ಕಂಕನಾಡಿ ಮಾರುಕಟ್ಟೆಗೆ ಕಾಯಕಲ್ಪ ಎಂದು ?

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅತ್ತ ಬಿಜೈ ಮಾರುಕಟ್ಟೆ ಸುಸಜ್ಜಿತ, ಇತ್ತ ಕದ್ರಿ ಮಾರುಕಟ್ಟೆಗೆ ಶೀಘ್ರವೇ ನೂತನ ಮೂರಂತಸ್ತಿನ ಕಟ್ಟಡ ಭಾಗ್ಯ ಸಿಗುತ್ತಿದೆ. ಆದರೆ ಹಲವು ವರ್ಷಗಳಿಂದ ಕುಸಿಯುವ ಭೀತಿ ಎದುರಿಸುತ್ತಿರುವ ಕಂಕನಾಡಿ ಮಾರುಕಟ್ಟೆಗೆ ಮಾತ್ರ ದುಃಸ್ಥಿತಿ ಮುಂದುವರಿದಿದೆ.

ನಗರದ ಎರಡನೇ ಅತೀ ದೊಡ್ಡ ಮಾರುಕಟ್ಟೆ ಎನ್ನುವ ಹೆಗ್ಗಳಿಕೆ ಹೊಂದಿರುವ ಕಂಕನಾಡಿ ಮಾರುಕಟ್ಟೆಯ ವ್ಯಾಪಾರಿಗಳು ಪ್ರತಿದಿನ ಆತಂಕದ ಸ್ಥಿತಿ ಎದುರಿಸುತ್ತಾರೆ. ಮಾರುಕಟ್ಟೆಯ ವರ್ತಕರ ಸಂಘವೇ ಇಲ್ಲಿನ ಪರಿಸರ ಶುಚಿತ್ವಕ್ಕೆ ಶ್ರಮದಾನ ಮಾಡುತ್ತಿದೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ನಗರ ಪಾಲಿಕೆ, ಜಿಲ್ಲಾಡಳಿತ, ಸಚಿವರು, ಶಾಸಕರಿಗೆ ಹೀಗೆ ಎಲ್ಲರಿಗೂ ಮನವಿ ನೀಡಿದೆ.

ಶಾಸಕ ಜೆ ಆರ್ ಲೋಬೊ ಒಮ್ಮೆ ಇಲ್ಲಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಇಂಟರಲಾಕ್ ಅಳವಡಿಸುವ ಭರವಸೆ ಕೊಟ್ಟು ಹೋದವರು ಮರಳಿ ಬಂದಿಲ್ಲ.

17 ವರ್ಷಗಳ ಹಿಂದೆ ನಿರ್ಮಾಣಗೊಂಡ ಕಳಪೆ ಕಾಮಗಾರಿಯ ಕಟ್ಟಡದ ಬಹುತೇಕ ಭಾಗ ಶಿಥಿಲವಾಗಿದೆ. ಮೀನು ಮಾರಾಟ ಮಾಡುವ ವ್ಯಾಪಾರಿಗಳು ಕುಳಿತುಕೊಳ್ಳುವ ಜಾಗದ ಮೇಲ್ಭಾಗದಲ್ಲಿ ಅಳವಡಿಸಿದ ಫೈಬರ್ ಶೀಟುಗಳು ಎದ್ದುಹೋಗಿ ಮಳೆಗಾಲದಲ್ಲಿ ನೀರು ನೇರವಾಗಿ ಒಳಕ್ಕೆ ಬೀಳುತ್ತಿದೆ. ಸೀಲಿಂಗ್ ಸಿಮೆಂಟ್ ತುಣುಕುಗಳು ಬೀಳುತ್ತಿದೆ. ಕಟ್ಟಡದಲ್ಲಿ ಪಾಚಿ ಹಿಡಿದಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕೈಕೊಡುವ ವಿದ್ಯುತ್ ಸಮಸ್ಯೆ, ಪಾರ್ಕಿಂಗ್ ವ್ಯವಸ್ಥೆ ಅಂತೂ ಇಲ್ಲವೇ ಇಲ್ಲ. ಎಲ್ಲರ ವಾಹನಗಳೂ ರೋಡಿನಲ್ಲಿ !

ಇಲ್ಲಿ ಸರಿಯಾದ ಶೌಚಾಲಯವೂ ಇಲ್ಲ. ಪ್ರಕೃತಿ ಕರೆ ಬಂದಾಗ ಸಾರ್ವಜನಿಕರು ಸೇರಿದಂತೆ ಇಲ್ಲಿನ ವ್ಯಾಪಾರಿಗಳು ಕಂಗೆಡುತ್ತಾರೆ. ಶುಚಿತ್ವಕ್ಕೆ ಇಲ್ಲಿ ಆದ್ಯತೆಯೇ ಇಲ್ಲ. ಇನ್ನು ಅತ್ತ ಕೋಳಿ, ಮಾಂಸ ಮಾರಾಟ ಅಂಗಡಿ ಮುಂಭಾಗದಲ್ಲೇ ತ್ಯಾಜ್ಯ ನೀರು ಹರಿದಾಡುತ್ತಿದೆ. ಗ್ರಾಹಕರು ಈ ಗಲೀಜಿನ ಮೇಲೆ ನಿಂತು ಖರೀದಿಸುವ ಅನಿವಾರ್ಯತೆ. ಮೂಗುಮುಚ್ಚಿ ಹೋಗಬೇಕಾದ ನರಕಯಾತನೆ.

“ಮಂಗಳೂರು ಸ್ಮಾರ್ಟ್ ಸಿಟಿಯಾಗುವಾಗ ಮಾರುಕಟ್ಟೆಯನ್ನು ಸ್ಮಾರ್ಟ್ ಮಾಡುತ್ತೇನೆಂದು ಸ್ಥಳೀಯ ಕಾರ್ಪೊರೇಟರ್ ನವೀನ್ ಡಿಸೋಜ ಹೇಳಿದ್ದರು. 40 ಕೋಟಿ ರೂ ವೆಚ್ಚದಲ್ಲಿ ಕೆ ಎಫ್ ಐ ಎಫ್ ಡಿ ಸಿ ಮೂಲಕ ಸ್ಮಾರ್ಟ್ ಆದ ಹೈಟೆಕ್ ಮಾರುಕಟ್ಟೆ ನಿರ್ಮಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಮಂಗಳೂರು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದೆ. ಮಾರುಕಟ್ಟೆ ಸ್ಮಾರ್ಟ್ ಮಾಡುವ ಕಾರ್ಪೊರೇಟರ್ ಮಾತ್ರ ನಾಪತ್ತೆ” ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು.