ಮುಂಬೈ-ಕೋಲ್ಕತ್ತಾ ನಡುವೆ ಫೈನಲಿಗೆ ಯಾರು ?

  • ಎಸ್ ಜಗದೀಶ್ಚಂದ್ರ ಅಂಚನ್ ಸೂಟರಪೇಟೆ

ಐಪಿಎಲ್ ಹತ್ತನೇ ಆವೃತ್ತಿಯ ಪ್ರಶಸ್ತಿ ಸುತ್ತಿಗೆ ಬಾಕಿ ಇರುವುದು ಒಂದೇ ಒಂದು ಪಂದ್ಯ. ಅತ್ಯಂತ ರೋಚಕತೆಯನ್ನು ಸೃಷ್ಟಿಸಿರುವ ಈ ಬಾರಿಯ ಐಪಿಎಲ್ ಟೂರ್ನಿಯ ಎರಡನೇ  ಕ್ವಾಲಿಫೈಯರ್ ಪಂದ್ಯ ಇಂದು ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ತೀವ್ರ ಕುತೂಹಲವನ್ನು ಕೆರಳಿಸಿದೆ. ಈಗಾಗಲೇ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ ಫೈನಲ್ ಪ್ರವೇಶಿ ಸಿದ್ದು, ಇನ್ನೊಂದು ತಂಡ ಯಾವುದು ಎನ್ನುವುದು ಇಂದು ನಡೆಯುವ ಪಂದ್ಯದಲ್ಲಿ ನಿರ್ಧಾರವಾಗಲಿದೆ.

ಟೂರ್ನಿಯುದ್ದಕ್ಕೂ ಗಮನಾರ್ಹ ಆಟವಾಡಿ ಪ್ರಶಸ್ತಿ ಗೆಲುವಿನ ಕನಸು ಕಂಡಿರುವ ಮುಂಬೈ ಇಂಡಿಯನ್ಸ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಹಾಗಾಗಿ ಮೇ-17ರಂದು ನಡೆದ  ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರೈಸಿಂಗ್ ಪುಣೆ ತಂಡವನ್ನು ಎದುರಿಸಿತ್ತು. ಆದರೆ, ಈ ಪಂದ್ಯದಲ್ಲಿ  ಟೂರ್ನಿಯ ನಂಬರ್ ಒನ್ ಮುಂಬೈ ಇಂಡಿಯನ್ಸಗೆ ಸೋಲಾಯಿತು. ಈ ಸೋಲನ್ನು ಗೆಲುವಾಗಿ ಪರಿವರ್ತಿಸಲು ಮುಂಬೈ ಇಂಡಿಯನ್ಸಗೆ ಇನ್ನೊಂದು ಅವಕಾಶ ಈ ಪಂದ್ಯದಲ್ಲಿ ದೊರೆತಿದೆ.

ಇಂದಿನ ಮುಖಾಮುಖಿಯಲ್ಲಿ ಗೆಲುವಿನ ಫೆವರಿಟ್ ತಂಡ ಮುಂಬೈ ಇಂಡಿಯನ್ಸ್. ಏಕೆಂದರೆ ಲೀಗ್ ಹಂತದಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ ಸೋಲಿಸಿ ತನ್ನ ಬಲಾಢ್ಯತೆಯನ್ನು ಮೆರೆದಿದೆ. ಏಪ್ರಿಲ್-9ರಂದು ನಡೆದ ಲೀಗ್  ಮೊದಲ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ನಾಲ್ಕು ವಿಕೆಟುಗಳಿಂದ ಜಯಿಸಿದೆ.  ಮೇ-13 ರಂದು ನಡೆದ ಲೀಗ್ ಎರಡನೇ ಸೆಣಸಾಟದಲ್ಲೂ ಕೆಕೆಆರ್ ವಿರುದ್ಧ ಮುಂಬೈ ತಂಡ 9 ರನ್  ರೋಚಕ ಗೆಲುವು ಪಡೆದಿದೆ. ಈ ಎರಡು ಗೆಲುವುಗಳು ಮುಂಬೈ  ತಂಡದ ಭರವಸೆಯನ್ನು ಹೆಚ್ಚಿಸಿದೆ.

ಇನ್ನೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸುಲಭವಾಗಿ ಪರಿಗಣಿಸುವಂತಿಲ್ಲ. ಲೀಗ್ ಹಂತದಲ್ಲಿ ಎಂಟು ಪಂದ್ಯಗಳಲ್ಲಿ ಗೆಲುವು ಪಡೆದು ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಈ ಪಂದ್ಯದಲ್ಲಿ ಕೆಕೆಆರ್ ತಂಡ ಮುಂಬೈ ಇಂಡಿಯನ್ಸಗೆ ಸುಲಭದ ತುತ್ತಾಗಾಲಾರದು ಎನ್ನುವುದು ಒಂದು ಲೆಕ್ಕಾಚಾರ.

ಉಭಯತಂಡಗಳಲ್ಲೂ ವಿಶ್ವದರ್ಜೆಯ ಆಟಗಾರರಿದ್ದು ಮೇಲ್ನೋಟಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿದೆ. ಸ್ವತಃ ನಾಯಕ ಗೌತಮ್ ಗಂಭೀರ್ ಈ ಟೂರ್ನಿಯಲ್ಲಿ ಈಗಾಗಲೇ 485 ರನ್ ಗಳಿಸಿ ಇತ್ತಂಡಗಳಲ್ಲಿ ಗರಿಷ್ಠ ಸ್ಕೋರರ್ ಆಗಿದ್ದಾರೆ. ಜೊತೆಗೆ ರಾಬಿನ್ ಉತ್ತಪ್ಪ ಹಾಗೂ ಮನೀಷ್ ಪಾಂಡೆ ಕೂಡ ರನ್ ಗಳಿಕೆಯಲ್ಲಿ  400ರ ಆಸುಪಾಸಿನಲ್ಲಿದ್ದಾರೆ. ಇನ್ನೂ ಮುಂಬೈ ತಂಡ ಆಟಗಾರರ ಸಂಘಟಿತ ಹೋರಾಟದಿಂದಲೇ ಗೆಲುವನ್ನು ಕಂಡ ತಂಡ. ಈ ನಿಟ್ಟಿನಲ್ಲಿ ಫೈನಲ್ ಪ್ರವೇಶಿಸಿಸಲು ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುವುದಂತು ಗ್ಯಾರಂಟಿ.