3,600 ಕೋಟಿ ರೂ ವೆಚ್ಚದ ಶಿವಾಜಿ ಸ್ಮಾರಕ ನಿರ್ಮಾಣಕ್ಕೆ ಅವಸರವೇಕೆ ?

ರೈತರ, ಮೀನುಗಾರರ ಕಲ್ಯಾಣಕ್ಕಿಂತ ಶಿವಾಜಿ ಪ್ರತಿಮೆಯೇ ಇಂದಿನ ಅಗತ್ಯವೇ ?

  • ಝೈನಾಬ್ ಅಹ್ಮದ್

ಮಹಾರಾಷ್ಟ್ರದಲ್ಲಿ 192 ಮೀಟರ್ ಎತ್ತರದ ಬೃಹತ್ ಶಿವಾಜಿ ಸ್ಮಾರಕಕ್ಕೆ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಈ ಯೋಜನೆಯ ಮೂಲಕ ಅಮೆರಿಕಾದ  ಸ್ಟಾಚ್ಯೂ ಆಫ್ ಲಿಬರ್ಟಿ ಇದರ ಎರಡು ಪಟ್ಟು ಎತ್ತರದÀ ಪ್ರತಿಮೆ ನಿರ್ಮಿಸುವ ಕೆಲಸಕ್ಕೆ ಕೈಹಾಕಲು ಸರಕಾರಕ್ಕೆ ಅವಸರವಿರುವಂತೆ ಕಾಣುತ್ತದೆ. ಸಮಾಜದ ಒಂದು ವರ್ಗವನ್ನು ಓಲೈಸುವ ಸಲುವಾಗಿ ಹಾಗೂ ರಾಜಕೀಯ ಹಾಗೂ ಚುನಾವಣಾ ದೃಷ್ಟಿಯಿಂದ ಇಂತಹ ಒಂದು ಬೃಹತ್ ಯೋಜನೆಯನ್ನು  ಕೈಗೆತ್ತಿಕೊಳ್ಳುವ ಅಗತ್ಯವಿದೆಯೇ ಎಂಬ ಪ್ರಶ್ನೆ ಸಹಜವಾಗಿ ಎದುರಾಗುತ್ತಿದೆ.

ಮರಾಠಾ ನಾಯಕರು  ಶಿವಾಜಿಯ ಹೆಸರನ್ನು ಉಲ್ಲೇಖಿಸಿ ಲಾಭ ಗಳಿಸಲು ಯತ್ನಿಸುತ್ತಿದ್ದಾರೆಂದು 80ರ ದಶಕದಲ್ಲಿ  ಖ್ಯಾತ ವಿದ್ವಾಂಸ ಎ ಎಚ್ ಸಾಲುಂಕೆ  ಆರೋಪಿಸಿದ್ದರು. ಇದೀಗ ಈ ರೂ 3,600 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡುವ ಮೂಲಕ ಮೋದಿ ಹಾಗೂ ಶಿವಸೇನೆ  ಮತ್ತೊಮ್ಮೆ ಸಾಲುಂಖೆ ಅವರ ಮಾತುಗಳನ್ನು ನಿಜವಾಗಿಸಿದ್ದಾರೆ.

ಪರಿಸರವಾದಿಗಳಿಂದ ಬಲವಾದ ವಿರೋಧದ ನಡುವೆಯೇ ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋದ ಬಗೆ ನಿಜವಾಗಿಯೂ ಆತಂಕಕಾರಿ. ಈ ಯೋಜನೆ ಜಲಚರಗಳಿಗಲ್ಲದೆ ಸಾವಿರಾರು ಮೀನುಗಾರರ ಬದುಕಿಗೂ ಕೊಳ್ಳಿಯಿಡುವುದೆಂಬ ಪರಿಸರವಾದಿಗಳ ಕೂಗಿಗೆ ಬೆಲೆಯೇ ಇಲ್ಲದಂತಾಗಿದೆ. ಪ್ರತಿ ದಿನ ಕನಿಷ್ಠ 9 ರೈತರು ಆತ್ಮಹತ್ಯೆ ಮಾಡಿಕೊಳ್ಳುವ ರಾಜ್ಯವೊಂದರ ಮುಖ್ಯಮಂತ್ರಿಯಾಗಿರುವ ದೇವೇಂದ್ರ ಫಡ್ನವಿಸ್ ಅವರು  ಈ ಶಿವಾಜಿ ಸ್ಮಾರಕದ ಬದಲು ಅದಕ್ಕೆ ಉಪಯೋಗಿಸಲಾಗುವ ರೂ 3600 ಕೋಟಿ ಹಣವನ್ನು ರೈತರ ಕಲ್ಯಾಣಕ್ಕಾಗಿ ಉಪಯೋಗಿಸಬಹುದಿತ್ತಲ್ಲವೇ ಎಂಬ ಪ್ರಶ್ನೆಯೂ ಎದುರಾಗಿದೆ.

2008ರಲ್ಲಿ ಅಂದಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದಿಂದ ಪ್ರಸ್ತಾಪಿಸಲ್ಪಟ್ಟ ಈ ಬೃಹತ್ ಯೋಜನೆಯಿಂದಾಗಿ ಅರಬ್ಬೀ ಮಹಾ ಸಾಗರದ 110 ಕಿಮೀ ಪ್ರದೇಶದಲ್ಲಿ  ಬಹಳಷ್ಟು ಪರಿಸರ ಸಂಬಂಧಿ ಸಮಸ್ಯೆಗಳು ಉದ್ಭವವಾಗುವುದೆಂಬ ಕಾರಣ ನೀಡಿ ಪರಿಸರವಾದಿಗಳು ಹಾಗೂ ಮೀನುಗಾರರು ಅದನ್ನು ಬಲವಾಗಿ ವಿರೋಧಿಸಿದ್ದರು.

ಸುಮಾರು 80,000 ಮಂದಿ ಮೀನುಗಾರಿಕೆಯನ್ನೇ ಬದುಕಿಗೆ ಅವಲಂಬಿಸಿದ್ದಾರೆ. ಈ ಯೋಜನೆ ಕಾರ್ಯಗತಗೊಂಡಲ್ಲಿ ಶಿವಾಜಿ ಸ್ಮಾರಕಕ್ಕೆ  ಗೇಟ್ ವೇ ಆಫ್ ಇಂಡಿಯಾ ಹಾಗೂ ನಾರಿಮನ್ ಪಾಯಿಂಟ್ ಪಕ್ಕದಿಂದ ಪ್ರವಾಸಿಗರನ್ನು  ಕರೆದುಕೊಂಡು ಬರುವ ದೋಣಿಗಳು ಮೀನುಗಾರಿಕೆ ನಡೆಸುವ ಪ್ರದೇಶದಿಂದಲೇ ಹಾದು ಹೋಗಬೇಕಾಗುತ್ತದೆ.

ಪರಿಸರ ಪರಿಣಾಮ ವಿಶ್ಲೇಷಣಾ ವರದಿ (ಇಐಎ ರಿಪೋರ್ಟ್) ಪ್ರಕಾರ ಈ ಯೋಜನೆಯಿಂದಾಗಿ ವಾಯು ಮಾಲಿನ್ಯ ಹೆಚ್ಚಾಗುವುದಲ್ಲದೆ ದಕ್ಷಿಣ ಮುಂಬೈ ರಸ್ತೆಗಳಲ್ಲಿ ವಾಹನ ದಟ್ಟಣೆ ಉಲ್ಬಣಗೊಂಡು ತ್ಯಾಜ್ಯ ಸಮಸ್ಯೆಯೂ ಉದ್ಭವವಾಗುವುದು. ವಲಸೆ ಹೋಗುವ ಹಕ್ಕಿಗಳ ದಾರಿಗೂ ಈ ಯೋಜನೆ ಅಡ್ಡಿಯಾಗುವುದೆಂಬುದು ಪರಿಸರವಾದಿಗಳ ದೂರವಾಗಿದೆ.

ಈ ಯೋಜನೆ ಸಂಪೂರ್ಣಗೊಂಡು ಸಾರ್ವಜನಿಕರಿಗೆ ತೆರೆದುಕೊಂಡಾಗ ಅಲ್ಲಿಗೆ 11 ಲಕ್ಷ ಲೀಟರ್ ನೀರಿನ ಅಗತ್ಯವಿರುವುದಲ್ಲದೆ,  ಒಂದು ಲಕ್ಷ ಲೀಟರ್ ತ್ಯಾಜ್ಯ ನೀರು ಹಾಗೂ 3000 ಕೇಜಿ ಘನ ತ್ಯಾಜ್ಯಗಳು ಕೂಡ ಉತ್ಪಾದಿಸಲ್ಪಟ್ಟು ಹಲವು ಸಮಸ್ಯೆಗಳನ್ನೊಡ್ಡಲಿವೆ. ಅಷ್ಟೇ ಅಲ್ಲ ಈ ಪ್ರತಿಮೆಯನ್ನು ಬೆಳಗಿಸಲು ಸಾಕಷ್ಟು ವಿದ್ಯುತ್ ಕೂಡ ಅಗತ್ಯವಿದೆ.

ಶಿವಾಜಿ ಒಬ್ಬ ಮರಾಠಾ ನಾಯಕನಾಗಿರುವುದರಿಂದ ಆತನ ಹೆಸರನ್ನು  ರಾಜ್ಯದ ಶಿವಸೇನೆ ಸಾಕಷ್ಟು ಬಳಸಿಕೊಂಡಿದೆ – ಹಾಗೂ ದುರುಪಯೋಗ ಪಡಿಸಿದೆ ಕೂಡ. ಮರಾಠಿಗರಲ್ಲದವರು ಮರಾಠಿಗಳ ಉದ್ಯೋಗಗಳನ್ನು ಸೆಳೆದಿದ್ದಾರೆಂಬುದು ಶಿವಸೇನೆ ಆಗಾಗ ಮಾಡುವ ಆರೋಪ.  ಈ ಶಿವಾಜಿ ಸ್ಮಾರಕ ತಲೆಯೆತ್ತಲಿರುವ ಸ್ಥಳದಲ್ಲಿರುವ ಮೀನುಗಾರ ಸಮುದಾಯಗಳಾದ ಕೋಲಿಗಳು ಆ ಪ್ರದೇಶದ ಮೂಲನಿವಾಸಿಗಳೆಂದು ಈ ನಿಜವಾದ `ಮರಾಠರಿಗೆ’ ತಿಳಿದಿಲ್ಲವೇನು ? ಈ ಯೋಜನೆಯಿಂದ ಈ ಪ್ರದೇಶದ ನಿಜವಾದ ಮಣ್ಣಿನ ಮಕ್ಕಳು ತಮ್ಮ ಕಸುಬನ್ನು ನಡೆಸಲು ಹೆಣಗಾಡುವಂತಹ ಪರಿಸ್ಥಿತಿ ಈ ಪ್ರತಿಮೆ ತಲೆಯೆತ್ತಿದ ನಂತರ ನಿರ್ಮಾಣವಾಗಬಹುದು. ಆದರೆ  ಶಿವಾಜಿ ಬದುಕಿದ್ದಾಗ ಅವರಿಗೆ ಇಂತಹ ಗತಿ ಬಂದೊದಗಿದ್ದರೆ ಆತ ಅದನ್ನು ಖಂಡಿತವಾಗಿ ಸಹಿಸುತ್ತಿರಲಿಲ್ಲ.

ಶಿವಾಜಿ ಒಬ್ಬ ಧೀರೋದ್ಧಾತ ಹೋರಾಟಗಾರನೆಂಬುದರ ಬಗ್ಗೆ ಎರಡು ಮಾತಿಲ್ಲ. ಆದರೆ ವ್ಯಕ್ತಿ ಪೂಜೆ ನಮ್ಮ ಪ್ರಜಾಪ್ರಭುತ್ವದ ಆಶಯಕ್ಕೆ  ತಕ್ಕುದಲ್ಲ. ಮೋದಿಯನ್ನು ಈ ಬೃಹತ್ ಶಿವಾಜಿ ಪ್ರತಿಮೆಯ ಯೋಜನೆಗೆ ಶಿಲಾನ್ಯಾಸ ನೆರವೇರಿಸಲು  ಆಮಂತ್ರಿಸಿರುವುದು ಒಂದು ಚಾಣಾಕ್ಷ  ರಾಜಕೀಯ ಕ್ರಮವಾಗಿದ್ದು, ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಬಿಎಂಸಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ಮಾಡಲಾಗಿದೆ ಎಂಬುದು ನಿಸ್ಸಂಶಯ.

ಯೋಜನೆ ಕೈಬಿಡಲು ಆನಲೈನ್ ಪಿಟಿಶನ್

 ಮುಂಬೈ ನಗರದ ಫ್ರೀಲಾನ್ಸ್ ಪತ್ರಕರ್ತೆ  ಕರಿಷ್ಮಾ ಉಪಾಧ್ಯಾಯ ಅವರು ಚೇಂಜ್.ಆರ್ಗ್ ಜಾಲತಾಣದಲ್ಲಿ ಈ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಆನಲೈನ್ ಪಿಟಿಶನ್ ಆರಂಭಿಸಿದ್ದು ಅದನ್ನು ಈಗಾಗಲೇ 18,000 ಮಂದಿ ಬೆಂಬಲಿಸಿದ್ದಾರೆ.

“ಶಿವಾಜಿಗೆ ಗೌರವ ಸಲ್ಲಿಸಲು ಇನ್ನೂ ಉತ್ತಮ ವಿಧಾನಗಳಿವೆ.  ತೆರಿಗೆದಾರರ ಹಣವನ್ನು ಇಂತಹ ಯೋಜನೆಗಳಿಗೆ ದುರುಪಯೋಗಪಡಿಸಲಾಗುತ್ತಿರುವುದನ್ನು ನಾವೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಲೇ ಇರುತ್ತೇವೆ. ಆನಲೈನ್ ಪಿಟಿಶನ್ ಮೂಲಕ ಇಂತಹ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಬಹುದು” ಎಂದು ಆಕೆ ಹೇಳುತ್ತಾರಲ್ಲದೆ ಈ ಆನಲೈನ್ ಪಿಟಿಶನ್ ಬೆಂಬಲಿಸಿದವರ ಕೂಗು ಮುಖ್ಯಮಂತ್ರಿ ಫಡ್ನವಿಸ್ ಹಾಗೂ ಪ್ರಧಾನಿ ಮೋದಿ ಕಿವಿಗಳಿಗೆ ಬೀಳಬಹುದೆಂಬ ಆಶಾಭಾವನೆ ಹೊಂದಿದ್ದಾರೆ.