ಕಂಚಿನಡ್ಕಪದವು ಅಂಬೇಡ್ಕರ್ ಭವನ ಉದ್ಘಾಟನೆ ಭಾಗ್ಯ ಇಲ್ಲ ಯಾಕೆ

ದ ಕ ಜಿಲ್ಲೆಯ ಬಂಟ್ವಾಳ ತಾಲೂಕು ಇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ಪದವು ಎಂಬಲ್ಲಿ 2003-04 ಅವಧಿಯಲ್ಲಿ ವಿಧಾನಸಭಾ ಕ್ಷೇತ್ರವಾರು ಮಿನಿ ಅಂಬೇಡ್ಕರ್ ಭವನ ಯೋಜನೆಯಡಿ ಅಂಬೇಡ್ಕರ್ ಭವನದ ನಿರ್ಮಾಣಗೊಂಡು 10 ವರ್ಷ ಕಳೆದರೂ ಉದ್ಘಾಟನೆಗೊಳ್ಳದ ಕಾರಣ ಹಾಗೂ ಸರಿಯಾದ ಆವರಣಗೋಡೆ ಸೂಕ್ತ ಭದ್ರತೆ ಇಲ್ಲದೆ ಭವನದ ಕಟ್ಟಡದ ಕಿಟಕಿ ಬಾಗಿಲುಗಳಿಗೆ ಹಾನಿಯಾಗಿ ಭವನ ಉಪಯೋಗಕ್ಕೆ ಅನುಪಯುಕ್ತವಾಗಿದೆ. ಭವನವನ್ನು ದುರಸ್ತಿ ಮಾಡಲು ರೂಪಾಯಿ ಐದು ಲಕ್ಷ ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಗ್ರಾಮ ಪಂಚಾಯತ್ ಶೇಕಡ 25 ಮೀಸಲು ನಿಧಿಯಿಂದ ತಾಲೂಕು ಪಂಚಾಯತನಲ್ಲಿ ರೂಪಾಯಿ 70 ಸಾವಿರ ಅನುದಾನ ನೀಡಿರುತ್ತದೆ. 2016-17ರಲ್ಲಿ ರೂಪಾಯಿ ಎಂಭತ್ತು ಸಾವಿರ ಮೀಸಲಿರಿಸಲಾಗಿದೆ. ಹೀಗಿದ್ದರೂ ಯಾವುದೋ ದುರುದ್ದೇಶದಿಂದ ಅಂಬೇಡ್ಕರ್ ಭವನ ನಿರ್ಮಾಣಗೊಂಡು 14 ವರ್ಷ ಕಳೆದರೂ ಕಟ್ಟಡ ಬಳಕೆಗೆ ಸಿಕ್ಕಿಲ್ಲ
ಸ್ಥಳೀಯರು ಅಂಬೇಡ್ಕರ್ ಭವನದಲ್ಲಿ ಸಭೆಗಳನ್ನು ನಡೆಸುವ ಸಲುವಾಗಿ ಪಂಚಾಯತನಲ್ಲಿ ಅನುಮತಿ ಪಡೆಯಲು ಪತ್ರ ನೀಡಿದಾಗ ಉದ್ಘಾಟನೆಗೊಳ್ಳದೇ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಉತ್ತರ ನೀಡಿರುತ್ತಾರೆ. ಆದರೆ ಯಾವುದೋ ಕಾಮಗಾರಿಯನ್ನು ನಡೆಸುವ ಕಾರ್ಮಿಕರಿಗೆ ಅಂಬೇಡ್ಕರ್ ಭವನದಲ್ಲೇ ತಂಗಲು ಅನುಮತಿ ನೀಡಿದ್ದು ಅವರು ಅಲ್ಲೇ ಅಡುಗೆಗಳನ್ನು ಮಾಡಿಕೊಂಡು ವಾಸ್ತವ್ಯವಿದ್ದಾರೆ. ಪರಿಶಿಷ್ಟರಿಗೆ ಅವಮಾನ ಮಾಡುವ ರೀತಿಯಲ್ಲಿ ಸಂಬಂಧಪಟ್ಟವರು ವರ್ತಿಸುತ್ತಿದ್ದಾರೆ. ಅಲ್ಲದೆ ಇದು ಗ್ರಾಮ ಪಂಚಾಯತಿಯ ಬೇಜವಾಬ್ದಾರಿತನವಾಗಿದೆ. ಆದುದರಿಂದ ಕೂಲಂಕುಷವಾಗಿ ಪರಿಶೀಲನೆ ನಡೆಸಿ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಹಾಗೂ ಅಂಬೇಡ್ಕರ್ ಭವನವನ್ನು ಅತೀ ಶೀಘ್ರದಲ್ಲೇ ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಅನುವು ಮಾಡಿಕೊಡಬೇಕಾಗಿ ಈ ಮೂಲಕ ವಿನಂತಿ

  • ಸುಧಾಕರ್ ಬೋಳೂರು
    ಜಿಲ್ಲಾ ಸಂಘಟನಾ ಸಂಚಾಲಕರು
    ಕ ದಸಂಸ ಮಂಗಳೂರು