ಮದುವೆಯಾದ ಮೇಲೆ ಅವರು ಬದಲಾಗಿದ್ದೇಕೆ?

ಮದುವೆಯಾದ ನಂತರ ಒಂದೇ ಸೂರಿನಡಿ ಬದುಕುವಾಗ ವಾಸ್ತವ ಅರಿವಾಗಿ ಭ್ರಮನಿರಸನವಾಗುತ್ತದೆ. ಹುಡುಗನ ನಿಜಬಣ್ಣದ ಅರಿವು ಹುಡುಗಿಗಾಗುವುದು ಆಗಲೇ.

ಪ್ರ : ಎರಡು ವರ್ಷ ಅವರ ಜೊತೆ ಓಡಾಡಿದ ಮೇಲೇ ನಮ್ಮ ಮದುವೆಯಾಗಿದ್ದು. ಮದುವೆಗಿಂತ ಮೊದಲು ಅವರ ಮೃದುವಾದ sಸ್ವಭಾವಕ್ಕೇ ನಾನು ಮರುಳಾಗಿದ್ದು. ಅವರು ನನಗೋಸ್ಕರ ಗಂಟೆಗಟ್ಟಲೆ ಕಾಯುತ್ತಿದ್ದುದು ಇನ್ನೂ ನನ್ನ ನೆನಪಲ್ಲಿದೆ. ಅವರ ತಾಳ್ಮೆ ನೋಡಿ ನನಗೇ ಆಶ್ಚರ್ಯವಾಗುತ್ತಿತ್ತು. ಆದರೆ ಈಗ ಎಲ್ಲವೂ ಉಲ್ಟಾ. ಮದುವೆಯಾದ ಒಂದೇ ತಿಂಗಳಲ್ಲಿ ನಾನು ಮದುವೆಯಾಗಿದ್ದು ನಾನು ಪ್ರೀತಿಸುತ್ತಿದ್ದವರನ್ನಾ ಅನ್ನುವಷ್ಟು ಅವರ ವರ್ತನೆ ಬದಲಾಗಿದೆ. ಪ್ರತಿಯೊಂದಕ್ಕೂ ಹರಿಹಾಯುತ್ತಾರೆ. ಸಣ್ಣ ಪುಟ್ಟ  ತಪ್ಪನ್ನೂ ದೊಡ್ಡದು ಮಾಡಿ ಉಳಿದ ಕುಟುಂಬದವರೆದುರು ನನ್ನ ಮೇಲೆ ರೇಗಾಡಿ ಅವಮಾನಿಸುತ್ತಾರೆ. ಮೊದಲಿನ ಹಾಗೆ ನನ್ನನ್ನು ಪ್ರೀತಿಸುವುದೂ ಇಲ್ಲ. ನಾವು ಲವ್ ಮಾಡುತ್ತಿದ್ದಾಗ ಅವರು ನನ್ನನ್ನು ಓಲೈಸುತ್ತಿದ್ದುದೆಲ್ಲ ನೆನಪಾಗಿ ನಾವು ಹಾಗೇ ಲವ್‍ಬಡ್ರ್ಸ್ ತರಹ ಇದ್ದಿದ್ದರೇ ಚೆನ್ನಾಗಿತ್ತು ಅನಿಸುತ್ತಿದೆ. ಅವರು ನನ್ನ ರೂಮಿಗೇ ಬಂದು ಪಾಸ್ತಾ, ಮ್ಯಾಗಿಯನ್ನೆಲ್ಲ ತಾನೇ ಮಾಡಿ ನನಗೆ ತಿನ್ನಿಸುತ್ತಿದ್ದ ಆ ದಿನಗಳು ನನ್ನ ಜೀವನದಲ್ಲಿ ಪುನಃ ಬರಲಾರದೇನೋ. ಈಗ ನನಗೆ ಅಡುಗೆಯಲ್ಲಿ ಸ್ವಲ್ಪವೂ ಸಹಾಯ ಮಾಡುವುದಿಲ್ಲ. ಚಿಕ್ಕಪುಟ್ಟ ಕೆಲಸವನ್ನೂ ನಾನೇ ಮಾಡಿಕೊಡಬೇಕು. ಸ್ವಲ್ಪ ಹೆಚ್ಚುಕಮ್ಮಿಯಾದರೂ ರೌದ್ರಾವತಾರ ತಾಳುತ್ತಾರೆ.  ಅವರನ್ನು ಮೊದಲಿನ ಹಾಗೇ ಮಾಡುವುದು ಸಾಧ್ಯಾನಾ?

: ಒಂದಂತೂ ಸತ್ಯ … ಲವ್ ಮ್ಯಾರೇಜೇ ಇರಲಿ. ಆರೇಂಜ್ಡ್ ಮ್ಯಾರೇಜೇ ಆಗಿರಲಿ, ಮದುವೆಯಾದ ನಂತರ ಗಂಡ ಗಂಡನೇ.  ಹಿರಿಯರು ನೋಡಿ ಮಾಡಿದ ಮದುವೆಯಲ್ಲಿ ಹುಡುಗಿ ಗಂಡ ಮತ್ತು ಅವರ ಮನೆಯವರ ಬಗ್ಗೆ ಸ್ವಲ್ಪ ಆತಂಕದಿಂದಲೇ ಆ ಮನೆಗೆ ಕಾಲಿಡುತ್ತಾಳೆ. ಅವರ ಗುಣಸ್ವಭಾವಕ್ಕೆಲ್ಲ ಹೊಂದಿಕೊಂಡು ಹೋಗಬೇಕಾಗುತ್ತದೆ ಅಂತ ಅವಳ ಮನಸ್ಸು ಮೊದಲೇ ಪ್ರಿಪೇರ್ ಆಗಿರುತ್ತದೆ. ಆದರೆ ಲವ್ ಮ್ಯಾರೇಜಿನಲ್ಲಿ ಹುಡುಗನ ಮನಸ್ಸನ್ನು ತಾನು ಅರ್ಥಮಾಡಿಕೊಂಡಿದ್ದೇನೆ ಎನ್ನುವ ಭಾವನೆಯಲ್ಲಿಯೇ ಅವಳಿರುತ್ತಾಳೆ. ಹೆಚ್ಚಿನ ಹುಡುಗರು ಮದುವೆಗೆ ಮೊದಲು ತಮ್ಮ ಬಣ್ಣದ ಮಾತುಗಳಿಂದ ತಮ್ಮಷ್ಟು ಒಳ್ಳೆಯವರು ಪ್ರಪಂಚದಲ್ಲಿ ಬೇರ್ಯಾರೂ ಇಲ್ಲ ಅನ್ನುವಂತೆ ನಾಟಕವಾಡಿರುತ್ತಾರೆ. ತನ್ನ ಹುಡುಗಿಯನ್ನು ಓಲೈಸುವುದೇ ತನ್ನ ಜೀವನದ ಪರಮ ಉದ್ದೇಶ ಅನ್ನುವಂತೆ ವರ್ತಿಸುತ್ತಾರೆ. ಹುಡುಗಿಯೂ ಅವರು ದರ್ಶಿಸಿದ ಆ ಒಂದು ಮುಖವನ್ನು ಮಾತ್ರ ನೋಡಿರುತ್ತಾಳೆ. ಮದುವೆಯಾದ ನಂತರ ಒಂದೇ ಸೂರಿನಡಿ ಬದುಕುವಾಗ ವಾಸ್ತವ ಅರಿವಾಗಿ ಭ್ರಮನಿರಸನವಾಗುತ್ತದೆ. ಅವರ ನಿಜಬಣ್ಣದ ಅರಿವು  ಅವಳಿಗಾಗುವುದು ಆಗಲೇ. ನಿಮ್ಮ ಗಂಡನೂ ಅದಕ್ಕೆ ಭಿನ್ನರಾಗಿಲ್ಲ. ಅವರು ಅತೀ ಮುಂಗೋಪ, ತಾಳ್ಮೆಗೇಡಿತನ ತೊರಿಸುತ್ತಿದ್ದರೆ ಒಮ್ಮೆ ಅವರ ಮೂಡ್ ಸರಿ ಇರುವಾಗ ಕುಳಿತು ಮಾತಾಡಿ. ನಿಮ್ಮಿಂದ ಏನಾದರೂ ತಪ್ಪು ನಡೆದಿದ್ದರೂ ಅವರು ಈ ರೀತಿ ರಂಪ ಮಾಡುವುದಕ್ಕಿಂತ ನಿಧಾನಕ್ಕೆ ಹೇಳಿದರೆ ಪರಿಸ್ಥಿತಿ ಬಿಗಡಾಯಿಸುವುದಿಲ್ಲ ಅಂತ ಹೇಳಿ. ನಿಮಗೂ ಅವರ ಈ ರೀತಿ ವರ್ತನೆಯಿಂದ ನೋವಾಗಿದೆ ಅಂತ ತಿಳಿಸಿ. ಅವರು ಸ್ವಲ್ಪವೂ ಸುಧಾರಿಸದಿದ್ದರೆ ನಿಮ್ಮ ಮೇಲೆ ಪ್ರೀತಿ ಇರುವ ಅವರ ಕುಟುಂಬದವರಿಂದ ಹೇಳಿಸಿ. ಈಗಲೇ ನಿಮ್ಮ ನಡುವಿನ ವ್ಯತ್ಯಾಸ ಸರಿಪಡಿಸಿಕೊಳ್ಳದಿದ್ದರೆ ಮುಂದೆ ಪರಿಸ್ಥಿತಿ ಕೈಮೀರಿದರೆ ಏನೂ ಮಾಡಲಿಕ್ಕಾಗುವುದಿಲ್ಲ.