ಮಹಿಳೆಯರಿಗೆ ಮಾತ್ರ ವಸ್ತ್ರಸಂಹಿತೆ ಏಕೆ ?

ಪುರುಷರು ಮಹಿಳೆಯರ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸುವ ಸಲುವಾಗಿಯೇ ಮಹಿಳೆಯರಿಗೆ ವಸ್ತ್ರ ಸಂಹಿತೆ ವಿಧಿಸುತ್ತಿದ್ದಾರೆ.

  • ರಾಧಿಕಾ ಐಯ್ಯಂಗಾರ್

ಮಹಿಳೆಯರು ಧರಿಸುವ ಬಟ್ಟೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಚರ್ಚೆಯ ವಿಷಯವಾಗಿರುವುದು ಸೋಜಿಗವೇ ಸರಿ. ಮಹಿಳೆಯರೇನು ಧರಿಸಬೇಕು ಹಾಗೂ ಯಾವ ಥರದ ಬಟ್ಟೆ ಧರಿಸಬಾರದು ಎಂಬ ನಿರ್ಧಾರ ಯಾವತ್ತೂ ಚರ್ಚಾಸ್ಪದ ವಿಚಾರ. ಕೆಲ ದಿನಗಳ ಹಿಂದೆ ತಿರುವನಂತಪುರದಲ್ಲಿರುವ ಶ್ರೀ ಪದ್ಮನಾಭ ಸ್ವಾಮಿ ದೇವಾಲಯವು ತನ್ನ ವಸ್ತ್ರ ಸಂಹಿತೆಯಲ್ಲಿ ಮಾರ್ಪಾಡು ತಂದು ಮಹಿಳೆಯರು  ಚೂಡಿದಾರ್ ಹಾಗೂ ಸಲ್ವಾರ್ ಧರಿಸಬಹುದೆಂದು ಹೇಳಿತು. ಈ ಹಿಂದೆ ಸೀರೆ ಮತ್ತು ಲಂಗ ದಾವಣಿ ಧರಿಸಿದ ಮಹಿಳೆಯರಿಗೆ ಮಾತ್ರ ದೇವಳದಲ್ಲಿ ಪ್ರವೇಶವೆಂಬ  ನಿಯಮವಿತ್ತು.

ಆದರೆ ಮರು ದಿನವೇ ತನ್ನ ಚೂಡಿದಾರ್ ವಸ್ತ್ರ ಸಂಹಿತೆಯಿಂದ ದೇವಳ ಹಿಂದೆ ಸರಿಯಿತು. ಅದಕ್ಕೆ ಕಾರಣ ಸಾರ್ವಜನಿಕರಿಂದ, ಮುಖ್ಯವಾಗಿ ಕೇರಳ ಬ್ರಾಹ್ಮಣ ಸಭಾ ವತಿಯಿಂದ ನಡೆದ ಪ್ರತಿಭಟನೆಗಳು.

ಕೆಲವು ಶಿಕ್ಷಣ ಸಂಸ್ಥೆಗಳು ಕೂಡ ವಿದ್ಯಾರ್ಥಿನಿಯರು ಯಾವ ವಿಧದ ವಸ್ತ್ರ ಧರಿಸಬಹುದೆಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಉದಾಹರಣೆಗೆ ಶ್ರೀಲಂಕಾದಲ್ಲಿ ಕೆಲವು ಶಾಲೆಗಳು ತಮ್ಮಲ್ಲಿಗೆ ಮ್ಕಕಳನ್ನು ಕರೆದುಕೊಡು ಹೋಗುವ ತಾಯಂದಿರೇನು ಧರಿಸಬೇಕೆಂಬುದನ್ನೂ ನಿರ್ಧರಿಸುತ್ತವೆ. ಇಲ್ಲಿ ಸೀರೆ ಹಾಗೂ ನೀಳಂಗಿಯನ್ನು ಅನುಮತಿಸಲಾಗುತ್ತಿತ್ತಾದರೆ, ಸ್ಕರ್ಟ್ ಅಥವಾ ತೋಳಿಲ್ಲದ ಶರ್ಟ್ ಧರಿಸುವುದನ್ನು ತಾಯಂದಿರಿಗೆ ನಿಷೇಧಿಸಲಾಗಿತ್ತು. ಮುಂದೆ ಅಲ್ಲಿನ ಸರಕಾರ ಇಂತಹ ನಿಯಮಗಳನ್ನು ಅನುಮತಿಸಲಿಲ್ಲವೆಂಬುದು ಬೇರೆ ಸಂಗತಿ.

ಕೆಲ ದಿನಗಳ ಹಿಂದೆ ನೆದರಲ್ಯಾಂಡ್ ದೇಶದ ಪಾರ್ಲಿಮೆಂಟ್ ತೆಗೆದುಕೊಂಡ ನಿರ್ಧಾರದಂತೆ ಅಲ್ಲಿನ ಶಾಲೆಗಳು, ಆಸ್ಪತ್ರೆಗಳು, ಸಾರ್ವಜನಿಕ ಸಾರಿಗೆ ಹಾಗೂ ಸರಕಾರಿ ಕಟ್ಟಡಗಳಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಇದನ್ನು ಸೆನೇಟ್ ಇನ್ನಷ್ಟೇ ಅಂಗೀಕರಿಸಬೇಕಾದರೂ ಈ ನಿರ್ಧಾರವನ್ನು ಈಗಾಗಲೇ ಪಾರ್ಟಿ ಫಾರ್ ಫ್ರೀಡಂ ನಾಯಕ ಗೀರ್ಟ್ ವೈಲ್ಡರ್ಸ್ ಸಹಿತ ಹಲವಾರು ಮಂದಿ ಪ್ರಶಂಸಿಸುತ್ತಿದ್ದಾರೆ. ವೈಲ್ಡರ್ಸ್ ಅಂತೂ ರಸ್ತೆಗಿಳಿದು ತಾನೇನಾದರೂ ಚುನಾವಣೆ ಗೆದ್ದರೆ ಸಂಪೂರ್ಣ ಬುರ್ಖಾ ನಿಷೇಧ ಹೇರುವುದಾಗಿ ಘೋಷಿಸಿದರು.

50ರ ದಶಕದಲ್ಲಿ ಇಟಲಿ ಹಾಗೂ ಫ್ರಾನ್ಸ್ ದೇಶದ ಕೆಲವೆಡೆ ಟೂ-ಪೀಸ್ ಬಿಕಿನಿ ಧರಿಸಿದವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿತ್ತು. ಇಂತಹ ಬಟ್ಟೆಗಳು ಅಸಭ್ಯ ಎಂಬ ಯೋಚನೆಯಿತ್ತು. ಫ್ರಾನ್ಸ್ ದೇಶ 2011ರಲ್ಲಿ ಬುರ್ಖಾ ನಿಷೇಧ ಹೇರಿದರೆ, 2016ರಲ್ಲಿ ಅದು ಬುರ್ಖಿನಿಯನ್ನು ನಿಷೇಧಿಸಿತು. ಎರಡೂ ನಿಷೇಧಗಳು ಮುಸ್ಲಿಂ ಸಮುದಾಯದ ಮೇಲಿನ ಭಯದಿಂದ ಜಾರಿಗೊಳಿಸಲಾಗಿತ್ತು.

ನಿಷೇಧ ಸಂಪೂರ್ಣ ಮುಸ್ಲಿಂ ಸಮುದಾಯಕ್ಕಾದರೂ ಅದರ ಪರಿಣಾಮವನ್ನು ಹೆಚ್ಚಾಗಿ ಮಹಿಳೆಯರೇ ಅನುಭವಿಸಬೇಕಿತ್ತು.

ಮಹಿಳೆಯರು ಧರಿಸುವ ಬಟ್ಟೆಗಳ ಬಗ್ಗೆ ಕಾನೂನು ಜಾರಿಗೊಳಿಸುವಲ್ಲಿ ಫ್ರಾನ್ಸ್ ಸಾಕಷ್ಟು ಕುಖ್ಯಾತಿ ಪಡೆದಿದೆ. ಮಹಿಳೆಯರಿಗೆ ಟ್ರೌಸರ್ಸ್ ನಿಷೇಧ ವಿಧಿಸುವ 213 ವರ್ಷ ಹಳೆಯ ಕಾನೂನನ್ನು 2013 ರಲ್ಲಷ್ಟೇ ಹಿಂದಕ್ಕೆ ಪಡೆಯಲಾಗಿತ್ತು.

ಭಾರತಕ್ಕೆ ಬರುವ ವಿದೇಶಿ ಮಹಿಳೆಯರು ಇಲ್ಲಿನ ಸಂಪ್ರದಾಯವನ್ನು ಗೌರವಿಸುವಂತಹ ಬಟ್ಟೆ  ಧರಿಸಬೇಕೆಂದು ಈ ವರ್ಷದ ಆಗಸ್ಟ್ ತಿಂಗಳಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮ ಹೇಳಿದ್ದು ಸುದ್ದಿಯಾಗಿತ್ತು. ವಿದೇಶಿ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ತಾನು ಹೀಗೆ ಹೇಳಿದ್ದಾಗಿ ಅವರು ಸಮರ್ಥಿಸಿಕೊಂಡಿದ್ದÀರಲ್ಲದೆ ವಿದೇಶಿ ಮಹಿಳೆಯರು ಗಿಡ್ಡ ಅಂಗಿ ಶರ್ಟುಗಳನ್ನು ಧರಿಬಾರದು ಎಂದಿದ್ದರು.

ಐತಿಹಾಸಿಕವಾಗಿ ಹೇಳುವುದಾದರೆ ರಾಜಕೀಯ ಹಾಗೂ ಧಾರ್ಮಿಕ ಪ್ರಾಧಿಕಾರಗಳು ಮಹಿಳೆಯರು ಯಾವ ರೀತಿಯಾಗಿ ಬಟ್ಟೆ ಧರಿಸಬೇಕೆಂಬುದನ್ನು  ನಿರ್ಧರಿಸಲು ಪ್ರಯತ್ನಿಸಿ ಇದನ್ನು ಅವರ ಪ್ರಯೋಜನಕ್ಕಾಗಿಯೇ ಹೇಳಲಾಗುತ್ತಿದೆ ಎಂಬ ಸಬೂಬು ಕೂಡ ನೀಡುತ್ತಿದ್ದವು. ಹಿಂದೂ ಧರ್ಮದಲ್ಲಿ ವಿವಾಹಿತ ಮಹಿಳೆಯರು ಮಂಗಲಸೂತ್ರ, ಸಿಂಧೂರ, ಕಾಲುಂಗುರ ಧರಿಸುವುದು ಕಡ್ಡಾಯವಾಗಿದ್ದರೆ ಪುರುಷರು ವಿವಾಹಿತರು ಎಂದು ತೋರಿಸಿಕೊಳ್ಳಲು ಬೆರಳುಂಗುರು ಹೊರತುಪಡಿಸಿ ಬೇರೇನನ್ನೂ ಧರಿಸುವ ಹಾಗಿರಲಿಲ್ಲ. ಎರಡನೇ ಶತಮಾನದಲ್ಲಿ ರೋಮನಲ್ಲೂ ಇಂತಹುದೇ ಕೆಲವೊಂದು ನಿಯಮಗಳು ವಿವಾಹಿತ ಮಹಿಳೆಯರಿಗೆ ಹಾಗೂ ವಿಧವೆಯರಿಗೆ ಅನ್ವಯವಾಗುತಿದ್ದವು, ಮಹಿಳೆಯೊಬ್ಬಳು ಧರಿಸಿದ ವಸ್ತ್ರ ಅದರ ಉದ್ದ ಗಾತ್ರ, ಅದು ಆಕೆಯ ದೇಹಕ್ಕೆ ಎಷ್ಟು ಹೊಂದುತ್ತದೆ ಹಾಗೂ ಆ ಬಟ್ಟೆ ಆಕೆಯ ದೇಹವನ್ನು ಎಷ್ಟು ಎಕ್ಸಪೋಸ್ ಮಾಡುತ್ತದೆ ಎಂಬುದರ ಮೇಲೆ ಆಕೆಯ ನೈತಿಕತೆ ಹಾಗೂ  ವ್ಯಕ್ತಿತ್ವವನ್ನು ಅಳೆಯಲಾಗುತ್ತಿತ್ತು.ಪುರುಷರು ಮಹಿಳೆಯರ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸುವ ಸಲುವಾಗಿಯೇ ಇಂತಹ ಕ್ರಮಗಳಿಗೆ ಮೊರೆ ಹೋಗುತ್ತಿದ್ದರು ಹಾಗೂ ಈಗಲೂ ಇಂತಹ ಕ್ರಮ ಕೈಗೊಳ್ಳಲು ಯತ್ನಿಸುತ್ತಿದ್ದಾರೆಂಬುದು ಸ್ಪಷ್ಟ. ಬೆಲ್ಜಿಯಂ, ಸ್ವಿಝರ್ಲೆಂಡ್, ಇಟೆಲಿ ಹಾಗೂ ಶೀಘ್ರದಲ್ಲಿಯೇ ನೆದರಲ್ಯಾಂಡ್ ಸೇರಿದಂತೆ ಯುರೋಪಿನಾದ್ಯಂತ ಬುರ್ಖಾವನ್ನು ಸಂಪೂರ್ಣವಾಗಿ ಯಾ ಭಾಗಃಶವಾಗಿ ನಿಷೇಧಿಸಲಾಗಿದೆಯೆಂದರೆ ಈ ದೇಶಗಳು ಇಸ್ಲಾಂ ವಿರೋಧಿಯಷ್ಟೇ ಅಲ್ಲ ಅವುಗಳು ಮಹಿಳೆಯರ ಹಾಗೂ ಅವರ ಹಕ್ಕುಗಳಿಗೂ ಬೆನ್ನು ತೋರಿಸುತ್ತಿದ್ದಾರೆಂಬುದು ಸ್ಪಷ್ಟ.