ಮುಂದಿನ ಮೇಯರ್ ಯಾರು ?

ಕವಿತಾ, ಅಪ್ಪಿ, ಪ್ರತಿಭಾ

ಕವಿತಾ, ಅಪ್ಪಿ, ಪ್ರತಿಭಾ ಪ್ರಬಲ ಆಕಾಂಕ್ಷಿಗಳು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಕೊನೆಯ ಅವಧಿಯ ಮೇಯರ್ ಸ್ಥಾನದ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದು, ಮುಂದಿನ ಮೇಯರ್ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಹಾಲಿ ಮೇಯರ್ ಹರಿನಾಥ್ ಅವರ ಅಧಿಕಾರಾವಧಿ ಮಾರ್ಚ್ 11ಕ್ಕೆ ಕೊನೆಗೊಳ್ಳುತ್ತಿದ್ದು, ಮೇಯರ್ ಸ್ಥಾನ ಯಾರಿಗೊಲಿಯಬಹುದು ಎನ್ನುವ ಲೆಕ್ಕಾಚಾರ ಆರಂಭಗೊಂಡಿದೆ. ಮೇಯರ್ ಸ್ಥಾನಕ್ಕೆ ನಾಲ್ಕು ತಿಂಗಳ ಮೊದಲೇ ಮೀಸಲಾತಿ ಪ್ರಕಟವಾಗಿದ್ದು, ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾತಿ ಪ್ರಕಟವಾಗಿದೆ.

ಪ್ರಸ್ತುತ ಕಾಂಗ್ರೆಸ್ ಪಕ್ಷದಿಂದ ಮೂವರು ಸಕ್ರಿಯ ಮಹಿಳಾ ಕಾರ್ಪೊರೇಟರುಗಳು ಮೇಯರ್ ಸ್ಥಾನದ ಆಕಾಂಕ್ಷಿಗಳು. ಹಿರಿಯ ಸದಸ್ಯೆ ಅಪ್ಪಿ ಮತ್ತು ಕವಿತಾ ಸನಿಲ್ ಅವರು ಮೂರು ಬಾರಿ ಪಾಲಿಕೆಯಲ್ಲಿ ಕಾರ್ಪೊರೇಟರ್ ಆಗಿ ಕಾರ್ಯ ನಿರ್ವಹಿಸಿದ್ದು, ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಗಳು. ಆದರೆ ಮೊದಲ ಬಾರಿಗೆ ಕಾರ್ಪೊರೇಟರ್ ಆಗಿರುವ ಪ್ರತಿಭಾ ಕುಳಾಯಿ ಕೂಡಾ ಸ್ಪರ್ಧೆಯಲ್ಲಿದ್ದಾರೆ. ಅಪ್ಪಿ ಮತ್ತು ಕವಿತಾ ಸನಿಲ್ ಅವರು ಈಗಾಗಲೇ ಪಾಲಿಕೆಯಲ್ಲಿ ಹುದ್ದೆಗಳನ್ನು ಅಲಂಕರಿಸಿದ್ದು, ತಮ್ಮ ಅರ್ಹತೆಯ ಆಧಾರದಲ್ಲಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

ಐದು ವರ್ಷಗಳ ಕೊನೆಯ ಅವಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಈ ಮೂವರಲ್ಲಿ ಒಬ್ಬರನ್ನು ಮೇಯರ್ ಅಧ್ಯಕ್ಷಗಾದಿಗಾಗಿ ಆರಿಸಬೇಕಾಗಿದೆ. ಪಾಲಿಕೆ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದು, ನೂತನವಾಗಿ ಆಯ್ಕೆಯಾಗುವ ಮೇಯರ್ ಮಂಗಳೂರು ನಗರದ ಅಭಿವೃದ್ಧಿಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ಅಗತ್ಯವಿದೆ. ಅಲ್ಲದೆ ಒಂದು ವರ್ಷಗಳ ಅವಧಿಗೆ ಸೂಕ್ತ ಮೇಯರನ್ನು ಆರಿಸುವುದು ಕೂಡಾ ಪಕ್ಷದ ಹೈಕಮಾಂಡಿಗೆ ಒಂದು ಸವಾಲಾಗಿದೆ.

“ಪಕ್ಷದ ನಾಯಕರು ಯಾವುದೇ ಹೊಣೆಗಾರಿಕೆಯನ್ನು ನೀಡಿದರೂ ಸ್ವೀಕರಿಸಿ, ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತೇನೆ. ಯಾವುದೇ ಹುದ್ದೆಗಾಗಿ ವಶೀಲಿಬಾಜಿ ಮಾಡುವುದಿಲ್ಲ. ನನ್ನ ಸಾಧನೆ ಮತ್ತು ಅನುಭವದ ಆಧಾರದ ಮೇಲೆ ನನಗೆ ಮೇಯರ್ ಹುದ್ದೆ ನೀಡುತ್ತಾರೆನ್ನುವ ವಿಶ್ವಾಸವಿದೆ” ಎನ್ನುತ್ತಾರೆ ಕವಿತಾ ಸನಿಲ್.

“ನನ್ನನ್ನು ಮೇಯರ್ ಆಗಿ ಕಾಣಲು ಹಲವು ಮಂದಿ ನಾಯಕರು ಹಾಗೂ ಕಾರ್ಯಕರ್ತರು ಆಸೆ ಪಟ್ಟಿದ್ದಾರೆ. ಪಾಲಿಕೆಯ ಮೂಲೆ ಮೂಲೆ ಸೇರಿದಂತೆ ಆಡಳಿತದ ಪ್ರತೀ ವಿಚಾರಗಳ ಬಗ್ಗೆಯೂ ಮೇಯರ್ ಆಗುವವರಿಗೆ ಗೊತ್ತಿರಬೇಕು” ಎನ್ನುತ್ತಾರೆ ಅಪ್ಪಿ.

“ಮೇಯರ್ ಸ್ಥಾನಕ್ಕೆ ನನ್ನ ಹೆಸರನ್ನು ಪಕ್ಷದ ಹಿರಿಯ ನಾಯಕರೇ ಸೂಚಿಸಿದ್ದಾರೆ. ಮೇಯರ್ ಆಗಿ ಆಯ್ಕೆಗೊಂಡರೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವೆ” ಎನ್ನುತ್ತಾರೆ ಪ್ರತಿಭಾ ಕುಳಾಯಿ.