ವೈದ್ಯರೇಕೆ ಗ್ರಾಮೀಣ ಪ್ರದೇಶಕ್ಕೆ ಹೋಗುವುದಿಲ್ಲ ?

SANYO DIGITAL CAMERA

ವೈದ್ಯಕೀಯ ಶಿಕ್ಷಣ ಮೂಲತಃ ಮೇಲ್ವರ್ಗಗಳ ಹಿತಾಸಕ್ತಿಯಿಂದಲೇ ರೂಪಿತವಾಗಿದೆ ಎಂದು ತಜ್ಞ ಮತ್ತು ಹಿರಿಯ ವೈದ್ಯರು ಆರೋಪಿಸುತ್ತಾರೆ.

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆ ಸದಾ ಜನರಿಲ್ಲದೆ ಬಣಗುಡುತ್ತಿರುತ್ತದೆ.  ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕಾದಿರುವ 28 ವರ್ಷದ ಮಹಿಳೆ ಮತ್ತು ಆಕೆಯ ಪತಿ ನರ್ಸ್ ಮತ್ತು ವೈದರಿಗಾಗಿ ದಿನವಿಡೀ ಕಾಯುತ್ತಲೇ ಕುಳಿತಿರುತ್ತಾರೆ. ಮಾಹಿತಿ ನೀಡಲೂ ಸಹ ಯಾರು ಲಭ್ಯವಿರುವುದಿಲ್ಲ.  ಆಸ್ಪತ್ರೆಯ ಹೊರ ಆವರಣ ಕಸದ ತೊಟ್ಟಿಯಂತಾಗಿದ್ದು ಬಾಗಿಲು ಸದಾ ಬೀಗ ಹಾಕಿದಂತೇ ಇರುತ್ತದೆ. ಸುಮಾರು ಸಮಯ ಕಳೆದ ನಂತರ ಆಸ್ಪತ್ರೆಗೆ ಧಾವಿಸಿ ಬರುವ ನರ್ಸ್ ಒಬ್ಬಳನ್ನು ಕಂಡ ಪತಿರಾಯ ತನ್ನ ಪತ್ನಿ ಮೂರು ದಿನಗಳಿಂದ ಕೆಮ್ಮುತ್ತಿದ್ದಾಳೆ ವೈದ್ಯರು ಎಷ್ಟು ಹೊತ್ತಿಗೆ ಬರುತ್ತಾರೆ ಎಂದು ಕೇಳಿದಾಗ ನರ್ಸ್ ವೈದ್ಯರು ಇಂದು ಬರುವುದಿಲ್ಲ ಎಂದು ಹೇಳಿ ತನ್ನ ಕೆಲಸದಲ್ಲಿ ತೊಡಗುತ್ತಾಳೆ. ದಂಪತಿಗಳು ವಿಧಿ ಇಲ್ಲದೆ ಮೌನವಾಗಿ ಹಿಂದಿರುಗುತ್ತಾರೆ. ಪಾವಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಅಧಿಕೃತ ದಾಖಲೆಗಳ ಪ್ರಕಾರ ನಾಲ್ಕು ವೈದ್ಯರಿದ್ದಾರೆ. ಆರು ಜನ ನರ್ಸ್‍ಗಳಿದ್ದಾರೆ. ಆದರೆ ಸಾಮಾನ್ಯ ವಾರ್ಡ್‍ನಲ್ಲಿದ್ದ ನಾಲ್ಕು ರೋಗಿಗಳನ್ನು ನೋಡಿಕೊಳ್ಳಲು ಒಬ್ಬ ನರ್ಸ್ ಮಾತ್ರವೇ ಇರುತ್ತಾರೆ. ಆಸ್ಪತ್ರೆಯ ಬಹುತೇಕ ಬಾಗಿಲುಗಳಿಗೆ ಬೀಗ ಜಡಿದಿರಲಾಗುತ್ತದೆ. ಕರ್ನಾಟಕದ ಇತರ ಭಾಗಗಳಲ್ಲಿನ ಸರ್ಕಾರಿ ಆಸ್ಪತ್ರೆಗಳ ಪಾಡು ಭಿನ್ನವಾಗೇನೂ ಇಲ್ಲ.

ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ ಆರೋಗ್ಯ ಸಚಿವರು ವೈದ್ಯ ಪದವಿ ಗಳಿಸುವವರು ಗ್ರಾಮೀಣ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ನೌಕರಿ ಮಾಡಲು ಹಿಂಜರಿಯುತ್ತಿರುವುದರಿಂದಲೇ ವೈದ್ಯರ ಕೊರತೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಗ್ರಾಮೀಣ ವೈದ್ಯರಿಗೆ ತಿಂಗಳಿಗೆ 1.25 ಲಕ್ಷ ವೇತನ ನೀಡಿದರೂ ಸಹ ವೈದ್ಯರು ಸಿದ್ಧರಾಗಿಲ್ಲ ಎಂದು ಸಚಿವರು ಹೇಳಿದ್ದಾರೆ. ಆದರೆ ವಾಸ್ತವ ಸನ್ನಿವೇಶ ಭಿನ್ನವಾಗಿದೆ. ವೈದ್ಯಕೀಯ ಪದವಿ ಗಳಿಸುವ ಆಕಾಂಕ್ಷಿಗಳು ತಮ್ಮ ವ್ಯಾಸಂಗ ಮುಗಿಸುವ ವೇಳೆಗೆ 30 ವರ್ಷ ದಾಟಿರುತ್ತಾರೆ. ತಮ್ಮದೇ ವಯಸ್ಸಿನ ಇತರರು ಈ ವೇಳೆಗೆ ಉತ್ತಮ ನೌಕರಿ ಗಳಿಸಿ ಜೀವನ ಸಾಗಿಸುತ್ತಿದ್ದರೂ ವೈದ್ಯರು ಭವಿಷ್ಯದ ಹಾದಿಗಾಗಿ ಅರಸುತ್ತಿರುತ್ತಾರೆ. ಹಾಗಾಗಿ ವೈದ್ಯ ಪದವಿ ಗಳಿಸಿದವರು ಉತ್ತಮ ಜೀವನಕ್ಕಾಗಿ ಹಾತೊರೆಯುತ್ತಿರುತ್ತಾರೆ. ನಗರ ಪ್ರದೇಶಗಳಲ್ಲಿ ಕುಟುಂಬದೊಂದಿಗೆ ವಾಸಿಸುವುದು ಮತ್ತು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸುವುದು ಅವರ ಕನಸಾಗಿರುತ್ತದೆ. ಇನ್ನೂ ಉನ್ನತ ವ್ಯಾಸಂಗ ಮಾಡಬಯಸುವವರು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವುದು ವ್ಯರ್ಥ ಎಂದೇ ಭಾವಿಸುತ್ತಾರೆ.

ಮೇಲಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿರುತ್ತದೆ. ಹಲವಾರು ಆಸ್ಪತ್ರೆಗಳಲ್ಲಿ ಜೈವಿಕ ರಾಸಾಯನ ಸಲಕರಣೆಗಳು ಲಭ್ಯವಿರುವುದಿಲ್ಲ. ಹಾಗಾಗಿ ಜಠರ ಸಮಸ್ಯೆಗಳು ಮತ್ತು ಥೈರಾಯ್ಡ್ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ ಎಂದು ನುರಿತ ವೈದ್ಯರು ಹೇಳುತ್ತಾರೆ. ಒಂದು ತುರ್ತು ನಿಗಾ ಘಟಕ ನಿರ್ವಹಿಸಲು ಬೇಕಾಗುವ ಸಿಬ್ಬಂದಿ ಗ್ರಾಮೀಣ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವುದೇ ಇಲ್ಲ. ಒಬ್ಬರೇ ವೈದ್ಯರು ಇರುವ ಕಡೆ ಇದು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ. ಅಪಘಾತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ರೋಗಿಗಳನ್ನು ದಾಖಲು ಮಾಡಲಾಗುತ್ತದೆ. ಕುಪಿತ ಜನಸಮೂಹಗಳನ್ನು ಎದುರಿಸುವುದು ತಮಗೆ ಕಷ್ಟವಾಗುತ್ತದೆ ಸಾಕಷ್ಟು ಭದ್ರತೆ ಒದಗಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮೀಣ ವೈದ್ಯರು ಅಲವತ್ತುಕೊಳ್ಳುತ್ತಾರೆ. ಮೇಲಾಗಿ ಮರಣೋತ್ತರ ಪರೀಕ್ಷೆ ಮತ್ತು ನ್ಯಾಯಾಲಯದಲ್ಲಿ ಸಾಕ್ಷಿಗಳಾಗಿ ಹಾಜರಾಗುವ ಪರಿಸ್ಥಿತಿಯನ್ನೂ ವೈದ್ಯರು ಎದುರಿಸಬೇಕಾಗುತ್ತದೆ. ಇದು ಮೂಲ ವ್ಯವಸ್ಥೆಯಲ್ಲೇ ಇರುವ ಸಮಸ್ಯೆಯಾಗಿದ್ದು ವೈದ್ಯಕೀಯ ಶಿಕ್ಷಣ ಮೂಲತಃ ಮೇಲ್ವರ್ಗಗಳ ಹಿತಾಸಕ್ತಿಯಿಂದಲೇ ರೂಪಿತವಾಗಿದೆ ಎಂದು ತಜ್ಞ ಮತ್ತು ಹಿರಿಯ ವೈದ್ಯರು ಆರೋಪಿಸುತ್ತಾರೆ.