ಸೌಜನ್ಯಾ ಕೇಸಿನಲ್ಲಿ ಸಿಬಿಐ ಕೋರ್ಟಿನ ಆದೇಶ ಹೆಗ್ಗಡೆ ಮತ್ತು ಬೆಂಬಲಿಗರು ಏಕೆ ಸ್ವಾಗತಿಸಿಲ್ಲ ?

ಸಿಬಿಐ ಕಾಣದ ಕೈಗಳ ಒತ್ತಡ, ಪ್ರಭಾವಕ್ಕೆ ಮಣಿದು ಸೌಜನ್ಯಾ ಕೊಲೆಗಡುಕರನ್ನು ಪಾರು ಮಾಡಲು ಪ್ರಯತ್ನಿಸಿರುವುದು ಕೋರ್ಟಿಗೆ ಮನವರಿಕೆಯಾಗಿರುವುದು ಕಂಡುಬರುತ್ತದೆ.

 

“ಸೌಜನ್ಯಾ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳದಿದ್ದರೂ ಸೌಜನ್ಯಾ ಕೊಲೆ ಪ್ರಕರಣ ಸಿಬಿಐ ಮೂಲಕ ತನಿಖೆಯಾಗಲಿ ಎಂದು ಜನಾಂದೋಲನದ ಹಿನ್ನೆಲೆಯಲ್ಲಿ ಡಿ ವೀರೇಂದ್ರ ಹೆಗ್ಗಡೆಯವರೂ ಹೇಳಿದ್ದರು. ನಿರೀಕ್ಷಿಸಿದಂತೆ ಪೊಲೀಸರು ಮತ್ತು ಸಿಐಡಿಯವರು ಅನುಸರಿಸಿದ ದಾರಿಯಲ್ಲೇ ಸಿಬಿಐಯವರೂ ಸಾಗಿ ತನಿಖೆಯ ನಾಟಕ ಮಾಡಿ ಶಂಕಿತ ಪ್ರಮುಖ ಆರೋಪಿಗಳಾದ ಧೀರಜ್ ಕೆಲ್ಲ, ಮಲ್ಲಿಕ್ ಜೈನ್ ಮತ್ತು ಉದಯ ಜೈನ್ ಎಂಬಾತರನ್ನು ಆರೋಪ ಪಟ್ಟಿಗೆ ಸೇರಿಸಲಿಲ್ಲ. ಇವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ ಎಂದು ಧರ್ಮಸ್ಥಳದಲ್ಲಿ ಸತ್ಯಮೇವ ಜಯತೇ ಎಂದು ಹೆಗ್ಗಡೆ ಬೆಂಬಲಿಗರು `ವಿಜಯೋತ್ಸವ’ ಆಚರಿಸಿ ಮೆರೆದರು. ಮಾನನಷ್ಟ ಮೊಕದ್ದಮೆಯ ಬೆದರಿಕೆಯನ್ನೂ ಹಾಕಲಾಯ್ತು !

ಇದೀಗ ಬೆಂಗಳೂರಿನ ಹೆಚ್ಚುವರಿ ಸಿವಿಲ್ ಮತ್ತು ಸೆಶನ್ಸ್ ನ್ಯಾಯಾಲಯ ಈ ಮೂವರನ್ನು ವಿಚಾರಣೆಗೊಳಪಡಿಸುವುದೂ ಸಹಿತ ಸಿಬಿಐ ವಿಚಾರಣೆಯ ಹಲವು ಗಂಭೀರ ಲೋಪದೋಷಗಳನ್ನು ಪಟ್ಟಿ ಮಾಡಿ ಇದನ್ನು ಪರಿಗಣಿಸಿ ಹೆಚ್ಚುವರಿ ತನಿಖೆ ಮಾಡಿ ಇದೇ ಎಪ್ರಿಲ್ 25ರೊಳಗೆ ವರದಿ ಸಲ್ಲಿಸಲು ಆದೇಶಿಸಿದ್ದು ಸ್ವಾಗತಾರ್ಹ. ಇದು ನಿಜವಾಗಿ ಸತ್ಯಕ್ಕೆ ಸಂದ ಜಯ. ಸಿಬಿಐ ಕಾಣದ ಕೈಗಳ ಒತ್ತಡ,  ಪ್ರಭಾವಕ್ಕೆ ಮಣಿದು ಸೌಜನ್ಯಾ ಕೊಲೆಗಡುಕರನ್ನು ಪಾರು ಮಾಡಲು ಪ್ರಯತ್ನಿಸಿರುವುದು ಕೋರ್ಟಿಗೆ ಮನವರಿಕೆಯಾಗಿರುವುದು ಕಂಡು ಬರುತ್ತದೆ.

ಇದನ್ನೇಕೆ ಹೆಗ್ಗಡೆಯವರು ಮತ್ತು ಧರ್ಮಸ್ಥಳದ `ಸತ್ಯಮೇವ ಜಯತೇ’ ಸಂಘಟಕರು ಸ್ವಾಗತಿಸಿಲ್ಲ ? ಸಿಬಿಐಯವರು ಸಮಗ್ರವಾಗಿ ತನಿಖೆ ಮಾಡದಿರುವುದನ್ನು ಯಾಕೆ ಖಂಡಿಸಿಲ್ಲ ?

ಅಂತಿಮ ತೀರ್ಪು ಏನೇ ಆಗಬಹುದು. ಏಕೆಂದರೆ ಸಿಬಿಐಯವರು ಈ ಪ್ರಕರಣದಲ್ಲಿ ಪುನಃ ಗಂಭೀರ ತನಿಖೆ ಮಾಡ್ತಾರಾ ಅಥವಾ ತೇಪೆ ಕೆಲಸ ಮಾಡ್ತಾರೋ ಗೊತ್ತಿಲ್ಲ. ಆದರೆ ಈ ಪ್ರಕರಣದ ಕುರಿತು ಹೆಚ್ಚುವರಿ/ಮರು ತನಿಖೆಯ ಆದೇಶ (15 ವೀಕ್ಷಣೆಗಳು, 17 ಪುಟ) ಐತಿಹಾಸಿಕವೆಂದೇ ಹೇಳಬೇಕಾಗುತ್ತದೆ. ಇದನ್ನು ಓದಿದ ಯಾರಿಗೇ ಆದರೂ ಈ ಪ್ರಕರಣದಲ್ಲಿ ಸಂತೋಷ ರಾವ್ ಅವರನ್ನು ಫಿಕ್ಸ್ ಮಾಡಿದ್ದು ಮತ್ತು ನೈಜ ಅಪರಾಧಿಗಳನ್ನು ಬಚಾವು ಮಾಡಿದ್ದು ಸ್ಪಷ್ಟವಾಗಿ, ಸಂಶಯಾತೀತವಾಗಿ ಗೊತ್ತಾಗುತ್ತದೆ.

ವೀರೇಂದ್ರ ಹೆಗ್ಗಡೆ ಮತ್ತು ಅವರ ಸಂಸ್ಥಾನಗಳ ಭೂಹಗರಣಗಳು, ಕಾನೂನುಬಾಹಿರ ಕೃತ್ಯಗಳ ಸರಕಾರಿ ತನಿಖೆಗಳನ್ನು ತ್ವರಿತಗೊಳಿಸಿ ನ್ಯಾಯವೊದಗಿಸಬೇಕೆಂಬ ಹಲವು ಹಕ್ಕೊತ್ತಾಯಗಳಲ್ಲಿ 4 ಪ್ರಮುಖವಾಗಿದ್ದು ಈ ಪೈಕಿ ಸೌಜನ್ಯಾ ಅತ್ಯಾಚಾರ-ಹತ್ಯೆಗೈದ ನಿಜವಾದ ಅಪರಾಧಿಗಳನ್ನು ಬಂಧಿಸುವುದು, ಶಿಕ್ಷಿಸುವುದೂ ಸಹ ಒಂದು. ಈ ಹೋರಾಟದಲ್ಲಿ ಸೌಜನ್ಯಾ ಹೆತ್ತವರೊಂದಿಗೆ, ಇದರ ಮುಂಚೂಣಿಯಲ್ಲಿದ್ದ ಹೋರಾಟಗಾರರಿಗೆ ಮತ್ತು ಸಂಘಟನೆಗಳಿಗೆ ನಾಗರಿಕ ಸೇವಾ ಟ್ರಸ್ಟ್ ನೇತೃತ್ವದ ಜಂಟಿ ಕ್ರಿಯಾ ಸಮಿತಿ ಬೆಂಬಲ-ಸಹಕಾರ ನೀಡುತ್ತಾ ಬಂದಿದೆ.

ಸಮಿತಿ ಪ್ರಕಟಿಸಿದ `ಅನಾವರಣ’ ಪುಸ್ತಕದ ಕ್ರಮ 17ರಲ್ಲಿ ಈ ಪ್ರಕರಣವನ್ನು ಉಲ್ಲೇಖಿಸಿ ಸತ್ಯವನ್ನು ಅನಾವರಣ ಮಾಡಲಾಗಿದೆ. ಸತ್ಯಮೇವ ಜಯತೇ.

– ಕೆ ಸೋಮನಾಥ ನಾಯಕ್, ಪ್ರಧಾನ ಸಂಚಲಾಲಕರು ಮತ್ತು ವಕ್ತಾರರು, ಜಂಟಿ ಕ್ರಿಯಾ ಸಮಿತಿ, ನಾಗರಿಕ ಸೇವಾ ಟ್ರಸ್ಟ್, ಗುರುವಾಯನಕೆರೆ.