ತಮ್ಮ ವಯಸ್ಸಿನ ಬಗ್ಗೆ ವೃದ್ಧ ಯಡ್ಡಿಗೇಕೆ ಇಷ್ಟೊಂದು ಕಾಳಜಿ ?

ಬೆಂಗಳೂರು : ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡ್ಡಿಯೂರಪ್ಪ ಹುಟ್ಟು ಹಬ್ಬವನ್ನು ಸೋಮವಾರ ಅವರ ಅಭಿಮಾನಿಗಳು ಸಮಾಜ ಸೇವಾ ಚಟುವಟಕೆಗಳನ್ನು ಆಯೋಜಿಸುವ ಮೂಲಕ ಆಚರಿಸಿದ್ದಾರೆ. ಈ ಸಂದರ್ಭ ರಾಜಕೀಯ ವಲಯಗಳಲ್ಲಿ  ಸಾಕಷ್ಟು ಕುತೂಹಲ ಮೂಡಿಸಿದ ಪ್ರಶ್ನೆ – “ಯಡ್ಡಿಯೂರಪ್ಪ ಅವರ ವಯಸ್ಸೆಷ್ಟು -75 ಅಥವಾ 74 ?”

ಈ ಗೊಂದಲಕ್ಕೆ ಕಾರಣ ಯಡ್ಡಿಯೂರಪ್ಪ ಅಭಿಮಾನಿಗಳು ನೀಡಿದ ಜಾಹೀರಾತÀುಗಳು- ಕೆಲವರು ತಮ್ಮ ನಾಯಕನ 75ನೇ ಹುಟ್ಟುಹಬ್ಬಕ್ಕೆ ಅವರಿಗೆ ಶುಭ ಕೋರಿದ್ದರೆ, ಇನ್ನು ಕೆಲವು ಜಾಹೀರಾತುಗಳು ಅವರಿಗೆ 74ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿವೆ.

“ಹೀಗೇಕಾಯಿತೆಂದು ಗೊತ್ತಿಲ್ಲ. ಯಡ್ಡಿಯೂರಪ್ಪ ಅವರ ಜನನ ದಿನಾಂಕ – ಫೆಬ್ರವರಿ 27, 1943” ಎಂದು ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಕೆಲವು ಮೂಲಗಳ ಪ್ರಕಾರ ಯಡ್ಡಿಯೂರಪ್ಪ ಹುಟ್ಟು ಹಬ್ಬ ಶುಭಾಶಯ ಜಾಹೀರಾತು ನೀಡುವವರಿಗೆ ಅವರ ವಯಸ್ಸನ್ನು 74 ಎಂದೇ ನಮೂದಿಸುವಂತೆ ಸೂಚಿಸಲಾಗಿತ್ತು.

ಅಷ್ಟಕ್ಕೂ  ಯಡ್ಡಿಯೂರಪ್ಪಗೆ ಈ ಬಗ್ಗೆ ಅತಿಯಾದ ಚಿಂತೆಯೇಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಮಂದಿನ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಪರಿಗಣಿಸಲ್ಪಟ್ಟಿರುವ ಯಡ್ಡಿಯೂರಪ್ಪಗೆ  ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವಾಗ 75 ತುಂಬಲಿದೆ. 75 ವರ್ಷ ಮೇಲ್ಪಟ್ಟ ರಾಜಕಾರಣಿಗಳು ಕೇಂದ್ರ ಯಾ ರಾಜ್ಯದಲ್ಲಿ ಯಾವುದೇ ಹುದ್ದೆ ಹೊಂದಬಾರದೆಂಬುದು ಪ್ರಧಾನಿ ನರೇಂದ್ರ ಮೋದಿಯ ನಿಯಮವಾಗಿರುವುದರಿಂದಲೇ  ಯಡ್ಡಿಯೂರಪ್ಪ ತಮ್ಮ ವಯಸ್ಸಿನ ಬಗ್ಗೆ ಸ್ವಲ್ಪ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ ಎಂಬುದು ಸ್ಪಷ್ಟ.