ಅಂತರ್ಜಲ ಎಂಬುದು ಇದೆಯೇ ?

ಕೊಳವೆ ಬಾವಿಯಿಂದಾಗಿ ಅಂತರ್ಜಲ ಮಟ್ಟ ಕುಸಿಯುತ್ತದೆ, ಕೊಳವೆಬಾವಿ ತೋಡಬಾರದೆಂದು ಕೃಷಿಕರಲ್ಲಿ ಪ್ರಚಾರ ಮಾಡಲಾಗುತ್ತದೆ. ಇದು ಸರಿಯಲ್ಲ. ಅಂತರ್ಜಲ ಎಂಬ ಪ್ರತ್ಯೇಕ ವ್ಯವಸ್ಥೆ ಇಲ್ಲ. ಭೂಮಿಯ ಆಳದಲ್ಲಿ ನೀರಿರುವ ಪ್ರದೇಶವನ್ನು ಅಂತರ್ಜಲ ಎಂದು ಕರೆದುಕೊಂಡಿದ್ದಾರೆ. ಹಿಂದೊಮ್ಮೆ ಬಂಟ್ವಾಳ ತಾಲೂಕು ಕಪ್ಪು ಪ್ರದೇಶವೆಂದು ಬೋರ್ ಹಾಕಬಾರದೆಂದು ನಿರ್ಬಂಧಿಸಿದ್ದರು. ಕೆಲವು ವರ್ಷಗಳವರೆಗೆ ಈ ಪ್ರದೇಶದ ಜನ ಶಿಕ್ಷೆ ಅನುಭವಿಸಿದ್ದರು. ಅಂತರ್ಜಲ ಎಂಬುದಕ್ಕೆ ವಿವರಣೆ ಇದೆಯೇ ?

ಅಂತರ್ಜಲ ಎಂಬುದು ಇದ್ದರೆ ಒಂದು ನಿರ್ದಿಷ್ಟ ಆಳದಲ್ಲಿ ಎಲ್ಲಾ ಕಡೆಯಲ್ಲಿ ನೀರು ಇರಬೇಕಿತ್ತು. ಕೆಲವು ಕಡೆಗಳಲ್ಲಿ ಐನೂರು ಅಡಿ ಆಳದಲ್ಲಿಯೂ ನೀರು ಸಿಗುವುದಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಮೇಲ್ಪದರದಲ್ಲಿ ಕೆಲವೇ ಅಡಿ ಆಳದಲ್ಲಿ ನೀರು ಸಿಗುತ್ತದೆ. ಭೂಮಿ ಸಮತಟ್ಟಾಗಿಲ್ಲ. ಕೆಲವು ಪ್ರದೇಶದಲ್ಲಿ ಆಳವಾದ ಕಣಿವೆಗಳು ತುಂಬಾ ವಿಸ್ತಾರಕ್ಕೆ ಹರಡಿಕೊಂಡಿರುತ್ತದೆ. ಇನ್ನು ಕೆಲವು ಕಡೆಗಳಲ್ಲಿ ಎತ್ತರದ ಶಿಲಾಮಯ ಭೂಮಿ ಇರುತ್ತದೆ. ಇಲ್ಲಿ ನೀರು ಶೇಖರಣೆ ಆಗಲು ಸಾಧ್ಯ.

ಭೂಮಿಯ ಆಳದಲ್ಲಿರುವ ರಚನೆಯನ್ನು ನೋಡಲಿಕ್ಕೆ ಸಾಧ್ಯವಿಲ್ಲ. ಅಂದಾಜಿನಲ್ಲಿ ಹೇಳಿದ್ದನ್ನು ಕಾರ್ಯರೂಪದಲ್ಲಿ ಅನುಷ್ಠಾನಗೊಳಿಸುವುದು ಎಷ್ಟು ಸರಿ ? ಕಣ್ಣಾರೆ ಕಾಣದ್ದನ್ನು ನಂಬಿಸುವುದರ ಬದಲು ಮಾಧ್ಯಮಗಳ ಮೂಲಕ ತಜ್ಞರು ಸವಿವರವಾಗಿ ತಿಳಿಸಿದರೆ ತುಂಬಾ ಅನುಕೂಲವಾಗುತ್ತದೆ.

  • ಕೆ ಗಣೇಶ್ ರೈ, ಪುಣಚ