ದೂರು ನೀಡಲು ಸಂತ್ರಸ್ತ ಮಹಿಳೆಯರೇಕೆ ಹಿಂಜರಿಯುತ್ತಾರೆ ?

ಸಾಂದರ್ಭಿಕ ಚಿತ್ರ

ರಾಜ್ಯಾದ್ಯಂತ ವಿಪರೀತ ಹೆಚ್ಚುತ್ತಿದೆ ಲೈಂಗಿಕ ಕಿರುಕುಳ ಪ್ರಕರಣಗಳು

  • ಗೋಪಿಕಾ ಬಶಿ

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯ ಸಂದರ್ಭದ ಸಾಮೂಹಿಕ ಲೈಂಗಿಕ ಕಿರುಕುಳ ಘಟನೆ ನಡೆದು ಏಳು ದಿನಗಳಾದರೂ ಇಲ್ಲಿಯವರೆಗೂ ಸಂತ್ರಸ್ತ ಯುವತಿಯರ್ಯಾರೂ ದೂರು ನೀಡಲು ಮುಂದೆ ಬಂದಿಲ್ಲವಾದ ಕಾರಣ ಬೆಂಗಳೂರು ಪೊಲೀಸರು ವಿಡಿಯೋ ದೃಶ್ಯಾವಳಿಗಳನ್ನಾಧರಿಸಿ ತಾವೇ ಎಫ್ ಐ ಆರ್ ದಾಖಲಿಸಿದ್ದಾಗಿ ಹೇಳಿದ್ದಾರೆ. ತಮ್ಮನ್ನು ಸಂಪರ್ಕಿಸುವಂತೆ ಪೊಲೀಸರು ಸಂತ್ರಸ್ತ ಯುವತಿಯರಿಗೆ ಹೇಳಿದ್ದರೂ ಹಾಗೂ ಘಟನೆಯ ಸೀಸಿಟೀವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ ಕೆಲವೇ ಕೆಲವು ಮಂದಿ ತಮ್ಮ ಕಹಿ ಅನುಭವದ ಬಗ್ಗೆ ಮಾತನಾಡಲು ಮುಂದೆ ಬಂದಿದ್ದಾರೆ. ಹಾಗಾದರೆ ಲೈಂಗಿಕ ಕಿರುಕುಳ ನಡೆದೇ ಇಲ್ಲವೆಂದು ಅವರ ಮೌನ ಹೇಳುತ್ತಿದೆಯೇ ? ಹಾಗಾಗಿರಲು ಸಾಧ್ಯವಿಲ್ಲ. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯ ಆಗ್ರಹಿಸಲಿಚ್ಛಿಸುವ ಮಹಿಳೆಯರು ಎದುರಿಸಬೇಕಾದ ಸಂದಿಗ್ಧತೆಗಳತ್ತ ಇದು ಬೆಳಕು ಚೆಲ್ಲುತ್ತದೆ.

“ಪೊಲೀಸರು ತಮ್ಮ ಲಾಠಿಗಳಿಂದ ನಮ್ಮ ಖಾಸಗಿ ಭಾಗಗಳನ್ನು ತಿವಿದರು. ಒಬ್ಬರಂತೂ, ಸೂಳೆ, ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ನಿನಗೇನು ತೊಂದರೆಯಿದೆ ಎಂದು ಹೇಳಿ ನಿಂದಿಸಿದರು”- ಹೀಗೆಂದು ಕಳೆದ ಎಪ್ರಿಲ್ ತಿಂಗಳಿನಲ್ಲಿ ಕೇಂದ್ರ ಸರಕಾರದ ಇಪಿಎಫ್ ನೀತಿಯನ್ನು ವಿರೋಧಿಸಿ ಸಾವಿರಾರು ಗಾರ್ಮೆಂಟ್ ಉದ್ಯೋಗಿಗಳು ಬೀದಿಗಿಳಿದು ಹೋರಾಟ ಮಾಡಿದಾಗ ಗಾರ್ಮೆಂಟ್ ಉದ್ಯೋಗಿ ಮಹಿಳೆಯೊಬ್ಬರು ತಮ್ಮ ಅಳಲನ್ನು ನನ್ನ ಬಳಿ ತೋಡಿಕೊಂಡಿದ್ದರು. ಇನ್ನೂ ಹಲವಾರು ಉದ್ಯೋಗಿಗಳು ಇದೇ ರೀತಿಯಾದ ಹೇಳಿಕೆ ನೀಡಿದರು. ಪ್ರತಿಭಟನೆ ಹಿಂಸೆಗೆ ತಿರುಗಿದ್ದರೂ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಕೆಲ ಮಹಿಳೆಯರ ಮೇಲೆ ಪೊಲೀಸರು ಲೈಂಗಿಕ ಹಲ್ಲೆ ನಡೆಸಿ, ನಿಂದಿಸಿದ್ದರು. ಆದರೆ ಯಾರೂ ದೂರು ನೀಡದ ಕಾರಣ ಈ ಆರೋಪಗಳ ಬಗ್ಗೆ ತನಿಖೆಯಾಗಲೇ ಇಲ್ಲ.


ಕೇಂದ್ರ ಸರಕಾರ ನಡೆಸಿದ್ದ ಸಮೀಕ್ಷೆಯೊಂದರ ಪ್ರಕಾರ ಪ್ರತಿ 100 ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕೇವಲ ಒಂದು ಪ್ರಕರಣದಲ್ಲಿ ಮಾತ್ರ ಪೊಲೀಸ್ ದೂರು ದಾಖಲಾಗುತ್ತದೆ.


ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಹಿಳೆಯರೇಕೆ ಮೌನಿಗಳಾಗಿ ಬಿಡುತ್ತಾರೆ ? ಸಂತ್ರಸ್ತ ಮಹಿಳೆಯರು ಪೊಲೀಸ್ ದೂರು ನೀಡುವುದಿಲ್ಲ ಹಾಗೂ ತವiಗಾದ ದೌರ್ಜನ್ಯದ ಬಗ್ಗೆ ಯಾರಲ್ಲೂ ಹೇಳಿಕೊಳ್ಳುವುದಿಲ್ಲವೆಂದು ಹಲವು ದೃಷ್ಟಾಂತಗಳಿಂದ ತಿಳಿದು ಬರುತ್ತದೆ. ಈ ಬಗ್ಗೆ ಕೇಂದ್ರ ಸರಕಾರ ಕಡೆಯದಾಗಿ 2006ರಲ್ಲಿ ನಡೆಸಿದ್ದ ಸಮೀಕ್ಷೆಯೊಂದರ ಪ್ರಕಾರ ಪ್ರತಿ 100 ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕೇವಲ ಒಂದು ಪ್ರಕರಣದಲ್ಲಿ ಮಾತ್ರ ಪೊಲೀಸ್ ದೂರು ದಾಖಲಾಗುತ್ತದೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ತಾವೇ ಮುಂದೆ ಬಂದು ಧೈರ್ಯದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕೆಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಭಯಕ್ಕಿಂತ ದೂರು ನೀಡಿದ ನಂತರ ಪೊಲೀಸ್ ಅಧಿಕಾರಿಗಳಿಂದಲೇ ತಾವು ಎದುರಿಸಬೇಕಾದ ತಾರತಮ್ಯದ ನೀತಿಯಿಂದ ಹೆಚ್ಚಿನವರು ಆತಂಕಿತರಾಗಿದ್ದಾರೆ. ಅವರೇನು ಧರಿಸುತ್ತಾರೆ, ಮದುವೆಯಾಗಿದೆಯೇ, ಇಲ್ಲವೇ, ಜಾತಿ, ಏನು ಕೆಲಸ ಮಾಡುತ್ತಾರೆ, ಎಲ್ಲಿ ದೌರ್ಜನ್ಯ ನಡೆಯಿತು ಮುಂತಾದ ಹತ್ತು ಹಲವು ಪ್ರಶ್ನೆಗಳ ಸುರಿಮಳೆಯನ್ನೇ ವಿಚಾರಣೆ ವೇಳೆ ಎದುರಿಸಬೇಕಾಗುವ ಭಯದಿಂದಲೇ ಹಲವರು ದೂರು ನೀಡುವ ಗೋಜಿಗೆ ಹೋಗುವುದಿಲ್ಲ.

ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ದೂರು ನೀಡಲು ಮುಂದೆ ಬರಲು ಸಂತ್ರಸ್ತ ಮಹಿಳೆಯರನ್ನು ಪ್ರೇರೇಪಿಸಲು ಕೇವಲ ಸರಕಾರದಿಂದ ಮಾತ್ರ ಸಾಧ್ಯವಾಗದು. ಪೊಲೀಸ್ ಇಲಾಖೆಯೂ ಈ ನಿಟ್ಟಿನಲ್ಲಿ ಯೋಚಿಸಿ ಮುಂದಡಿಯಿಡಬೇಕಾಗಿದೆ. ಪೊಲೀಸ್ ಇಲಾಖೆಯಲ್ಲಿರುವ ಮಹಿಳಾ ಸಿಬ್ಬಂದಿ ಸಂಖ್ಯೆಯನ್ನು ಶೇ 15ರಷ್ಟು  ಏರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ಈಗಾಗಲೇ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ನೀಡಿದ್ದಾರೆ.