`ಹಿಜಡಾ’ ಪದ ಬಳಕೆ ಏಕೆ ಅಪಮಾನಕರವಾಗುತ್ತದೆ ?

ದಕ್ಷಿಣ ಏಷಿಯಾದ ನಾಗರಿಕತೆಯಲ್ಲಿ ಖೋಜಾಗಳು ಒಂದು ಅಂಶಿಕ ಭಾಗವಾಗಿಯೇ ಬೆಳೆದುಬಂದಿದ್ದಾರೆ. ಆದರೆ ಇತ್ತೀಚಿಗೆ ರಾಜಕಾರಣಿಗಳು ಈ ಸಮುದಾಯವನ್ನು ತಮ್ಮ ಪೂರ್ವಗ್ರಹಪೀಡಿತ ದೃಷ್ಟಿಯಿಂದಲೇ ನೋಡುತ್ತಿದ್ದಾರೆ. ಭಾರತದ ರಾಜಕಾರಣದಲ್ಲಿ ಕಂಡುಬರುವ ದೋಷಾರೋಪಣೆಗಳನ್ನು ಗಮನಿಸಿದಾಗ ಅಲ್ಪಸಂಖ್ಯಾತರ ಬಗ್ಗೆ ಮಾಡಲಾಗುವ ಅಪಮಾನಕರ ಹೀಯಾಳಿಕೆಗಳಿಗಿಂತಲೂ ಹೆಚ್ಚಿನದನ್ನು ಹಿಜಡಾಗಳ ಬಗ್ಗೆ ಕಾಣಬಹುದು. ಬಹುಪಾಲು ಎಲ್ಲ ರಾಜಕೀಯ ಪಕ್ಷಗಳ ನಾಯಕರೂ `ಹಿಜಡಾ’ ಪದವನ್ನು ಅವಹೇಳನಕಾರಿಯಾಗಿ ಬಳಸುವುದನ್ನೂ ಕಾಣಬಹುದು.

ತಮ್ಮ ವಿರೋಧಿಗಳನ್ನು ದುರ್ಬಲರು, ಅಸಹಾಯಕರು ಎಂದು ಬಣ್ಣಿಸಲು ಈ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಪಶ್ಚಿಮಬಂಗಾಲದ ಬಿಜೆಪಿ ಉಪಾಧ್ಯಕ್ಷ ಸಭೆಯೊಂದರಲ್ಲಿ ಮಾತನಾಡುತ್ತಾ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಖೋಜಾಗಳೆಂದು ಹೀಯಾಳಿಸಿದ್ದರು ಇದಕ್ಕೂ ಮುನ್ನ ಇದೇ ಪಕ್ಷದ ಮತ್ತೊಬ್ಬ ನಾಯಕರು ಮಮತಾ ಬ್ಯಾನರ್ಜಿಯನ್ನು ಹಿಜಡಾ ಎಂದು ಹೀಯಾಳಿಸಿದ್ದರು. ಹಾಗೆಯೇ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಿಂದ ಖಂಡನೆಗೊಳಗಾಗಿದ್ದರು.

ಇಲ್ಲಿ ಹೀಯಾಳಿಕೆಗಳಿಗಿಂತಲೂ ಅಚ್ಚರಿ ಮೂಡಿಸುವುದು ಈ ಹೀಯಾಳಿಕೆಗೆ ವ್ಯಕ್ತವಾಗುವ ಪ್ರತಿಕ್ರಿಯೆಗಳು. ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶದಲ್ಲಿ ತೃತೀಯ ಲಿಂಗಿಗಳನ್ನು ಹಿಜ್ರಾ ಅಥವಾ ಖೋಜಾ ಎಂದು ಕರೆಯಲಾಗುತ್ತದೆ. ಆದರೆ ಈ ಪದಗಳು ಮೂಲತಃ ಅಪಮಾನಕಾರಿಯಲ್ಲ, ಅವಹೇಳನಕಾರಿಯೂ ಅಲ್ಲ. ಆದರೆ ಈ ಪದಗಳನ್ನು ಬಳಸುವ ಮೂಲಕ ಈ ವರ್ಗದ ಜನತೆಯನ್ನು ಪ್ರಗತಿಯೆಡೆಗೆ ಕೊಂಡೊಯ್ಯುವ ಪ್ರಕ್ರಿಯೆಗೆ ಅಡ್ಡಿ ಮಾಡಲಾಗುತ್ತಿದೆ.

ಶಿವಸೇನೆ ನಾಯಕ ಉದ್ಧವ್ ಥಾಕ್ರೆ 2009ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು `ಖೋಜಾ’ ಎಂದು ಬಣ್ಣಿಸಿದ್ದರು. ಬಾಳಾ ಥಾಕ್ರೆ ಸಿಂಗ್ ಅವರನ್ನು ರಾಜಕೀಯ `ಹಿಜಡಾ’ ಎಂದು ಜರೆದಿದ್ದರು. ಆದರೆ ನರೇಂದ್ರ ಮೋದಿಯ ಅಮಾನ್ಯೀಕರಣವನ್ನು ವಿರೋಧಿಸಲು ಸೇನೆ ಇದೇ ಸಿಂಗ್ ಅವರನ್ನೇ ಅವಲಂಬಿಸಬೇಕಿತ್ತು. ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಒಮ್ಮೆ ಪಕ್ಷದ ಅಧ್ಯಕ್ಷ ಮುಲಾಯಂಸಿಂಗ್ ಅವರನ್ನು `ಹಿಜಡಾ\’ ಎಂದು ಹೀಯಾಳಿಸಿದ್ದರು. ಟಿಪ್ಪು ಸುಲ್ತಾನ್ ಮಸೀದಿಯ ಮೌಲಾನ ರೆಹಮಾನ್ ಬರ್ಕಾತಿ ಒಮ್ಮೆ ಜೈ ಶ್ರೀರಾಂ ಎಂದು ಕೂಗುವವರೆಲ್ಲಾ ಹಿಜಡಾಗಳು ಎಂದು ಹೀಯಾಳಿಸಿದ್ದರು.

ಇತಿಹಾಸ ಕಾಲದಿಂದಲೂ ಭಾರತದಲ್ಲಿ ತೃತೀಯ ಲಿಂಗಿಗಳಿಗೆ ವಿಶಿಷ್ಟ ಸ್ಥಾನವಿದೆ. ಮೊಘಲರ ಆಗಮನದ ಮುನ್ನ ಈ ಸಮುದಾಯದ ಜನತೆ ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಿತ್ತು. ಅವರಲ್ಲಿ ದೈವೀಕ ಶಕ್ತಿ ಇದೆ ಎಂಬ ನಂಬಿಕೆಯಿಂದ ಅನೇಕ ಜನರು ಅವರ ಆಶೀರ್ವಾದ ಪಡೆಯುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಬ್ರಿಟಿಷ್ ಆಡಳಿತದಲ್ಲಿ ಈ ಸಮುದಾಯಗಳನ್ನು ಕ್ರಿಮಿನಲ್ ಸಮುದಾಯಗಳು ಎಂದು ಗುರುತಿಸುವ ಮೂಲಕ ಹೀಯಾಳಿಕೆಗೆ ಗುರಿಪಡಿಸಲಾಯಿತು. ಸ್ವಾತಂತ್ರ್ಯದ ನಂತರದಲ್ಲಿ `ಹಿಜಡಾ’ಗಳ ವಿರುದ್ಧ ಇದ್ದ ತಾರತಮ್ಯವನ್ನು ಹೋಗಲಾಡಿಸಿದರೂ ಸಮಾಜದಲ್ಲಿ ಇಂದಿಗೂ ತಾರತಮ್ಯ ನಡೆಯುತ್ತಲೇ ಇದೆ. ತೃತೀಯ ಲಿಂಗಿಗಳ ಅಭಿವೃದ್ಧಿಗೆ ವಿಭಿನ್ನ ಸರ್ಕಾರಗಳು ಸಾಕಷ್ಟು ಶ್ರಮಿಸಿವೆ. ಆದರೆ ಯಾವುದೇ ರಾಜಕೀಯ ಪಕ್ಷವು ಚುನಾವಣೆಗಳಲ್ಲಿ ಸ್ಪರ್ಧಿಸಲು ತೃತೀಯ ಲಿಂಗಿಗಳಿಗೆ ಮುಕ್ತ ಅವಕಾಶ ಒದಗಿಸಿಲ್ಲ. ಇಂದಿನ ಧೋರಣೆಯನ್ನು ಬದಲಾಯಿಸಿ ಮುಖ್ಯವಾಹಿನಿ ಸಮಾಜ ತೃತೀಯ ಲಿಂಗಿಗಳನ್ನು ಎಲ್ಲರಂತೆ ಕಾಣಬೇಕಾಗಿದೆ.