ಏನಿದು ಉದ್ಯಮಿಗಳ ಕೋಟಿ ಕೋಟಿ ರೂ ಸಾಲ ಮನ್ನಾ ?

ಜುಜುಬಿ ರೂ 5-10 ಸಾವಿರ ಬ್ಯಾಂಕಿನಿಂದ ಸಾಲ ಪಡೆದು ವಾಪಸು ಸಾಲ ಮರುಪಾವತಿಸದಿದ್ದರೆ ಬ್ಯಾಂಕಿನವರು ಪಡೆಂಭೂತದಂತೆ ಸುಸ್ತಿದಾರನ ಬೆನ್ನ ಹಿಂದೆ ಬಿದ್ದು ರಿಜಿಸ್ಟರ್ಡ್ ನೋಟೀಸು ಕಳುಹಿಸುವುದೇನು, ಏನೆಲ್ಲ ಕ್ರಮ ಜರುಗಿಸುವುದೇನು ? ಇದು ಪಾಪದವರ ಬವಣೆ. ಆದರೆ ಕೋಟ್ಯಂತರ ರೂಪಾಯಿ ಸಾಲ ಪಡೆದ ಉದ್ಯಮಿಗಳ 7016 ಕೋಟಿ ಸಾಲ ಬ್ಯಾಂಕಿನವರು ಮನ್ನಾ ಮಾಡುವುದೆಂದರೆ ಇದ್ಯಾವ ನೀತಿ-ಧರ್ಮ ?  ಹಾಗಾದರೆ ಜುಜುಬಿ ಮೊತ್ತದ ಸಾಲ ಪಡೆದುಕೊಂಡವರ ಸಾಲ ಮನ್ನಾ ಮಾಡಲು ಬ್ಯಾಂಕಿನ ಕಾನೂನು-ನಿಯಮಗಳಲ್ಲಿ ಪ್ರಾವಿಜನ್ ಇಲ್ಲವೇನು ? ಈ 7016 ಕೋಟಿ ರೂಪಾಯಿ ಸಾಲದ ಮೊತ್ತದಲ್ಲಿ 1201 ಕೋಟಿ ರೂಪಾಯಿಗೆ  ಕಿಂಗ್ ಫಿಶರ್ ಏರ್‍ಲೈನ್ಸ್ ಸೇರಿದಂತೆ 63 ಇತರ ಸಂಸ್ಥೆಗಳ ಕೋಟಿ ಕೋಟಿ ರೂ ಸಾಲ ಮನ್ನಾ ಮಾಡುವುದೆಂದರೆ ಬ್ಯಾಂಕಿನಲ್ಲಿರುವ ದುಡ್ಡು ಯಾರದು ? ಬ್ಯಾಂಕ್ ಇಷ್ಟೊಂದೂ ಮೊತ್ತದ ಸಾಲವನ್ನು ಕೊಡುವುದು ಯಾಕೆ ? ಕೊಡುವುದಾದರೆ ಸಾಕಷ್ಟು ಭದ್ರತೆ ಜಾಮಿನು ತೆಗೆದುಕೊಳ್ಳುವುದಿಲ್ಲ ಯಾಕೆ ?

ಈ ಉದ್ಯಮಿಗಳಿಗೆ ಏನೊ ಆಸ್ತಿಪಾಸ್ತಿ ಇಲ್ಲವೇನು ? ಆಸ್ತಿ ಪಾಸ್ತಿ ಆಡವು ಇಡದೆ ಇಂಥವರಿಗೆ ಸಾಲ ಕೊಡುವುದೆ ? ಉದ್ದೇಶಪೂರ್ವಕವಾಗಿ ಸಾಲ ಪಡೆದುಕೊಳ್ಳುವ, ಪಡೆದುಕೊಂಡ ಉದ್ಯಮಿಗಳು ಸಾಲ ಮರುಪಾವತಿಸಲು ವಿಫಲರಾದರೆ, ಬ್ಯಾಂಕಿನ ಮ್ಯಾನೇಜರ್ ಹಾಗೂ ಇತರ ಉನ್ನತ ಅಧಿಕಾರಿಗಳು ಜವಾಬ್ದಾರರಲ್ಲವೇ ?

ಬ್ಯಾಂಕಿನಲ್ಲಿರುವ ಹಣ ಯಾರ ಹಣ ? ಸಾರ್ವಜನಿಕರ ಠೇವಣಿ ಹಣ ಹೀಗೆಲ್ಲಾ ಪೋಲು ಮಾಡುವುದೇ ? ಸರಿಯಾದ ನಿಯಮ ಕಾನೂನು, ಕ್ರಮ ಪಾಲಿಸದ ಬ್ಯಾಂಕ್ ಅಧಿಕಾರಿಗಳೇ ಜವಾಬ್ದಾರಿಯಾಗುವಂಥ ಕಾನೂನು ನಿಯಮ ಜಾರಿಗೆ ಬಂದರೆ ಸರಿ ಹೋಗುತ್ತದೆಲ್ಲವೇ ?

ಹೀಗೆಯೇ 2016ರಲ್ಲಿ ಎಸ್ ಬಿ ಐ 48,000 ಕೋಟಿ ಮೊತ್ತವನ್ನು ವಸೂಲಿಯಾಗದ ಸಾಲ ಎಂದು ಮನ್ನಾ ಮಾಡಿದ್ದು ಸರಿಯೇ ? ಇದಕ್ಕೆಲ್ಲ ಹೇಳುವವರು ಕೇಳುವವರು ಯಾರೊಬ್ಬರೂ ಇಲ್ಲವೇ ?

  • ಜೆ ಎಫ್ ಡಿಸೋಜ, ಅತ್ತಾವರ