ಮಾಜಿ ಪ್ರೇಮಿ ಇನ್ನೂ ಮದುವೆಯಾಗಿಲ್ಲವೇಕೆ?

 

ಪ್ರ : ನನಗೀಗ ಮದುವೆಯಾಗಿ ನಾಲ್ಕು ವರ್ಷಗಳಾದವು. ನಾನೀಗ ತುಂಬು ಗರ್ಭಿಣಿ. ಈ ಸಮಯದಲ್ಲಿ ಸಂತೋಷದಿಂದಿರಬೇಕೆಂದು ಎಲ್ಲರೂ ಹೇಳುತ್ತಿದ್ದರೂ ಮನಸ್ಸಿನ ಮೂಲೆಯಲ್ಲಿ ಯಾರಿಗೂ ಹೇಳಲಾರದ ನೋವು ನನ್ನನ್ನು ಕಾಡುತ್ತಿದೆ. ಕಾಲೇಜಿನಲ್ಲಿರುವಾಗ ನಾನೊಬ್ಬ ಹುಡುಗನ ಪ್ರೇಮಪಾಶದಲ್ಲಿ ಬಿದ್ದಿದ್ದೆ. ಅವನು ನನಗಿಂತ ಒಂದು ವರ್ಷ ಸೀನಿಯರ್. ನನ್ನನ್ನು ಎಡೆಬಿಡದೇ ಫೋಲೋ ಮಾಡಿ ನನ್ನ ಪ್ರೀತಿ ಗಳಿಸುವುದರಲ್ಲಿ ಕೊನೆಗೂ ಅವನು ಯಶಸ್ವಿಯಾಗಿದ್ದ. ಎರಡು ವರ್ಷ ಮುಂದಿನ ಭವಿಷ್ಯದ ಬಗ್ಗೆ ಯೋಚಿಸದೇ ಪ್ರೀತಿಸಿದೆವು. ಅವನ ಜಾತಿ ಬೇರೆಯಾಗಿದ್ದಕ್ಕೆ ನಮ್ಮ ಮನೆಯಲ್ಲಿ ಅವನ ಜೊತೆಗೆ ಮದುವೆಯಾಗಲು ಒಪ್ಪಲೇ ಇಲ್ಲ. ಅವನಿಗೂ ಎಲ್ಲರನ್ನೂ ಎದುರಿಸಿ ನನ್ನನ್ನು ಮದುವೆಯಾಗುವಷ್ಟು ಧೈರ್ಯವೂ ಇರಲಿಲ್ಲ. ನನಗೆ ಮನೆಯವರನ್ನು ವಿರೋಧಿಸಿ ಮುಂದುವರಿಯಲು ಸಾಧ್ಯವಾಗದೇ ಅವರು ನೋಡಿದ ಹುಡುಗನ ಹತ್ತಿರವೇ ತಾಳಿ ಕಟ್ಟಿಸಿಕೊಂಡು ದೂರದ ಊರಿನಲ್ಲಿ ಗಂಡನ ಜೊತೆಗೆ ಬಾಳಲು ಪ್ರಾರಂಭಿಸಿದೆ. ಹಿಂದಿನದ್ದೆಲ್ಲ ನೆನಪಿಸಿಕೊಳ್ಳದೇ ಗಂಡನ ಪ್ರೀತಿಯಲ್ಲಿ ನಾನು ನನ್ನ ಕರ್ತವ್ಯ ನಿಭಾಯಿಸುತ್ತಾ ಅವರಿಗೆ ಒಳ್ಳೆಯ ಹೆಂಡತಿಯಾದೆ. ನಮ್ಮ ದಾಂಪತ್ಯದ ಕುರುಹಾಗಿ ಈಗ ನಮ್ಮ ಮಗು ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ. ಈಗ ಹೆರಿಗೆಗೆಂದು ತವರಿಗೆ ಬಂದಿದ್ದೇನೆ. ಕಳೆದ ವಾರ ಅಮ್ಮನ ಜೊತೆ ಶಾಪಿಂಗಿಗೆ ಹೋದಾಗ ಅಕಸ್ಮಾತ್ತಾಗಿ ನನ್ನ ಆ ಮಾಜೀಪ್ರೇಮಿ ಸಿಕ್ಕಿದ್ದ. ತುಂಬಾ ಬಡವಾಗಿದ್ದಾನೆ. ಅವನಿಗಿನ್ನೂ ಮದುವೆಯೂ ಆಗಿಲ್ಲ. ನನ್ನ ನೋಡಿದಾಕ್ಷಣ ಅವನ ಕಣ್ಣಿನಲ್ಲಿ ಕಂಡ ಆ ಹೊಳಪನ್ನು ನೋಡಿಯೇ ಅವನಿನ್ನೂ ನನ್ನನ್ನು ಮರೆತಿಲ್ಲ ಅಂತ ಗೊತ್ತಾಯಿತು. ಅವನು ಸಂತೋಷದಿಂದ ಇಲ್ಲ ಅನ್ನುವ ನೋವು ನನ್ನನ್ನೀಗ ಕಾಡುತ್ತಿದೆ. ನಾನೀಗ ಏನು ಮಾಡಲಿ?

: ಬದುಕಿನಲ್ಲಿ ಬಯಸಿದ್ದೆಲ್ಲವೂ ಸಿಕ್ಕುವುದು ಅವರವರ ಲಕ್. ಪರಿಸ್ಥಿತಿಯ ಅನಿವಾರ್ಯತೆಗೆ ತಮ್ಮನ್ನು ತಾವು ಹೊಂದಿಸಿಕೊಂಡು ಅದರಲ್ಲೇ ನೆಮ್ಮದಿ ಕಾಣದಿದ್ದರೆ ಬದುಕೇ ದುಸ್ತರವಾಗುತ್ತದೆ. ಮನೆಯವರ ಸಂತೊಷಕ್ಕಾಗಿ ಅವರು ನೋಡಿದ ಗಂಡನ್ನು ಮದುವೆಯಾಗಿ ಈಗ ನೀವು ಹೆಂಡತಿ ಧರ್ಮವನ್ನು ಖುಶಿಯಿಂದಲೇ ನಿಭಾಯಿಸುತ್ತಿದ್ದೀರಿ. ಅವರ ಮಗುವಿನ ತಾಯಿಯೂ ಆಗುತ್ತಿರುವ ಇಂತಹ ಸಮಯದಲ್ಲಿ ನೀವು ಬೇರೆ ಯಾರ ಬಗ್ಗೆಯೂ ಚಿಂತಿಸುವುದು ಸರಿಯಲ್ಲ. ಅದೂ ಅಲ್ಲದೇ ನಿಮ್ಮ ಮಾಜೀ ಹುಡುಗ ನಿಮ್ಮದೇ ಧ್ಯಾನದಲ್ಲಿ ಮದುವೆಯಾಗಿಲ್ಲ ಅಂತ ನೀವು ಹೇಗೆ ಹೇಳುತ್ತೀರಿ? ಬೇರೆ ಕಾರಣವೂ ಇರಬಹುದು. ಒಂದು ವೇಳೆ ಅದೇ ಕಾರಣವಿದ್ದರೂ ನೀವೀಗ ನಿಮ್ಮ ಜೀವನದಲ್ಲಿ ತುಂಬಾ ಮುಂದೆ ಬಂದಾಗಿದೆ. ನೀವು ಸಂತೊಷದಿಂದ ನಿಮ್ಮ ಗಂಡನ ಜೊತೆ ದಾಂಪತ್ಯ ನಡೆಸುತ್ತಿದ್ದೀರಿ ಅಂತ ನಿಮ್ಮನ್ನು ನೋಡಿಯೇ ಅವನಿಗೀಗ ಅರ್ಥವಾಗಿರಬಹುದು. ಇನ್ನಾದರೂ ಅವನು ತನಗೆ ಸರಿಹೊಂದುವ ಜೀವನಸಂಗಾತಿ ಆರಿಸಿಕೊಳ್ಳಬಹುದು.