ಹಿಂದೂ ವಿರೋಧಿ ಯಾರು

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮನವನ್ನು ದ ಕ ಜಿಲ್ಲೆಯಲ್ಲಿ ಸಂಘ ಪರಿವಾರದ ಸಂಘಟನೆ ಕರಾಳ ದಿನವಾಗಿ ಆಚರಿಸಿ, ಹಿಂದೂ ಬಾಂಧವರ ಕೊಲೆ ಮತ್ತು ಹಿಂದೂ ವಿರೋಧಿ ಚಟುವಟಿಕೆಯಲ್ಲಿ ಪಿಣರಾಯಿ ವಿಜಯನ್ ಸರಕಾರದ ಕೈವಾಡವಿದೆಂದು ಪ್ರಚಾರ ಮಾಡಿ ತಮ್ಮ ಈ ಧೋರಣೆಯನ್ನು ಸಮರ್ಥಿಸಲು ಯತ್ನಿಸಿತು.
ನಮ್ಮದೇ ದ ಕ ಜಿಲ್ಲೆಯಲ್ಲಿ ಈ ಮೊದಲು ನಡೆದಂತಹ ಹಿಂದೂ ಯುವಕರ ಕೊಲೆಗಳಲ್ಲಿ ಹೆಚ್ಚಿನವು ಈ ಕರಾಳ ದಿನವಾಚರಿಸಿದ ಸಂಘಟನೆಯವರೇ ಮಾಡಿದ್ದಾರೆ. ಇಂತಹ ಇತಿಹಾಸವಿರುವ ಸಂಘಟನೆಯ ಸದಸ್ಯರಿಗೆ ಪಿಣರಾಯಿಯವರಿಗೆ ವಿರೋಧ ವ್ಯಕ್ತಪಡಿಸಲು ನಾಚಿಕೆಯಿಲ್ಲದಿರುವುದು ಖೇದಕರ.
ಅನ್ಯಕೋಮಿನವರ ವಿರುದ್ಧ ರಸ್ತೆಗಿಳಿದು ಪ್ರತಿಭಟಿಸುವ ಇವರು, ತಮ್ಮವರೇ ತಮ್ಮ ಸಂಘಟನೆಯ ಸದಸ್ಯರ ಕೊಲೆ ಮಾಡುವುದರ ಬಗ್ಗೆ ಮೌನೌವಾಗಿರುವುದು ಯಾಕೆ  ಕನಿಷ್ಠ ಪಕ್ಷ ಕೊಲೆಯಾದ ಕುಟುಂಬಕ್ಕೆ ಸಾಂತ್ವನ ಹೇಳುವ ಧೈರ್ಯ ಮಾಡದಿರುವುದು ಇವರ ಸಂಘಟನೆಯ ಉದ್ದೇಶವೇನೆಂದು ತಿಳಿಸುತ್ತದೆ.
ಭಾಷಣದಲ್ಲಿ ಸದಾ ಉದ್ರೇಕ, ಘೋಷಣೆಗಳಲ್ಲಿ ಕೋಮುದ್ವೇಷ, ಜಿಲ್ಲೆಯ ಶಾಂತಿ ನೆಮ್ಮದಿಗೆ ಕೊಡಲಿಯೇಟು ಇವರ ನಿರಂತರವಾದ ಕೊಡುಗೆಯಾಗಿದೆ. ಜಿಲ್ಲಾಡಳಿತ ಕೆಲವು ಸೌಮ್ಯ ನಿರ್ಧಾರಗಳು ಇವರುಗಳ ಕ್ರೂರ ವರ್ತನೆಯ ಬೇರು ನೆಲೆಯೂರಲು ಕಾರಣವೂ ಆಗಿದೆ

  • ಖಾದರ್ ಕೆನರಾ  ಪುತ್ತೂರು