ಕ್ರೈಸ್ತರ ದೇಶ ಫಿಲಿಪೈನ್ಸ್ನಲ್ಲಿ ಸಾವಿರ ಸಂಖ್ಯೆಯಲ್ಲಿ ಸಾಮೂಹಿಕ ಕಗ್ಗೊಲೆ ಏಕೆ ನಡೆಯುತ್ತಿದೆ ?

ಏಷ್ಯಾ ಖಂಡದಲ್ಲಿನ ಈ ಕ್ಯಾಥೊಲಿಕ್ ದೇಶಕ್ಕೆ ಏನಾಗಿದೆ ಎಂಬ ಪ್ರಶ್ನೆ ಇಂದು ವ್ಯಾಪಕವಾಗಿ ಚರ್ಚೆಗೊಳಗಾಗುತ್ತಿದೆ. ವಿಪರ್ಯಾಸವೆಂದರೆ ಜಾಗತಿಕ ಮಟ್ಟದಲ್ಲಾಗಲಿ, ಸ್ಥಳೀಯ ಮಟ್ಟದಲ್ಲಾಗಲೀ ಅಧ್ಯಕ್ಷ ಡೂಟರ್ ವಿರುದ್ಧ ಯಾವುದೇ ಪ್ರತಿಭಟನೆ ಕಂಡುಬರುತ್ತಿಲ್ಲ.

  • ಮೇರಿ ಅಲೀನ್ ಬಕಾಲ್ಸೋ

ಕ್ಯಾಥೊಲಿಕ್ ಸಮುದಾಯದವರೇ ಪ್ರಧಾನವಾಗಿರುವ ಫಿಲಿಪೈನ್ಸನಲ್ಲಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಮಾದಕ ದ್ರವ್ಯಗಳ ಮಾರಾಟದಲ್ಲಿ ತೊಡಗಿರುವ ಆರೋಪ ಎದುರಿಸುತ್ತಿರುವ ಐದು ಸಾವಿರಕ್ಕೂ ಹೆಚ್ಚು ಶಂಕಿತ ಅಪರಾಧಿಗಳನ್ನು ಹತ್ಯೆ ಮಾಡಲಾಗಿದೆ. ಅಕ್ರಮ ಮಾದಕ ದ್ರವ್ಯ ವಹಿವಾಟಿನ ವಿರುದ್ಧ ಫಿಲಿಪೈನ್ಸ್ ಅಧ್ಯಕ್ಷ ರಾಡ್ರಿಗೋ ಡೂಟರ್ ಸಮರ ಸಾರಿದ್ದು, ಕಳೆದ ವರ್ಷ ನಡೆದ ಚುನಾವಣೆಯಲ್ಲಿ 16 ದಶಲಕ್ಷ ಕ್ಯಾಥೊಲಿಕ್ ಮತದಾರರು ಡೂಟರಗೆ ಬೆಂಬಲ ನೀಡಿ ಗೆಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕೆಲವೇ ದಿನಗಳಲ್ಲಿ ಮಾದಕ ದ್ರವ್ಯಗಳ ವಿರುದ್ಧ ಸಮರ ಸಾರಿರುವ ಡೂಟರ್ ದೇಶದಲ್ಲಿ ಎಲ್ಲೆಡೆ ವ್ಯಾಪಿಸಿರುವ ಈ ಸಮಸ್ಯೆಯನ್ನು ನೀಗಿಸಲು ಆರು ತಿಂಗಳ ಗಡುವು ನೀಡಿದ್ದಾರೆ.

ಕಳೆದ ಜುಲೈ ತಿಂಗಳಲ್ಲಿ ದೇಶದ ಜನತೆಗೆ ತಮ್ಮ ಸಂದೇಶ ರವಾನಿಸಿದ ಅಧ್ಯಕ್ಷ ಡೂಟರ್ “ಮಾದಕ ವ್ಯಸನಿಗಳನ್ನು ಕೊಲ್ಲಲು ಅವರ ಪೋಷಕರಿಗೆ ಸೂಚಿಸುವುದು ಕ್ರೌರ್ಯವಾಗುತ್ತದೆ, ಹಾಗಾಗಿ ಜನತೆಯೇ ಅವರನ್ನು ಕೊಲ್ಲಬೇಕು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ನಂತರವೇ ಹತ್ಯೆಗಳ ಸಂಖ್ಯೆ ಹೆಚ್ಚಾಗಿದೆ. “ಮಾದಕ ವ್ಯಸನಿಗಳು ಮನುಷ್ಯರೇ ಅಲ್ಲ, ಹಾಗಾಗಿ ಅವರನ್ನು ಕೊಲ್ಲುವುದರಲ್ಲಿ ತಪ್ಪೇನಿಲ್ಲ” ಎಂದು ಅಧ್ಯಕ್ಷ ಡೂಟರ್ ಹೇಳಿದ ಹಿನ್ನೆಲೆಯಲ್ಲಿ 5000ಕ್ಕೂ ಹೆಚ್ಚು ಜನರ ಹತ್ಯೆ ಮಾಡಲಾಗಿದೆ. ಜೀವನದ ಪಾವಿತ್ರ್ಯತೆಯನ್ನು ರಕ್ಷಿಸುವ ಅಧ್ಯಕ್ಷರ ಈ ಕ್ರಮದಿಂದ ಪಾವಿತ್ರ್ಯತೆ ಉಳಿಯುತ್ತಿಲ್ಲ. ಬದಲಾಗಿ ಹತ್ಯೆಗೊಳಗಾದ ಮಾದಕವ್ಯಸನಿಗಳ ಕುಟುಂಬದ ಸದಸ್ಯರು ಬೀದಿ ಪಾಲಾಗುತ್ತಿದ್ದಾರೆ. ಇವರ ಸಮಸ್ಯೆಗಳನ್ನು ಕೇಳುವವರೂ ಇಲ್ಲವಾಗಿದ್ದಾರೆ.

ದೇಶದ ಅಧ್ಯಕ್ಷರೇ ಮುಕ್ತ ಪರವಾನಗಿ ನೀಡಿರುವ ಹಿನ್ನೆಲೆಯಲ್ಲಿ ಕೊಲೆಗಡುಕರು ಅವ್ಯಾಹತವಾಗಿ ಹತ್ಯೆ ಮಾಡುವುದರಲ್ಲಿ ತೊಡಗಿದ್ದಾರೆ.  ಈ ಹತ್ಯೆಗಳನ್ನು ತನಿಖೆ ನಡೆಸಿದ ಸೆನೇಟರ್ ಲೀಲಾ ಡಿ ಲಿಮಾ ದಿಟ್ಟತನದಿಂದ ತನಿಖೆ ಪೂರೈಸಿದ್ದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ. ಮಾಹಿತಿಗಳನ್ನು ತಿರುಚುವ ಮೂಲಕ, ಸಾಕ್ಷಿಗಳನ್ನು ದಮನಿಸುವ ಮೂಲಕ ಫಿಲಿಪೈನ್ಸ್ ಸರ್ಕಾರ ಡಿ ಲಿಮಾ ಅವರನ್ನು ತನಿಖಾ ತಂಡದಿಂದ ಉಚ್ಚಾಟಿಸಿದ್ದು ಅವರ ಘನತೆಗೂ ಧಕ್ಕೆ ತರುವಂತೆ ಮಾಡಲಾಗಿದೆ.

ವ್ಯವಸ್ಥಿತವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ಫಿಲಿಪೈನ್ಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಗೌರವವನ್ನೂ ಕಳೆದುಕೊಂಡಿದೆ. ಈ ಕುರಿತು ಇತ್ತೀಚೆಗೆ ಹೇಳಿಕೆ ನೀಡಿರುವ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬನ್ ಕಿಮೂನ್ ಡೂಟರ್ ಸರ್ಕಾರದ ಈ ಅಕ್ರಮ ಹತ್ಯೆಗಳನ್ನು ಖಂಡಿಸಿದ್ದು ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದು ಜನರ ಸ್ವಾತಂತ್ರ್ಯ ಹರಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ವಿಶ್ವಸಂಸ್ಥೆಯ ಸಂಸ್ಥಾಪನಾ ಸದಸ್ಯ ಮತ್ತು 47 ಸದಸ್ಯರ ಮಾನವ ಹಕ್ಕು ಸಮಿತಿಯ ಸದಸ್ಯರಾಗಿರುವ ಫಿಲಿಪೈನ್ಸ್ ಅಧ್ಯಕ್ಷ ಡೂಟರ್ ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು  ತಮ್ಮ ದೇಶ ವಿಶ್ವಸಂಸ್ಥೆಯಿಂದ ದೂರವಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. 2017ರ ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳು ಫಿಲಿಪೈನ್ಸನ ಮಾನವ ಹಕ್ಕು ಉಲ್ಲಂಘನೆಯನ್ನು ಕುರಿತು ತನಿಖೆ ನಡೆಸಲಿದ್ದು ವರದಿ ಸಲ್ಲಿಸಲಿವೆ. ಮಾದಕ ವಸ್ತುಗಳ ವಿರುದ್ಧ ಫಿಲಿಪೈನ್ಸ್ ಏಕೆ ಉಗ್ರ ಸಮರ ಸಾರುತ್ತಿದೆ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯ ಅರ್ಥಮಾಡಿಕೊಳ್ಳಬೇಕು ಎಂದು ಅಧ್ಯಕ್ಷ ಡೂಟರ್ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿದ್ದಾರೆ. ಕಂಡಲ್ಲಿ ಕೊಲ್ಲುವ ಆದೇಶ ನೀಡಿಲ್ಲವಾದರೂ ರಾಷ್ಟ್ರಾಧ್ಯಕ್ಷರ ಮೌಖಿಕ ಸಂದೇಶದಿಂದ ಜನಸಾಮಾನ್ಯರು ಈ ರೀತಿ ಮಾದಕ ವಸ್ತುಗಳ ಅಕ್ರಮ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಫಿಲಿಪೈನ್ಸ್ ಸರ್ಕಾರ ಹೇಳಿದೆ.

ಫಿಲಿಪೈನ್ಸ್‍ನಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಾಲ್ಕು ಸಾವಿರ ಕಗ್ಗೊಲೆಗಳು ನಡೆದಿವೆ. ಆದಾಗ್ಯೂ ಕ್ಯಾಥೊಲಿಕ್ ಚರ್ಚ್ ಏಕೆ ಮೌನವಾಗಿದೆ ? ದೇಶದಲ್ಲಿ ಏಕೆ ಸಂಘಟಿತ ಪ್ರತಿಭಟನೆ ನಡೆಯುತ್ತಿಲ್ಲ ?  ಹಿಂದಿನ ಸರ್ಕಾರದ ಅವಧಿಯಲ್ಲಿ ಇಂತಹ ಕೊಲೆಗಳನ್ನು ಖಂಡಿಸುತ್ತಿದ್ದ ಸಂಘಟನೆಗಳು ಈಗ ಏಕೆ ಮೌನವಾಗಿವೆ ? ಪ್ರತಿಯೊಬ್ಬ ಅಪರಾಧಿಗೂ ಜೀವಿಸುವ ಮೂಲಭೂತ ಹಕ್ಕು ಇರುತ್ತದೆ. ಮಾನವ ಹಕ್ಕುಗಳು ಸಾರ್ವತ್ರಿಕವಾದದ್ದು. ಆದರೂ ಫಿಲಿಪೈನ್ಸಿನ ಬಡ ಜನತೆ ನಿರಪರಾಧಿಗಳೋ ಅಪರಾಧಿಗಳೋ ಎಂದು ನಿರ್ಧಾರವಾಗುವ ಮುನ್ನವೇ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಬಡತನ ಮತ್ತು ಸಾಮಾಜಿಕ ಅನ್ಯಾಯದಿಂದ ತತ್ತರಿಸಿಹೋಗಿರುವ ಇಲ್ಲಿನ ಬಡಜನತೆ ಮೌನವಾಗಿಯೇ ಈ ಹತ್ಯೆಗಳನ್ನು ಸಹಿಸಿಕೊಳ್ಳುತ್ತಿದ್ದಾರೆ.

“ನನ್ನ ಅಧಿಕಾರಾವಧಿಯಲ್ಲಿ ಮುವತ್ತು ಲಕ್ಷ ಮಾದಕ ವ್ಯಸನಿಗಳನ್ನು ಕೊಲ್ಲಲು ಇಚ್ಚಿಸಿದ್ದೇನೆ. ಜರ್ಮನಿಯಲ್ಲಿ ಹಿಟ್ಲರ್ ಇದ್ದಂತೆ ಫಿಲಿಪೈನ್ಸ್‍ನಲ್ಲಿ ನಾನಿದ್ದೇನೆ” ಎಂದು ಅಧ್ಯಕ್ಷ ಡೂಟರ್ ನಿರ್ಭೀತಿಯಿಂದ ಹೇಳುತ್ತಿದ್ದಾರೆ. ಏಷ್ಯಾ ಖಂಡದಲ್ಲಿನ ಈ ಕ್ಯಾಥೊಲಿಕ್ ದೇಶಕ್ಕೆ ಏನಾಗಿದೆ ಎಂಬ ಪ್ರಶ್ನೆ ಇಂದು ವ್ಯಾಪಕವಾಗಿ ಚರ್ಚೆಗೊಳಗಾಗುತ್ತಿದೆ. ವಿಪರ್ಯಾಸವೆಂದರೆ ಜಾಗತಿಕ ಮಟ್ಟದಲ್ಲಾಗಲಿ, ಸ್ಥಳೀಯ ಮಟ್ಟದಲ್ಲಾಗಲೀ ಅಧ್ಯಕ್ಷ ಡೂಟರ್ ವಿರುದ್ಧ ಯಾವುದೇ ಪ್ರತಿಭಟನೆ ಕಂಡುಬರುತ್ತಿಲ್ಲ.