ಆ ಮೇಡಂ ಯಾಕೆ ನಮ್ಮ ಮಧ್ಯೆ ಬರಬೇಕಿತ್ತು?

ಪ್ರ : ನಾನು ಆಟ್ರ್ಸ್ ಸ್ಟೂಡೆಂಟ್. ನಾನು ಸುಂದರವಾಗಿದ್ದೇನೆ ಅಂತ ನನ್ನ ಗೆಳತಿಯರಿಗೆಲ್ಲ ಹೊಟ್ಟೆಕಿಚ್ಚು. ಅನೇಕ ಹುಡುಗರು ನನ್ನ ಒಂದು ಚಿಕ್ಕ ಸ್ಮೈಲಿಗಾಗಿ ಕಾಯುತ್ತಿರುವ ವಿಷಯವೂ ನನಗೆ ಗೊತ್ತು. ಆದರೆ ನನಗೆ ಅವರ್ಯಾರ ಮೇಲೂ ಮನಸ್ಸಿಲ್ಲ. ನಾನು ಬಯಸುವುದು ನನ್ನ ಇಂಗ್ಲೀಷ್ ಲೆಕ್ಚರರನ್ನು. ಅವರು ಯಂಗಾಗಿ ಸ್ಮಾರ್ಟ್ ಇದ್ದಾರೆ. ಅವರ ಕುರುಚಲು ಗಡ್ಡ ಅವರಿಗೆ ಇನ್ನಷ್ಟು ಲುಕ್ ಕೊಟ್ಟಿದೆ. ನಾನು ಇಂಗ್ಲೀಷ್ ನಾವೆಲ್ ಜಾಸ್ತಿ ಓದುವುದರಿಂದ ಮತ್ತು ಇಂಗ್ಲೀಷ್ ಸಿನಿಮಾಗಳನ್ನೇ ಹೆಚ್ಚಾಗಿ ನೋಡುವುದರಿಂದ  ಸ್ಟೈಲಿಷ್ ಇಂಗ್ಲೀಷ್ ಮಾತಾಡುತ್ತೇನೆ. ಅದಕ್ಕಾಗಿ ಅವರಿಗೆ ನಾನೆಂದರೆ ಅಚ್ಚುಮೆಚ್ಚು. ಕಾಲೇಜು ಫಂಕ್ಷನ್‍ಗಳನ್ನು ನನಗೇ ಹೋಸ್ಟ್ ಮಾಡಲು ಹೇಳುತ್ತಾರೆ. ಆ ಬಗ್ಗೆ ಚರ್ಚಿಸಲು ನಾವಿಬ್ಬರೂ ಕ್ಲಾಸಿನಲ್ಲಿ ಮಾತ್ರವಲ್ಲದೇ ಉಳಿದ ಸಮಯದಲ್ಲೂ ಆಗಾಗ ಭೇಟಿಯಾಗುತ್ತಿರುತ್ತೇವೆ. ಅವರ ಜೊತೆ ಮಾತಾಡುವುದು ನನಗೆ ಅತೀವ ಖುಶಿ ಕೊಡುತ್ತದೆ. ಅವರನ್ನು ನಾನು ಮನಸಾರೆ ಪ್ರೀತಿಸುತ್ತಿದ್ದೇನೆ. ಆದರೆ ನನ್ನ ಆಸೆ ಕೈಗೂಡುವ ನಂಬಿಕೆ ನನಗೀಗ ಇಲ್ಲವಾಗಿದೆ. ಕಳೆದ ತಿಂಗಳು ಕಾಲೇಜು ಟ್ರಿಪ್ ನಿಮಿತ್ತ ನಾವೆಲ್ಲರೂ ಕೆಮ್ಮಣ್ಣುಗುಂಡಿಗೆ ಹೋಗಿದ್ದೆವು. ಆ ಲೆಕ್ಚರರ್ ಜೊತೆ ಜಾಲಿಯಾಗಿ ಸಮಯ ಕಳೆಯಬಹುದೆನ್ನುವ ಮಹದಾಸೆಯಿಂದ ಅಲ್ಲಿಗೆ ಹೋದರೆ ನಾನು ಅಲ್ಲಿ ನಿರಾಸೆ ಅನುಭವಿಸಬೇಕಾಯಿತು.  ಅಲ್ಲಿ ಅವರು ನಮ್ಮ ಕಾಲೇಜಿನ ಹಿಸ್ಟರಿ ಮೇಡಂ ಜೊತೆಯೇ ಲಲ್ಲೆ ಹೊಡೆಯುತ್ತಾ ಮೈಮರೆಯುತ್ತಿದ್ದರು. ಅವರಿಬ್ಬರೂ ಲವ್ವರ್ಸ್ ಅಂತ ಆವಾಗಷ್ಟೇ ನನಗೆ ಗೊತ್ತಾಯಿತು. ನನಗಂತೂ ಆ ಮೇಡಂನ್ನು ಸಾಯಿಸಬೇಕೆನ್ನುವಷ್ಟು ಕೋಪ ಬಂತು. ಅವರ್ಯಾಕೆ ನಮ್ಮಿಬ್ಬರ ಮಧ್ಯೆ ಬರಬೇಕಿತ್ತು? ಆ ಸರ್‍ಗಾದರೂ ನನ್ನ ಭಾವನೆ ಅರ್ಥವಾಗಬೇಕಿತ್ತಲ್ಲಾ, ಅವರಿಗೆ ನಾನು ಇಷ್ಟವಿಲ್ಲದಿದ್ದರೆ ಸುಮ್ಮನೆ ನನ್ನ ಜೊತೆ ಯಾಕೆ ಅಷ್ಟೊಂದು ಆತ್ಮೀಯವಾಗಿರಬೇಕಿತ್ತು? ನನಗೆ ಕಾಲೇಜಿಗೆ ಹೋಗುವ ಮೂಡೇ ಹೊರಟುಹೋಗಿದೆ. ನಾನೀಗ ಏನು ಮಾಡಲಿ?

: ಟೀನೇಜಿನ ತುಮುಲವೇ ಒಂಥರಾ ಹಾಗೇ. ಸಿನಿಮಾದ ಹೀರೋ ತರಹÀ ಇರುವ ಯಾರದೋ ಮೇಲೆ ಕ್ರಶ್ಶಾಗುವುದು, ಚೆನ್ನಾಗಿ ಹಾಡುವ ಇಲ್ಲಾ ಡ್ಯಾನ್ಸ್ ಮಾಡುವವನ ಬಗ್ಗೆ ಕನಸು ಕಾಣುವುದು, ಹ್ಯಾಂಡ್ಸಮ್ ಲೆಕ್ಚರರ್ ಮೇಲೇ ಮನಸ್ಸಾಗುವುದು ಎಲ್ಲವೂ ನಿಮ್ಮಂಥ ಹದಿಹರೆಯದ ಹುಡುಗಿಯರಲ್ಲಿ ಕಾಮನ್. ಆದರೆ ಕೆಲವು ಹುಡುಗಿಯರು ಅಂತಹ ಭಾವನೆಗಳನ್ನೆಲ್ಲ ಮೆಟ್ಟಿ ನಿಂತು ತಮ್ಮ ಓದಿನ ಬಗ್ಗೆಯೇ ಗಮನ ಹರಿಸುತ್ತಾರೆ. ನೀವೊಬ್ಬ ಯಾವ ಅಳುಕೂ ಇಲ್ಲದೇ ಸೊಗಸಾದ ಇಂಗ್ಲೀಷ್ ಮಾತಾಡಬಲ್ಲ ಟ್ಯಾಲೆಂಟೆಡ್ ಹುಡುಗಿ ಎಂದೇ ನಿಮ್ಮನ್ನು ಅವರು ಹೋಸ್ಟ್ ಮಾಡಲು ಆರಿಸಿದ್ದು. ನಿಮ್ಮ ಬಗ್ಗೆ ಅದಕ್ಕಾಗಿ ಅವರಿಗೆ ಮೆಚ್ಚುಗೆಯೂ ಇದೆ. ನಿಮಗೆ ವಹಿಸಿದ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಎಲ್ಲ ರೀತಿಯ ಸಹಕಾರವನ್ನೂ ಅವರು ಮುಕ್ತ ಮನಸ್ಸಿನಿಂದ ಕೊಡುತ್ತಿದ್ದಾರೆ. ಅದನ್ನೇ ಪ್ರೀತಿಯೆಂದು ತಿಳಿದುಕೊಂಡರೆ ಹೇಗೆ? ನೀವು ಆ ರೀತಿ ಅವರನ್ನು ಭಾವಿಸುತ್ತೀರಿ ಅಂತಲೂ ಅವರು ಅಂದುಕೊಂಡಿರಲಿಕ್ಕಿಲ್ಲ. ಅವರು ತಮ್ಮ ಸಹೋದ್ಯೋಗಿಯನ್ನು ಪ್ರೀತಿಸುತ್ತಿರುವುದು ಅವರ ವೈಯಕ್ತಿಕ. ಆ ಮೇಡಂ ನಿಮ್ಮ ಮಧ್ಯೆ ಬರುತ್ತಿರುವುದಲ್ಲ. ನೀವೇ ಅವರ ಮಧ್ಯೆ ಹೋಗಲು ಪ್ರಯತ್ನಿಸುತ್ತಿದ್ದೀರಿ. ಸುಮ್ಮನೆ ಇಲ್ಲದ ಉಸಾಬರಿಗೆ ಹೋಗಿ ನಿಮ್ಮನ್ನೇ ನೀವು ಅವರ ದೃಷ್ಟಿಯಲ್ಲಿ ಕೆಳಮಟ್ಟಕ್ಕೆ ಇಳಿಯದಂತೆ ಜಾಗೃತೆ ವಹಿಸಿ. ನಿಮಗಿರುವ ಟ್ಯಾಲೆಂಟನ್ನು ಇನ್ನಷ್ಟು ಚುರುಕುಗೊಳಿಸಿಕೊಂಡು ಎಲ್ಲರಿಗೂ ಹೆಮ್ಮೆ ತರುವ ಕೆಲಸ ಮಾಡಿ. ಆ ಲೆಕ್ಚರರನ್ನು ನಿಮ್ಮ ಮಾಡೆಲ್ಲಾಗಿ ಬೇಕಿದ್ದರೆ ಪರಿಗಣಿಸಿ.