್ಲ. ಅತಿಯಾದ ವಾಹನ ದಟ್ಟಣೆ, ಅಸ್ತವ್ಯಸ್ಥ ಸಂಚಾರ, ಬೀಡಾಡಿ ದನಗಳ ಕಾಟ, ಕೆಟ್ಟುಹೋದ ರಸ್ತೆಗಳು ಮತ್ತು ಎತ್ತ ನೋಡಿದರೂ ಧರ್ಮದ ಛಾಯೆ ಇವು ಗೋರಖಪುರದ ವೈಶಿಷ್ಟ್ಯಗಳು.

ಆದರೆ ಎಲ್ಲಕ್ಕಿಂತಲೂ ವಿಶಿಷ್ಟ ಎಂದರೆ 44 ವರ್ಷದ ಕಟ್ಠಾ ಹಿಂದುತ್ವವಾದಿ ಆದಿತ್ಯನಾಥ್.  ಸದ್ಯದಲ್ಲಿ ಗೋರಖಪುರದಲ್ಲಿ ಇಲ್ಲದಿದ್ದರೂ ಆದಿತ್ಯನಾಥ್ ಇಲ್ಲಿ ಸರ್ವಾಂತರ್ಯಾಮಿಯಾಗಿ ಕಾಣುತ್ತಾರೆ. ಇಲ್ಲಿನ ದೇವಾಲಯವನ್ನು ಪೊಲೀಸರು ದಿನವಿಡೀ ಕಾವಲು ಕಾಯುತ್ತಾರೆ. ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಇಲ್ಲಿನ ಚಟುವಟಿಕೆಗಳನ್ನು 60 ವರ್ಷದ ತಿವಾರಿ ನಿರ್ವಹಿಸುತ್ತಾರೆ. ಆದಿತ್ಯನಾಥ್ ದರ್ಬಾರಿನಲ್ಲಿ ಸೇರುವ ಅಧಿಕಾರಿಗಳಿಗೆ ತಿವಾರಿ ಖುದ್ದಾಗಿ ಸಹಿ ಮಾಡಿ ಆದೇಶಗಳನ್ನು ನೀಡುತ್ತಾರೆ. ಎಂದಿನಂತೆ ತಮ್ಮ ಅಹವಾಲುಗಳೊಂದಿಗೆ ನೂರಾರು ಜನ ತಂಡೋಪತಂಡವಾಗಿ ಬಂದು  ತಮ್ಮ ಸಮಸ್ಯೆ ನೀಗಿಸಿಕೊಳ್ಳುತ್ತಿರುತ್ತಾರೆ.

ಗೋರಖಪುರ ಅತ್ಯಂತ ಹಿಂದುಳಿದ ನಗರವಾದರೂ ಆದಿತ್ಯನಾಥ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ದೇವಾಲಯದ ಆವರಣದೊಳಗೇ ಎರಡು ಆಸ್ಪತ್ರೆಗಳನ್ನು ನಿರ್ಮಿಸುವ ಮೂಲಕ ಆದಿತ್ಯನಾಥ್ ಜನರ ಆರೋಗ್ಯ ಚಿಕಿತ್ಸೆಗೆ ನೆರವಾಗಿದ್ದಾರೆ. ವಂಚಕರಿಂದ ಹಣ ಕಳೆದುಕೊಂಡವರು, ಶಾಲೆಗೆ ಪ್ರವೇಶ ಪಡೆಯಲಾರದೆ ಪರದಾಡುವವರು ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ಜನರು ಇಲ್ಲಿಗೆ ಬಂದು ಪರಿಹಾರ ಕಂಡುಕೊಳ್ಳುತ್ತಾರೆ.

ಯೋಗಿ ಆದಿತ್ಯನಾಥ್ ಜನಸೇವೆಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ, ಈ ಧ್ಯೇಯದಿಂದಲೇ ರಾಜಕೀಯ ಪ್ರವೇಶಿಸಿದ್ದಾರೆ ಎನ್ನುತ್ತಾರೆ ತಿವಾರಿ.  ಈ ಭಾಗದಲ್ಲಿ ಆದಿತ್ಯನಾಥ್ ಅವರನ್ನು ಮಹಾರಾಜ್ ಎಂದೇ ಕರೆಯಲಾಗುತ್ತದೆ. ಇಲ್ಲಿನ ಜನರು ಆದಿತ್ಯನಾಥ್ ಅವರನ್ನು ಒಂದು ಧರ್ಮದ ಹಿತಾಸಕ್ತಿ ಕಾಪಾಡುವವರೆಂದು ಪರಿಗಣಿಸದೆ ಜನಸೇವಕ ಎಂದೇ ಪರಿಗಣಿಸುತ್ತಾರೆ. ಇಲ್ಲಿನ ಅನೇಕ ಮುಸ್ಲಿಮರೂ ಸಹ ಹಿಂದೂಗಳಂತೆಯೇ ಆದಿತ್ಯನಾಥ್ ಅವರನ್ನು ಗೌರವಿಸಿ, ಪ್ರೀತಿಸುತ್ತಾರೆ. ಅವರ ಅನೇಕ ಸ್ನೇಹಿತರು ಮುಸ್ಲಿಮರಾಗಿದ್ದಾರೆ.

ದೇವಾಲಯದ ಒಳಗಿರುವ ಅಂಗಡಿಗಳು ಹಿಂದೂಯೇತರರಿಗೂ ಸೇರಿವೆ. ದೇವಾಲಯದ ಬಾಗಿಲ ಬಳಿಯಲ್ಲೇ ಬಿರಿಯಾನಿ ಅಂಗಡಿಯೂ ಇರುವುದು ವಿಶೇಷ.

ಅನೇಕ ಸಂದರ್ಭಗಳಲ್ಲಿ ಹಿಂದೂಪರ ವರ್ತನೆ ಕಂಡುಬಂದರೂ ಆದಿತ್ಯನಾಥ್ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದು ಇಲ್ಲಿನ ಮುಸ್ಲಿಂ ವರ್ತಕರೂ ಹೇಳುತ್ತಾರೆ. 40ಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿರುವ ಅದಿತ್ಯನಾಥ್ ಇಲ್ಲಿನ ಮುಸ್ಲಿಮರಿಗೆ ಅಗತ್ಯ ಸೌಲಭ್ಯಗಳನ್ನು ನೀಡಿ ಜನಪ್ರಿಯರಾಗಿದ್ದರೂ ಮುಸ್ಲಿಂ ಸಮುದಾಯದಲ್ಲಿ ಅಭದ್ರತೆ ಕಾಡುತ್ತಿರುವುದು ವಾಸ್ತವ. ಹಾಗಾಗಿಯೇ ಪ್ರತಿ ಚುನಾವಣೆಯಲ್ಲೂ ಅವರ ಮತಗಳಿಕೆಯ ಪ್ರಮಾಣ ಹೆಚ್ಚಾಗುತ್ತಲೇ ಇದೆ. 1998ರಲ್ಲಿ 26 ಸಾವಿರ ಮತಗಳಿಂದ ಜಯಿಸಿದ್ದ ಆದಿತ್ಯನಾಥ್ 2009ರಲ್ಲಿ 2,20,000 ಮತಗಳಿಂದ ಜಯಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಐದನೆಯ ಬಾರಿಗೆ  1,40,000 ಮತಗಳಿಂದ ಜಯ ಸಾಧಿಸಿದ್ದರು.

ರಜಪೂತ ಜಾತಿಗೆ ಸೇರಿದವರಾದರೂ ದಲಿತರು ಮತ್ತು ಇತರ ಹಿಂದುಳಿದ ವರ್ಗಗಳೊಡನೆ ಸ್ನೇಹದಿಂದಿರುವುದರಿಂದಲೇ ಆದಿತ್ಯನಾಥ್ ಜಯಪ್ರಿಯತೆ ಹೆಚ್ಚಾಗಿದೆ ಎನ್ನಬಹುದು. 50 ಎಕರೆ ವ್ಯಾಪ್ತಿಯ ದೇವಾಲಯದ ಆವರಣದಲ್ಲಿ ಎಲ್ಲ ಸೌಕರ್ಯಗಳಿದ್ದರೂ ಹೊರಗೆ ಮಾತ್ರ ನರಕಸದೃಶವಾಗಿದೆ. ಎಲ್ಲೆಂದರಲ್ಲಿ ಕಸ, ತೆರೆದ ಚರಂಡಿಗಳು ಜನರನ್ನು ಸ್ವಾಗತಿಸುತ್ತವೆ. ಸುತ್ತಲಿನ ನೇಕಾರರು, ಸಕ್ಕರೆ ಗಿರಣಿ ಮಾಲೀಕರು ತಮ್ಮ ನೆಲೆ ಕಳೆದುಕೊಂಡಿದ್ದು ರಸಗೊಬ್ಬರ ಕಾರ್ಖಾನೆಯೂ ಅವಸಾನದತ್ತ ಸಾಗುತ್ತಿದೆ. ಇಷ್ಟೆಲ್ಲಾ ಹಿಂದುಳಿಯುವಿಕೆ ಇದ್ದರೂ, ಬಡತನ, ನಿರುದ್ಯೋಗ ತಾಂಢವಾಡುತ್ತಿದ್ದರೂ ಆದಿತ್ಯನಾಥ್ ತಮ್ಮ ಜನಪ್ರಿಯತೆ ಉಳಿಸಿಕೊಂಡಿರುವುದು ವಿಶಿಷ್ಟವೇ ಸರಿ.