ಗೌರಿ ಹಂತಕರ ಬಂಧನಕ್ಕೆ ಇನ್ನೆಷ್ಟು ದಿನ ?

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಐದು ತಿಂಗಳುಗಳೇ ಸಂದಿವೆ. ಸೆಪ್ಟೆಂಬರ್ 5ರಂದು ರಾಜರಾಜೇಶ್ವರಿ ನಗರದ ತಮ್ಮ ನಿವಾಸದೆದುರೇ ಹಂತಕನ ಗುಂಡಿಗೆ ಗೌರಿ ಬಲಿಯಾಗಿದ್ದರೆ, ಘಟನೆ ನಡೆದು ಒಂದು ವಾರದಲ್ಲಿಯೇ ಹೇಳಿಕೆ ನೀಡಿದ್ದ ಗೃಹ ಸಚಿವ ಆರ್ ರಾಮಲಿಂಗಾ ರೆಡ್ಡಿ, “ಹಂತಕರ  ಸುಳಿವು ಲಭ್ಯವಾಗಿದೆ, ಅವರನ್ನು ಸದ್ಯದಲ್ಲಿಯೇ ಬಂಧಿಸಲಾಗುವುದು” ಎಂದಿದ್ದರು.

ಗೃಹ ಸಚಿವರ ಹೇಳಿಕೆಯನ್ನು ಬಹುತೇಕ ಎಲ್ಲರೂ ಗಂಭೀರವಾಗಿ ಪರಿಗಣಿಸಿದ್ದರು. ಪೊಲೀಸರು ಇನ್ನೇನು ಹಂತಕರನ್ನು ಸೆರೆ ಹಿಡಿದೇ ಬಿಡುತ್ತಾರೆಂದು ಹಲವರು ನಂಬಿದ್ದರು. ಆದರೆ ವಾರಗಳು ಹಾಗೂ ತಿಂಗಳುಗಳೇ ಉರುಳಿದರೂ ಹಂತಕರನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ.

ತನಿಖೆಯ ಜವಾಬ್ದಾರಿ ಹೊತ್ತಿದ್ದ ವಿಶೇಷ ತನಿಖಾ ತಂಡ ಕತ್ತಲಲ್ಲಿ ತಡಕಾಡುತ್ತಿದ್ದರೆ ಗೃಹ ಸಚಿವರು ಮಾತ್ರ ಭಾರೀ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾ ಹಂತಕರನ್ನು ಶೀಘ್ರದಲ್ಲಿಯೇ ಸೆರೆ ಹಿಡಿಯಲಾಗುವುದು ಎಂಬ ತಮ್ಮ ಹೇಳಿಕೆಗಳನ್ನೇ ಮುಂದುವರಿಸಿ ಅವರ ಇಲಾಖೆಯ ಹಲವರನ್ನೇ ದಂಗುಬಡಿಸಿದ್ದಾರೆ.

ಇದು ಇಷ್ಟಕ್ಕೇ ಮುಗಿದಿಲ್ಲ. ಬುಧವಾರ ವಿಧಾನಪರಿಷತ್ತಿನಲ್ಲಿ ಹೇಳಿಕೆ ನೀಡಿದ ಸಚಿವ ಮತ್ತೊಮ್ಮ ತಮ್ಮ ಹಿಂದಿನ ರಾಗವನ್ನೇ ಹಾಡಿದ್ದಾರೆ. ಈ ಬಾರಿ ಕೂಡ ಅವರು ಭಾರೀ ವಿಶ್ವಾಸಭರಿತರಾಗಿ ಮಾತನಾಡಿದರು. “ಈ ಹತ್ಯೆಯ ಹಿಂದಿರುವ ಶಕ್ತಿಗಳನ್ನು ಬಂಧಿಸಲಾಗುವುದು ಎಂದು ನನಗೆ ಶೇ 100ರಷ್ಟು ವಿಶ್ವಾಸವಿದೆ. ನಮಗೆ ಸ್ಪಷ್ಟ ಸುಳಿವು ಲಭ್ಯವಿದೆ. ಯಾರೆಂದು ತಿಳಿದು ಬಂದಿದೆ, ಸಾಕ್ಷ್ಯ ಸಂಗ್ರಹಿಸುತ್ತಿದ್ದೇವೆ” ಎಂದಿದ್ದರು.

ಹಂತಕರನ್ನು ಬಂಧಿಸಲು ಇಷ್ಟೊಂದು ಸಮಯವೇಕೆ ಎಂಬುದಕ್ಕೆ ಸಮರ್ಥನೆ ನೀಡುತ್ತಾ “ಧಾಬೋಲ್ಕರ್ ಪ್ರಕರಣದಲ್ಲಿ ಪೊಲೀಸರು ಯಾವುದೇ ಪುರಾವೆಯಿಲ್ಲದೆ ವ್ಯಕ್ತಿಯೊಬ್ಬನನ್ನು ಬಂಧಿಸಿದ ಕಾರಣ ಕೋರ್ಟಿನಲ್ಲಿ ಆತನ ವಿರುದ್ಧದ ಆರೋಪಗಳು ನಿಲ್ಲಲಿಲ್ಲ. ಗೌರಿ ಪ್ರಕರಣದಲ್ಲಿ ಇದೇ ತಪ್ಪು ನಡೆಯಬಾರದೆಂಬುದು ನಮ್ಮ ಇಚ್ಛೆ. ಇದೇ ಕಾರಣಕ್ಕಾಗಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ” ಎಂದು ಸಚಿವರು ಹೇಳಿದ್ದಾರೆ.

ಪ್ರತಿ ಬಾರಿ ಇನ್ನೇನು ಹಂತಕರನ್ನು ಬಂಧಿಸಿಯೇ ಬಿಡುತ್ತೇವೆ ಎಂಬರ್ಥದ ಹೇಳಿಕೆಗಳನ್ನು ಸಚಿವರು ನೀಡುತ್ತಿದ್ದಾರೆ. ಆದರೆ ಬಂಧನ ಮಾತ್ರ ಆಗಿಲ್ಲ. ಯಾವಾಗ ಹಂತಕರ ಬಂಧನವಾಗಲಿದೆ ಎಂಬ ಪ್ರಶ್ನೆ ಎಲ್ಲರದ್ದು.

 

 

LEAVE A REPLY