ಬಿಜೆಪಿ ನಾಯಕರಿಗೆ ಅರ್ನಬ್ ರಿಪಬ್ಲಿಕ್ ಟಿವಿ ಬಗ್ಗೆ ಹೊಗಳದೆ ಇರಲು ಸಾಧ್ಯವಾಗುತ್ತಿಲ್ಲವೇಕೆ ?

ಅರ್ನಬ್ ಅವರ ಪತ್ರಿಕೋದ್ಯಮವು ಬಿಜೆಪಿಯ ಪ್ರಚಾರಾಂದೋಲನದ ಮುಂದುವರಿದ ಭಾಗವೆಂಬಂತೆಯೇ ಕಾಣಿಸುತ್ತಿದೆ

  • ಪ್ರತೀಕ್ ಸಿನ್ಹಾ

ನವೆಂಬರ್ 2016ರಲ್ಲಿ ರಾಮನಾಥ್ ಗೋಯೆಂಕಾ ಪ್ರಶಸ್ತಿ ಪ್ರದಾನ ಸಮಾರಂಭದ ಧನ್ಯವಾದ ಸಮರ್ಪಣೆ ಮಾಡುತ್ತಿದ್ದ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ಮುಖ್ಯ ಸಂಪಾದಕ ರಾಜ್ ಕಮಲ್ ಝಾ ಅವರು ಹಿಂದಿನ ಘಟನೆಯೊಂದನ್ನು ಮೆಲುಕು ಹಾಕುತ್ತಾ  ಹೀಗೆಂದು ಹೇಳಿದರು.  “ಇಂಡಿಯನ್ ಎಕ್ಸ್‍ಪ್ರೆಸ್ ಸಮೂಹದ ಸ್ಥಾಪಕ ರಾಮನಾಥ್ ಗೋಯೆಂಕಾ ಅವರ ಬಳಿ ಮಾತನಾಡಿದ ಮುಖ್ಯಮಂತ್ರಿಯೊಬ್ಬರು `ಆಪ್ ಕಾ ರಿಪೋರ್ಟರ್ ಬಹುತ್ ಅಚ್ಛಾ ಕಾಮ್ ಕರ್ ರಹಾ ಹೈ’ (ನಿಮ್ಮ ವರದಿಗಾರರು ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ) ಎಂದುಬಿಟ್ಟರಂತೆ. ನಂತರ ಗೋಯೆಂಕಾ ಆ ವರದಿಗಾರನನ್ನು ಕೆಲಸದಿಂದ ಕಿತ್ತು ಹಾಕಿದರೆಂದು ಅವರು ಹೇಳಿದರು. ಸರಕಾರದಿಂದ ಬರುವ ಟೀಕೆ ಮಾಧ್ಯಮಕ್ಕೆ ಗೌರವದ ಪದಕವಿತ್ತಂತೆ ಎಂದು ಹಿರಿಯ ಪತ್ರಕರ್ತರು ನಂಬಿದ್ದಾರೆ. ಆದರೆ ಟೈಮ್ಸ್ ನೌ ಚಾನಲ್ ಮಾಜಿ ಆಂಕರ್ ಅರ್ನಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ ಕಾರ್ಯಾರಂಭಗೊಂಡ ಸಂದರ್ಭದಲ್ಲಿ  ಮಾತ್ರ ನಾವು ಇದಕ್ಕೆ ವ್ಯತಿರಿಕ್ತವಾದುದನ್ನೇ ಕಂಡಿದ್ದೇವೆ.

ಕೇಂದ್ರ ಬಿಜೆಪಿ ಸಚಿವರುಗಳಿಂದ ಹಿಡಿದು  ಪಕ್ಷದ ಸಂಸದರು, ಶಾಸಕರು, ಪದಾಧಿಕಾರಿಗಳು ಹಾಗೂ ಬೆಂಬಲಿಗರು ರಿಪಬ್ಲಿಕ್ ಟಿವಿಯನ್ನು ಟ್ವಿಟ್ಟರಿನಲ್ಲಿ ಹೊಗಳಿದ್ದೇ ಹೊಗಳಿದ್ದು.

ಕೇಂದ್ರ ಸಚಿವರುಗಳಾದ ಪಿಯುಶ್ ಗೋಯೆಲ್, ವೆಂಕಯ್ಯ ನಾಯ್ಡು, ಸುರೇಶ್ ಪ್ರಭು, ಬಿಜೆಪಿ ಸಂಸದ ಅನುರಾಗ್ ಠಾಕುರ್, ಶಾಸಕರುಗಳಾದ ಸಿ ಟಿ ರವಿ, ಅತುಲ್ ಭಟ್ಕಳ್ಕರ್, ಪಕ್ಷದ ವಕ್ತಾರರಾದ ನೂಪುರ್ ಶರ್ಮ,  ತೇಜಿಂದರ್ ಪಾಲ್ ಬಗ್ಗಾ ಅವರು ಟ್ವಿಟ್ಟರಿನಲ್ಲಿ ಅರ್ನಬ್ ಗೋಸ್ವಾಮಿಗೆ ಶುಭಾಶಯ ಸಲ್ಲಿಸಲು ತಾಮುಂದು ನಾಮುಂದು ಎಂದಿದ್ದಾರೆ.

ರಿಪಬ್ಲಿಕ್ ಟಿವಿಯಲ್ಲಿನ ಪ್ರಮುಖ ಹೂಡಿಕೆದಾರ ರಾಜ್ಯಸಭಾ ಸಂಸದ ಹಾಗೂ ಕೇರಳ ಎನ್ಡಿಎ ಘಟಕದ ಉಪಾಧ್ಯಕ್ಷ ರಾಜೀವ್ ಚಂದ್ರಶೇಖರ್ ಆಗಿರುವುದರಿಂದಲೇ ಈ ಹೊಗಳಿಕೆಗಳೆಲ್ಲಾ ಮೂಡಿ ಬಂದಿವೆಯೆನ್ನಲಾಗಿದೆ.

ಕಳೆದ ಹಲವು ಸಮಯದಿಂದ  ಅರ್ನಬ್ ಅವರ ಪತ್ರಿಕೋದ್ಯಮವು ಬಿಜೆಪಿಯ ಪ್ರಚಾರಾಂದೋಲನದ ಮುಂದುವರಿದ ಭಾಗವೆಂಬಂತೆಯೇ ಕಾಣಿಸುತ್ತಿದೆ. ಇತ್ತೀಚಿಗಿನ ಸುಕ್ಮಾ ದಾಳಿಯ ನಂತರ ಅವರು  ಸರಕಾರವೊಂದನ್ನು ಬಿಟ್ಟು ಎಲ್ಲರನ್ನೂ ಗುರಿಯಾಗಿಸಿ ಕನಿಷ್ಟ ನಾಲ್ಕು ಟ್ವೀಟ್ ಮಾಡಿದ್ದಾರೆ. 2014ರಲ್ಲಿ ಇದೇ ಪ್ರದೇಶದಲ್ಲಿ ನಕ್ಸಲ್ ದಾಳಿಯಾಗಿದ್ದಾಗ ಅವರು ಅಂದಿನ ಯುಪಿಎ ಗೃಹ ಸಚಿವರುಗಳಾದ ಪಿ ಚಿದಂಬರಂ, ಶಿವರಾಜ್ ಪಾಟೀಲ್ ಹಾಗೂ ಸುಶೀಲ್ ಕುಮಾರ್ ಶಿಂಧೆ ಅವರನ್ನು ಟೀಕಿಸಿದ್ದರು.

ಸುಕ್ಮಾ ದಾಳಿಗಾಗಿ ಅರ್ನಬ್ ಅವರು ಛತ್ತೀಸಗಢದ ಬಿಜೆಪಿ ಸರಕಾರ ಯಾ ಕೇಂದ್ರದ ಬಿಜೆಪಿ ಸರಕಾರವನ್ನು ಪ್ರಶ್ನಿಸದೇ ಇರುವುದರಿಂದಲೇ ಬಿಜೆಪಿಯಲ್ಲಿನ ಎಲ್ಲರೂ ಈ ಚಾನಲ್ ಆರಂಭದ ಬಗ್ಗೆ ಖುಷಿ ಪಟ್ಟಿದ್ದಾರೆ ಹಾಗೂ ತಮ್ಮ ಖುಷಿಯನ್ನು ಜಗತ್ತಿಗೆ ತಿಳಿಯ ಪಡಿಸುತ್ತಿದ್ದಾರೆ ಕೂಡ.