ಸುದ್ದಿ ವಾಹಿನಿಗೆ ಶಶಿ ತರೂರ್ `ಶಶಿ ಕಪೂರ್’ ಆದಾಗ

“ನನ್ನ ಸಾವಿನ ಸುದ್ದಿ ಅವಧಿ -ಪೂರ್ವ” ಎಂದ ತರೂರ್

ಮುಂಬೈ : ಹಿರಿಯ ನಟ ಶಶಿ ಕಪೂರ್ (79) ನಗರದಲ್ಲಿ ಸೋಮವಾರ ನಿಧನ ಹೊಂದಿದ್ದಾರೆ. ಮಹಾನ್ ನಟನಾಗಿದ್ದ ಶಶಿ ಕಪೂರ್ ಅವರು ಚಿತ್ರರಂಗಕ್ಕೆ ಅನನ್ಯ ಕೊಡುಗೆ ನೀಡಿದವರಾಗಿದ್ದರಿಂದ ಅವರ ಸಾವು ಬಾಲಿವುಡ್ಡನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಈ ನಡುವೆ ಒಂದು ಸ್ವಾರಸ್ಯಕರ  ಘಟನೆಯೂ ನಡೆದಿದೆ. ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ  ಮಾತನಾಡಿದ ಖ್ಯಾತ ಚಿತ್ರ ನಿರ್ದೇಶಕ ಮಧುರ್ ಭಂಡಾರ್ಕರ್, ಹಿರಿಯ ನಟನ ಸಾಧನೆಯನ್ನು ಕೊಂಡಾಡುತ್ತಾ “ಪರ್ಯಾಯ ಸಿನೆಮಾವನ್ನು  ಮುಖ್ಯವಾಹಿನಿಗೆ ತಂದವರು ಶಶಿ ತರೂರ್ ಆಗಿದ್ದರು’ ಎಂದು ಹೇಳಿದರೆಂದು ವಾಹಿನಿ ಟ್ವೀಟ್ ಮಾಡಿತ್ತು.

ಇದನ್ನು ಓದಿದ  ಎಲ್ಲರೂ ತಮ್ಮ ತಲೆ ಕೆರೆದುಕೊಳ್ಳುವಂತಾಯಿತು. ಊಹಿಸಿದಂತೆಯೇ  ಸುದ್ದಿ ವಾಹಿನಿಗೆ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯದ ಮಹಾಪೂರವೇ ಹರಿದು ಬಂದಿತ್ತು. ಕೊನೆಗೆ ಶಶಿ ತರೂರ್ “ನನ್ನ ಕಚೇರಿಗೆ ಸಂತಾಪ ಕರೆಗಳು ಬರುತ್ತಿವೆ.  ನನ್ನ ಸಾವಿನ ಸುದ್ದಿಗಳು, ಉತ್ಪ್ರೇಕ್ಷಿಸಿದೇ ಇದ್ದರೆ, ಕನಿಷ್ಠ  ಅವಧಿಪೂರ್ವವಾಗಿದೆ” ಎಂದು ಟ್ವೀಟ್ ಮಾಡಿದರು.

ಇದಕ್ಕೆ ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಅವರು ಸ್ವಾರಸ್ಯಕರ ಉತ್ತರವೊಂದನ್ನು ನೀಡಿದರು. “ಕೆಲವೊಂದು ಸುದ್ದಿವಾಹಿನಿಗಳು   ನನ್ನನ್ನು ಎಷ್ಟೇ ಇಷ್ಟಪಡದೇ ಇದ್ದರೂ ಯಾವತ್ತೂ ನನ್ನನ್ನು ಸಾಯಿಸಿರಲಿಲ್ಲ. ಆದರೆ ಇಲ್ಲಿ ಶಶಿ, ನೀವು ಒಂದು ವಿಶಿಷ್ಟ ಸ್ಥಾನ ಪಡೆದಿದ್ದೀರಿ” ಎಂದು ಟ್ವೀಟ್ ಮಾಡಿದ್ದರು.

ಕೊನೆಗೆ ಶಶಿ ತರೂರ್ ಅವರು ಹಿರಿಯ ನಟ ಶಶಿ ಕಪೂರ್ ಅವರ ಸಾವಿಗೆ ತಮ್ಮ ಸಂತಾಪ ವ್ಯಕ್ತಪಡಿಸಿ ಹೀಗೆ ಟ್ವೀಟ್ ಮಾಡಿದರು – “ನನ್ನ ಒಂದು ಭಾಗವೇ ಹೊರಟು ಹೋದಂತೆ ನನಗನಿಸುತ್ತದೆ. ಒಬ್ಬ ಮಹಾನ್  ನಟ, ಎಲ್ಲರಿಗೂ ಪ್ರಿಯರಾದವರು,  ಭಾರೀ ಸ್ಫುರದ್ರೂಪಿಯಾಗಿದ್ದವರು ಹಾಗೂ ನನ್ನ ಹೆಸರಿಗೆ ಕನಫ್ಯೂಸ್  ಮಾಡಿಕೊಳ್ಳುವಂತಹ ಹೆಸರಿನವರಾಗಿದ್ದರು. (ನನ್ನ  ತೀವ್ರ ಅನಾರೋಗ್ಯದ ಕುರಿತು ವಿಚಾರಿಸಲು ಪತ್ರಕರ್ತರಿಂದ ನನ್ನ ಕಚೇರಿಗೆ ಎರಡು ಕರೆಗಳು ಬಂದಿದ್ದವು) ಶಶಿಕಪೂರ್ ಅವರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು.”