ಬಾಲಿವುಡ್ಡಿನ ಟಾಪ್ 10 ಹಿಟ್ ಚಿತ್ರಗಳ್ಯಾವುವು ?

ಚಿತ್ರರಂಗ 2016ರಲ್ಲಿ ಹಲವು ಏಳುಬೀಳುಗಳನ್ನು ಕಂಡಿದೆ. ಈ ವರ್ಷದಲ್ಲಿ ಯಾವ ಚಿತ್ರಗಳು ಅತೀ ಹೆಚ್ಚು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿವೆಯೆಂಬುದರತ್ತ ಒಂದು ನೋಟ ಇಲ್ಲಿದೆ.
ಸಲ್ಮಾನ್ ಖಾನ್ ನಟನೆಯ `ಸುಲ್ತಾನ್’ ಚಿತ್ರ ಸದ್ಯ ಟಾಪ್ ಒನ್ ಸ್ಥಾನದಲ್ಲಿದ್ದರೂ ಬಹಳ ಬೇಗನೇ ಆಮಿರ್ ಖಾನ್ ಅಭಿನಯದ `ದಂಗಲ್’ ಈ ಸ್ಥಾನಕ್ಕೆ ಲಗ್ಗೆಯಿಡುವ ಸಾಧ್ಯತೆಯಿದೆ.
2016ನೇ ಇಸವಿಯಲ್ಲಿನ ಟಾಪ್ ಟೆನ್ ಹಿಟ್ ಚಿತ್ರಗಳ ಲಿಸ್ಟ್ ಇಲ್ಲಿದೆ.

ದಂಗಲ್
ಕ್ರೀಡಾ ಕಥೆಯಾಧರಿತ ಚಿತ್ರವಾದ `ದಂಗಲ್’ ಬಾಕ್ಸಾಫೀಸಿನಲ್ಲಿ ದಾಪುಗಾಲಿಡುತ್ತಿದೆ. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ ಅದು ನೂರು ಕೋಟಿಗೂ ಹೆಚ್ಚು ಹಣ ಬಾಚಿದೆ. ಚಿತ್ರ ಮುನ್ನೂರು ಕೋಟಿ ರೂಪಾಯಿ ಕಲೆಕ್ಷನ್ ದಾಟುವುದೇ ಎಂದು ಕಾದು ನೋಡಬೇಕು. ಸಾಮಾನ್ಯ ಹೀರೋ-ಹೀರೋಯಿನ್ ಕಥೆಗಳಿಗಿಂತ ಭಿನ್ನ ಕಥೆಯಾಧರಿಸಿ ಮಾಡಿದ ಚಿತ್ರಗಳೂ ಯಶಸ್ವಿಯಾಗುವುದೆಂದು ಆಮಿರ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಸುಲ್ತಾನ್
ಬಾಕ್ಸ್ ಆಫೀಸ್ ಕಲೆಕ್ಷನ್ – ರೂ 301.5 ಕೋಟಿ
ಟಾಪ್ ಟೆನ್ ಪಟ್ಟಿಯಲ್ಲಿ ಪ್ರಸಕ್ತ ಅಗ್ರ ಸ್ಥಾನದಲ್ಲಿರುವುದು ಈ ಸಲ್ಮಾನ್ ಖಾನ್ ಅಭಿನಯದ ಚಿತ್ರ. 2016ರಲ್ಲಿ ರೂ 300 ಕೋಟಿ ಗಡಿ ದಾಟಿದ ಏಕೈಕ ಚಿತ್ರ ಇದಾಗಿದೆ. ಇದು ಕೂಡ ಕ್ರೀಡಾ ಕಥೆಯಾಧರಿತ ಚಿತ್ರವಾಗಿದ್ದರೂ ಅನುಷ್ಕಾ ಶರ್ಮ ಕೂಡ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಒಂದು ಪ್ರೇಮ ಕಥೆಯೂ ಅಡಕವಾಗಿದೆ.

ಎಂ ಎಸ್ ಧೋನಿ : ದಿ ಅನ್ ಟೋಲ್ಡ್ ಸ್ಟೋರಿ
ಬಾಕ್ಸ್ ಆಫೀಸ್ ಕಲೆಕ್ಷನ್ : ರೂ 133.5 ಕೋಟಿ
ಈ ವರ್ಷದ ಟಾಪ್ ಮೂರು ಹಿಟ್ ಚಿತ್ರಗಳೂ ಕ್ರೀಡಾ ಕಥೆಯಾಧರಿತ ಚಿತ್ರಗಳೆಂಬುದು ವಿಶೇಷವಾಗಿದೆ. ಈ ಸಾಲಿನ ಮೂರನೇ ಚಿತ್ರ “ಎಂ ಎಸ್ ಧೋನಿ : ದಿ ಅನ್ ಟೋಲ್ಡ್ ಸ್ಟೋರಿ.’ ಭಾರತದ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಾಧರಿತ ಚಿತ್ರ ಇದಾಗಿದ್ದು. ನೀರಜ್ ಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ಸುಶಾಂತ್ ಸಿಂಗ್ ರಾಜಪುತ್ ಹಾಗೂ ದಿಶಾ ಪಠಾನಿ, ಕಿಯಾರಾ ಅಡ್ವಾಣಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಏರ್ ಲಿಫ್ಟ್
ಬಾಕ್ಸ್ ಆಫೀಸ್ ಗಳಿಕೆ : ರೂ 129 ಕೋಟಿ
ಈ ವರ್ಷದ ಹೆಚ್ಚಿನ ಪ್ರಮುಖ ಚಿತ್ರಗಳು ವಾಸ್ತವತೆಗಳಿಗೆ ಹತ್ತಿರವಾಗಿವೆ. `ಏರ್ ಲಿಫ್ಟ್’ ಇದಕ್ಕೆ ಭಿನ್ನವಾಗಿಲ್ಲ. ಭಾರತೀಯ ವಾಯುಸೇನೆಯ ಇತಿಹಾಸದಲ್ಲೇ ನಡೆದ ಅತ್ಯಂತ ದೊಡ್ಡ ರಕ್ಷಣಾ ಕಾರ್ಯಾಚರಣೆಯ ಕಥೆಯಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ನಿಮೃತಾ ಕೌರ್ ಹಾಗೂ ಅದಿಬಾ ಹುಸೇನ್ ನಟಿಸಿದ್ದಾರೆ.

ರುಸ್ತುಂ
ಬಾಕ್ಸ್ ಆಫೀಸ್ ಗಳಿಕೆ -ರೂ 128 ಕೋಟಿ

ಈ ಚಿತ್ರ ಕೂಡ ನಿಜ ಜೀವನ ಕಥೆ ಆಧರಿತವಾಗಿದೆ. ನಾಲ್ಕು ದಶಕಗಳ ಹಿಂದೆ ಕಮಾಂಡರ್ ಕೆ ಎಂ ನಾನಾವತಿ ಅವರನ್ನೊಳಗೊಂಡ ಹಗರಣ ಇಡೀ ದೇಶದಲ್ಲಿ ಸುದ್ದಿಯಾದ ಘಟನೆ ಈ ಅಕ್ಷಯ್ ಕುಮಾರ್ ಅಭಿನಯದ ಚಿತ್ರದ ಮೂಲಕಥೆಯಾಗಿದೆ.

ಎ ದಿಲ್ ಹೇ ಮುಷ್ಕಿಲ್
ಬಾಕ್ಸ್ ಆಫೀಸ್ ಗಳಿಕೆ – ರೂ 112.5 ಕೋಟಿ
ಅಜಯ್ ದೇವಗನ್ ಅವರ ಶಿವಾಯ್ ಚಿತ್ರ ಕೂಡ ಅದೇ ಸಮಯದಲ್ಲಿ ಬಿಡುಗಡೆಯಾಗದೇ ಇರುತ್ತಿದ್ದರೆ ಕರಣ್ ಜೋಹರ್ ನಿರ್ದೇಶನದ ರಣಬೀರ್ ಕಪೂರ್, ಐಶ್ವರ್ಯಾ ರೈ ಹಾಗೂ ಅನುಷ್ಕಾ ಶರ್ಮ ಅಭಿನಯದ ಈ ಚಿತ್ರ ಇನ್ನೂ ರೂ 25 ರಿಂದ 30 ಕೋಟಿ ಹೆಚ್ಚು ಮೊತ್ತ ಕೊಳ್ಳೆ ಹೊಡೆಯುತ್ತಿತ್ತು.

ಹೌಸ್ ಫುಲ್ 3
ಬಾಕ್ಸ್ ಆಫೀಸ್ ಗಳಿಕೆ -ರೂ 109 ಕೋಟಿ
ಇದು ಅಕ್ಷಯ್ ಕುಮಾರ್ ಅವರ ವರ್ಷದ ಮೂರನೇ ಹಿಟ್ ಚಿತ್ರ. ಒಂದು ವಿಧದ ಹಾಸ್ಯ ಭರಿತ ಚಿತ್ರವಾದ `ಹೌಸ್ ಫುಲ್ 3′ ಚಿತ್ರಕ್ಕೆ ಅದರದೇ ಆದ ಅಭಿಮಾನಿಗಳಿದ್ದಾರೆ.

ಬಾಘಿ
ಬಾಕ್ಸ್ ಆಫೀಸ್ ಗಳಿಕೆ – ರೂ 77 ಕೋಟಿ
ಟೈಗರ್ ಶ್ರಾಫ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಈ ಚಿತ್ರವನ್ನು `ಹೌಸ್ ಫುಲ್ 3′ ಚಿತ್ರದ ನಿರ್ಮಾಪಕರೇ (ಸಾಜಿದ್ ನದಿಯದ್ ವಾಲ) ನಿರ್ಮಿಸಿದ್ದರೆಂಬುದು ವಿಶೇಷ.

ನೀರ್ಜಾ
ಬಾಕ್ಸ್ ಆಫೀಸ್ ಗಳಿಕೆ- ರೂ 75.65 ಕೋಟಿ
ಪ್ಯಾನ್ ಆಮ್ ವಿಮಾನ 1986ರಲ್ಲಿ ಅಪಹರಣಕ್ಕೊಳಗಾದಾಗ ಅದರ ಏರ್ ಹೋಸ್ಟೆಸ್ ನೀರ್ಜಾ ಭಾನೋಟ್ ಪ್ರಯಾಣಿಕರನ್ನು ರಕ್ಷಿಸುತ್ತಾ ಅಪಹರಣಕಾರರ ಗುಂಡೇಟಿಗೆ ಬಲಿಯಾದ ಮನೋಜ್ಞ ಸತ್ಯ ಕಥೆಯಾಧರಿತ ಈ ಚಿತ್ರದಲ್ಲಿ ಸೋನಂ ಕಪೂರ್ ನೀರ್ಜಾ ಆಗಿ ಉತ್ತಮ ಅಭಿನಯ ನೀಡಿದ್ದಾರೆ.

ಕಪೂರ್ & ಸನ್ಸ್
ಬಾಕ್ಸ್ ಆಫೀಸ್ ಗಳಿಕೆ- ರೂ 73.3 ಕೋಟಿ
ಸಹಿರಿಯ ನಟ ರಿಷಿ ಕಪೂರ್ ಮುಖ್ಯಭೂಮಿಕೆಯಲ್ಲಿದ್ದು ಅವರ ಮೊಮ್ಮಕ್ಕಳಾಗಿ ಸಿದ್ಧಾರ್ಥ್ ಮಲ್ಹೋತ್ರ ಹಾಗೂ ಫಾವದ್ ಖಾನ್ ಹಾಗೂ ಅವರ ಆಲಿಯಾ ಭಟ್ ಅಭಿನಯಿಸಿದ ಈ ಚಿತ್ರ ತನ್ನ ವಿಭಿನ್ನ ಕಥೆಯಿಂದ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲವಾಗಿದೆ.