`ನಾನು ಇತರರನ್ನು ಟೀಕಿಸಿದಾಗ ಸಿಟ್ಟುಗೊಂಡಿದ್ದೇನೆಂದು ಅರ್ಥವಲ್ಲ’

“ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ಹಾಗೂ ಪಕ್ಷಕ್ಕೆ ತಕ್ಕವರಲ್ಲ ಎಂದು ಸಾಬೀತುಪಡಿಸಿದ್ದಾರೆ. ಅವರು ಈಗಲೂ ಅವರ ಹಿಂದಿನ ಬಾಸ್, ದೇವೇಗೌಡರಿಗೆ ತಾನು ನಿಷ್ಠನಾಗಿದ್ದೇವೆಂದು ತೋರಿಸಿಕೊಳ್ಳುತ್ತಿದ್ದಾರೆ. ಅವರು ಒಬ್ಬ ಕಾಂಗ್ರೆಸ್ಸಿಗನಂತೆ ವರ್ತಿಸುತ್ತಿಲ್ಲ. ಅವರ ಎಲ್ಲಾ ನೀತಿ ನಿಯಮಗಳೂ ಜನ ವಿರೋಧಿಯಾಗಿವೆ.’

ದಕ್ಷಿಣ ಕನ್ನಡದ ಹಿರಿಯ ಕಾಂಗ್ರೆಸ್ ನಾಯಕ ಬಿ ಜನಾರ್ದನ ಪೂಜಾರಿ ಇತ್ತೀಚಿಗಿನ ದಿನಗಳಲ್ಲಿ ತಾವು ಕನಿಷ್ಠ ವಾರಕ್ಕೊಮ್ಮೆ ಕರೆಯುವ ಪತ್ರಿಕಾಗೋಷ್ಠಿ ಹಾಗೂ ಈ ಗೋಷ್ಠಿಗಳಲ್ಲಿ ಅವರು ವಿಪಕ್ಷಗಳು ಹಾಗೂ ಕೆಲವೊಮ್ಮೆ ಸ್ವಪಕ್ಷೀಯರ ವಿರುದ್ಧ ಪ್ರಯೋಗಿಸುವ ವಾಗ್ಬಾಣಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಇದರಿಂದಾಗಿಯೇ ಅವರು ಪಕ್ಷದೊಳಗೂ ಹೊರಗೂ ಹಲವರ ವೈರತ್ವ ಕಟ್ಟಿಕೊಳ್ಳುವಂತಾಗಿದೆ. ಇತ್ತೀಚೆಗಂತೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಕಿಡಿ ಕಾರಿದ ನಾಯಕರಿವರು. ಅವರ ಇಂತಹ  ಧೋರಣೆಯಿಂದಾಗಿಯೇ ಅವರು ಜಿಲ್ಲೆಯ ಹೆಚ್ಚಿನ ಕಾಂಗ್ರೆಸ್ ನಾಯಕರಿಂದ ದೂರವೇ ಉಳಿಯುವಂತಾಗಿದೆ. ಆದರೂ ಕಾಂಗ್ರೆಸ್ ಪಕ್ಷದ ಮೇಲೆ ಅವರಿರಿಸಿರುವ ನಂಬಿಕೆ ಹಾಗೂ ಪಕ್ಷಕ್ಕೆ ಅವರು ತೋರಿಸುವ ಶ್ರದ್ಧೆ ಮತ್ತು ನಿಷ್ಠೆ ಅಸಾಧಾರಣವೆಂದೇ ಹೇಳಬಹುದು.  ಅವರೊಂದಿಗೆ ಮಾತನಾಡಿದಾಗ :

  • ನೀವು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕ. ಇತ್ತೀಚಿಗಿನ ದಿನಗಳಲ್ಲಿ ನೀವು ಸಕ್ರಿಯ ರಾಜಕಾರಣದಿಂದ ದೂರವುಳಿದಿರುವ ಕಾರಣ ?

ನಾನು ಅರ್ಧ ಶತಮಾನಕ್ಕಿಂತಲೂ ಹೆಚ್ಚಿನ ಸಮಯದಿಂದ ರಾಜಕೀಯ ರಂಗದಲ್ಲಿದ್ದೇನೆ. ನಾನು ಮೊದಲು ಸೇರಿದ್ದು ಕಾಂಗ್ರೆಸ್ ಪಕ್ಷ ಹಾಗೂ ಅಂದಿನಿಂದ ಇಂದಿನತನಕ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸುತ್ತಾ ಬಂದಿರುವವನು. ಕಾಂಗ್ರೆಸ್ ಪಕ್ಷದೊಳಗೆ ಏನೇ ಗೊಂದಲಗಳಿದ್ದರೂ ನಾನು ಪಕ್ಷದಲ್ಲಿಯೇ ಉಳಿದುಕೊಂಡಿದ್ದೇನೆ. ನಾನು ಯಾವತ್ತೂ ಒಬ್ಬ ಕಾಂಗ್ರೆಸ್ ಕಾರ್ಯಕರ್ತ. ಕಾಂಗ್ರೆಸ್ಸಿಗನಾಗಿಯೇ ನಾನು ಸಾಯುತ್ತೇನೆ.

  • ನೀವು ಒಬ್ಬ ಪ್ರಾಮಾಣಿಕ ಹಾಗೂ ಶಿಸ್ತಿನ ರಾಜಕಾರಣಿಯೆಂದು ಹೆಸರಾದವರು. ಸಮಯಕ್ಕೆ ತಕ್ಕಂತೆ ನೀವು ಬದಲಾಗಿಲ್ಲವೇನು ?

ನಾನೇಕೆ ಬದಲಾಗಬೇಕು ? ನಾನೇನು ಬಣ್ಣ ಬದಲಾಯಿಸುವ ಗೋಸುಂಬೆಯಲ್ಲ.

  • ನೀವು ಇತ್ತೀಚಿಗಿನ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಅಂದ ಹಾಗೆ, ನಿಮ್ಮ ಪತ್ರಿಕಾಗೋಷ್ಠಿಗಳ ಸ್ಥಳವನ್ನು ಏಕೆ ಬದಲಾಯಿಸಿದಿರಿ ?

ನಾನೇನೂ ಪಕ್ಷದಿಂದ ನನ್ನ ಸಂಬಂಧವನ್ನು ಕಡಿದುಕೊಂಡಿಲ್ಲ. ಇತರರು ನನ್ನೊಂದಿಗೆ ಸಂಬಂಧ ಕಡಿದುಕೊಂಡಿದ್ದರೆ ಅದು ನನ್ನ ಸಮಸ್ಯೆಯಲ್ಲ. ಅವರಿಗೆ ರಚನಾತ್ಮಕ ಟೀಕೆಗಳು ಸರಿ ಕಂಡುಬರುವುದಿಲ್ಲ. ಅವರು ತಪ್ಪು ಮಾಡಿದಾಗಲೂ ನಾನು ಸುಮ್ಮನಿರಬೇಕೆಂದು ಅವರು ಬಯಸುತ್ತಾರೆ. ನಾನೇನು ಯಾರ ಕೈಗೊಂಬೆಯೂ ಅಲ್ಲ. ಪ್ರೆಸ್ ಕ್ಲಬ್ಬಿನಲ್ಲಿ ಮಾಧ್ಯಮಗೋಷ್ಠಿ ಏರ್ಪಡಿಸುವುದರಲ್ಲಿ ಏನು ತಪ್ಪಿದೆ ? ಪ್ರೆಸ್ ಕ್ಲಬ್ ಇರುವುದೇ ಅದಕ್ಕಾಗಿ.


“ಎತ್ತಿನಹೊಳೆ ಸರಿಯಾಗಿ ಯೋಚಿಸದೇ ಜಾರಿ ಮಾಡಿದ ಯೋಜನೆಯಾಗಿದೆ ಹಾಗೂ ಅದು ಸ್ಥಾಪಿತ ಹಿತಾಸಕ್ತಿಗಳಿಗೆ ಹೊರತಾಗಿ ಬೇರ್ಯಾರಿಗೂ ಸಹಾಯ ಮಾಡದು. ಅದರಿಂದಾಗಿ ದಕ್ಷಿಣ ಕನ್ನಡ ಬರಡಾಗಿ ಹೋಗುತ್ತದೆ. ಎತ್ತಿನಹೊಳೆ ಜಾರಿಗೊಳಿಸಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ ಮತ್ತು ಸದಾನಂದ ಗೌಡ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಹರಾ ಮರುಭೂಮಿಯನ್ನಾಗಿಸಲು ಹೊರಟಿದ್ದಾರೆ. ದಕ್ಷಿಣ ಕನ್ನಡದ ಜನತೆಗೆ ನೀರು ನಿರಾಕರಿಸುವ ಸಂಚು ಇದಾಗಿದೆ. ಇದೊಂದು ದೊಡ್ಡ ಹಗರಣ.  ಅದು ಸ್ಫೋಟಗೊಳ್ಳುವವರೆಗೆ ಕಾದು ನೋಡಿ.”


  • ನೀವು ಆಗಾಗ ಮುಖ್ಯಮಂತ್ರಿ ಮತ್ತು ರಾಜ್ಯ ಸರಕಾರವನ್ನು ಟೀಕಿಸುತ್ತಲೇ ಇರುತ್ತೀರಲ್ಲವೇ ?

ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ಸಿದ್ಧರಾಗುವಂತೆ ಮಾಡಲು ಪಕ್ಷಕ್ಕೆ ಏಳರಿಂದ ಎಂಟು ವರ್ಷಗಳ ತನಕ ಬೇಕಾಯಿತು. ಅವರನ್ನು ಆ ಹುದ್ದೆಗೆ ಆಯ್ಕೆ ಮಾಡಿದಾಗ ನಾನು ಅವರನ್ನು ಬೆಂಬಲಿಸಿದ್ದೆ. ಆದರೆ ಅವರು ಆ ಹುದ್ದೆಗೆ ಹಾಗೂ ಪಕ್ಷಕ್ಕೆ ತಕ್ಕವರಲ್ಲ ಎಂದು ಸಾಬೀತುಪಡಿಸಿದ್ದಾರೆ. ಅವರು ಈಗಲೂ ಅವರ ಹಿಂದಿನ ಬಾಸ್, ದೇವೇಗೌಡರಿಗೆ ತಾನು ನಿಷ್ಠನಾಗಿದ್ದೇವೆಂದು ತೋರಿಸಿಕೊಳ್ಳುತ್ತಿದ್ದಾರೆ. ಅವರು ಒಬ್ಬ ಕಾಂಗ್ರೆಸ್ಸಿಗನಂತೆ ವರ್ತಿಸುತ್ತಿಲ್ಲ. ಅವರ ಎಲ್ಲಾ ನೀತಿ ನಿಯಮಗಳೂ ಜನ ವಿರೋಧಿಯಾಗಿವೆ. ಸಿ ಎಂ ಇಬ್ರಾಹಿಂ ಮುಂತಾದ ಅವರ ಎಲ್ಲಾ ಹಳೆಯ ಸ್ನೇಹಿತರನ್ನು ಅವರು ಪ್ರಮುಖ ಹುದ್ದೆಗಳಲ್ಲಿ ಕೂರಿಸಿ ಕಾಂಗ್ರೆಸ್ ಪಕ್ಷವನ್ನು ನಾಶಗೊಳಿಸುತ್ತಿದ್ದಾರೆ. ಅವರ ಕಾರ್ಯನಿರ್ವಹಣಾ ಶೈಲಿಯಿಂದ ಶಾಸಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.

  • ನೀವೇಕೆ ಆಗಾಗ ಇಷ್ಟೊಂದು ಸಿಟ್ಟಿಗೊಳಗಾಗುತ್ತೀರಿ ?

ನನಗೆ ಸಿಟ್ಟೆಂದು ಯಾರು ಹೇಳಿದ್ದಾರೆ ? ನಾನು ಯಾವತ್ತೂ ಹೀಗೆಯೇ ಇರುವವನು. ಸಂಸತ್ತಿನಲ್ಲಿಯೂ ನಾನು ಹೀಗೆಯೇ ಮಾತನಾಡುತ್ತಿದ್ದೆ. ಅದು ಸಿಟ್ಟಲ್ಲ. ನಾನು ಇತರರನ್ನು ಅವರ ತಪ್ಪುಗಳಿಗಾಗಿ ಟೀಕಿಸಿದಾಗ ಅದು ನಾನು ಸಿಟ್ಟುಗೊಂಡಿದ್ದೇನೆಂದು ಅರ್ಥವಲ್ಲ. ನಾನು ನನ್ನ ಪ್ರತಿಕ್ರಿಯೆ ನೀಡುತ್ತಿದ್ದೇನಷ್ಟೇ. ಏನನ್ನೇ ಆದರೂ ನೇರವಾಗಿ ಹೇಳುವ ವ್ಯಕ್ತಿ ನಾನು.

  • ಎತ್ತಿನಹೊಳೆ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯವೇನು ? ರಾಜ್ಯ ಸರಕಾರ ಈ ಯೋಜನೆ ಜಾರಿಗೊಳಿಸಲು ನಿರ್ಧರಿಸಿ ಸ್ಥಾಪಿತ ಹಿತಾಸಕ್ತಿಗಳಿಗೆ ಸಹಾಯ ಮಾಡುತ್ತಿದೆಯೇ ?

ಎತ್ತಿನಹೊಳೆ ಸರಿಯಾಗಿ ಯೋಚಿಸದೇ ಜಾರಿ ಮಾಡಿದ ಯೋಜನೆಯಾಗಿದೆ ಹಾಗೂ ಅದು ಸ್ಥಾಪಿತ ಹಿತಾಸಕ್ತಿಗಳಿಗೆ ಹೊರತಾಗಿ ಬೇರ್ಯಾರಿಗೂ ಸಹಾಯ ಮಾಡದು. ಅದರಿಂದಾಗಿ ದಕ್ಷಿಣ ಕನ್ನಡ ಬರಡಾಗಿ ಹೋಗುತ್ತದೆ. ಎತ್ತಿನಹೊಳೆ ಜಾರಿಗೊಳಿಸಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ ಮತ್ತು ಸದಾನಂದ ಗೌಡ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಹರಾ ಮರುಭೂಮಿಯನ್ನಾಗಿಸಲು ಹೊರಟಿದ್ದಾರೆ. ದಕ್ಷಿಣ ಕನ್ನಡದ ಜನತೆಗೆ ನೀರು ನಿರಾಕರಿಸುವ ಸಂಚು ಇದಾಗಿದೆ. ಇದೊಂದು ದೊಡ್ಡ ಹಗರಣ.  ಅದು ಸ್ಫೋಟಗೊಳ್ಳುವವರೆಗೆ ಕಾದು ನೋಡಿ.

  • ಕಳೆದೆರಡು ದಶಕಗಳಿಂದ ಕಾಂಗ್ರೆಸ್ ಪಕ್ಷ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ. ನೀವು ಐದು ಸತತ ಚುನಾವಣೆಗಳಲ್ಲಿ ಸೋಲುಂಡಿದ್ದೀರಿ. ಕಾರಣವೇನು ?

ದಕ್ಷಿಣ ಕನ್ನಡದ ಕಾಂಗ್ರೆಸ್ ಪಕ್ಷದಲ್ಲಿನ ಎಲ್ಲಾ ಸಮಸ್ಯೆಗಳಿಗೂ ಒಳಜಗಳ ಹಾಗೂ ಬೆನ್ನಿಗೆ ಚೂರಿ ಹಾಕುವ ಸ್ವಾರ್ಥಿ ನಾಯಕರ ಪ್ರವೃತ್ತಿ ಕಾರಣವಾಗಿದೆ. ಈ ಜನರೇ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆರಿಸಿರುವುದೇ ಇದಕ್ಕೆ ಸಾಕ್ಷ್ಯವಾಗಿದೆ.

  • ನೀವು ನಿಮ್ಮ ಆತ್ಮಕಥನವನ್ನು ಬರೆಯುತ್ತಿದ್ದೀರೆಂದು ನಾವು ಕೇಳಿದ್ದೇವೆ. ಇದನ್ನು ಯಾವಾಗ ಪ್ರಕಟಿಸುವ ನಿರೀಕ್ಷೆಯಿದೆ ?

ನಾನೀಗಾಗಲೇ ನನ್ನ ಆತ್ಮಕಥನವನ್ನು ಬರೆಯಲು ಆರಂಭಿಸಿದ್ದೇನೆ ಹಾಗೂ ಸುಮಾರು 200 ಪುಟಗಳಷ್ಟು ಬರೆದು ಮುಗಿಸಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿನ ವಾಸ್ತವಾಂಶಗಳು ಈ ಪುಸ್ತಕದಲ್ಲಿರುತ್ತದೆ. ನನ್ನ ಜೀವನ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ನಾನು ಸಾಕ್ಷಿಯಾದ ಹಲವು ಪ್ರಮುಖ ಬೆಳವಣಿಗೆಗಳ ಬಗ್ಗೆ ನಾನು ಬರೆದಿದ್ದೇನೆ. ಈ ಪುಸ್ತಕದಲ್ಲಿರುವ ಕೆಲವು ಮಾಹಿತಿಗಳು ಕೆಲ ಜನರಿಗೆ  ಸಿಟ್ಟು ತರಿಸಬಹುದೆಂದು ನನಗೆ ತಿಳಿದಿದೆ. ಆದರೆ ನಾನು ಸತ್ಯವನ್ನೇ ಬರೆಯಬೇಕಲ್ಲವೇ ? ಯಾರನ್ನಾದರೂ ಸಂತೋಷಪಡಿಸಲು ಸುಳ್ಳು ಬರೆಯಲು ಸಾಧ್ಯವಿಲ್ಲ. ಈ ಪುಸ್ತಕ ಯಾವಾಗ ಸಿದ್ಧವಾಗಬಹುದೆಂದು ನನಗೆ ತಿಳಿದಿಲ್ಲ. ನೀವು ಸ್ವಲ್ಪ ಸಮಯ ಕಾಯಬೇಕು.


“ನಾನೀಗಾಗಲೇ ನನ್ನ ಆತ್ಮಕಥನವನ್ನು ಬರೆಯಲು ಆರಂಭಿಸಿದ್ದೇನೆ ಹಾಗೂ ಸುಮಾರು 200 ಪುಟಗಳಷ್ಟು ಬರೆದು ಮುಗಿಸಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿನ ವಾಸ್ತವಾಂಶಗಳು ಈ ಪುಸ್ತಕದಲ್ಲಿರುತ್ತದೆ. ನನ್ನ ಜೀವನ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ನಾನು ಸಾಕ್ಷಿಯಾದ ಹಲವು ಪ್ರಮುಖ ಬೆಳವಣಿಗೆಗಳ ಬಗ್ಗೆ ನಾನು ಬರೆದಿದ್ದೇನೆ. ಈ ಪುಸ್ತಕದಲ್ಲಿರುವ ಕೆಲವು ಮಾಹಿತಿಗಳು ಕೆಲ ಜನರಿಗೆ  ಸಿಟ್ಟು ತರಿಸಬಹುದೆಂದು ನನಗೆ ತಿಳಿದಿದೆ”.


  • ಹೊಸ ತಲೆಮಾರಿನ ನಾಯಕರುಗಳ ಬಗ್ಗೆ ನಿಮ್ಮ ಅಭಿಪ್ರಾಯ ? ಯುವ ರಾಜಕಾರಣಿಗಳಿಗೆ ನಿಮ್ಮ ಸಲಹೆ ?

ಹೊಸ ತಲೆಮಾರಿನ ರಾಜಕಾರಣಿಗಳಿಗೆ ಶ್ರದ್ಧೆ ಮತ್ತು ಬದ್ಧತೆಯ ಕೊರತೆಯಿದೆ. ಯಾವುದೇ ವೃತ್ತಿಯಲ್ಲಾಗದವರು ಅಂತಿಮವಾಗಿ ರಾಜಕೀಯ ರಂಗ ಪ್ರವೇಶಿಸುತ್ತಾರೆ. ಹೆಚ್ಚಿನವರು ಅವಕಾಶವಾದಿಗಳಾಗಿದ್ದಾರೆ. ಅವರಿಗೆ ಯಾವುದೇ ಸಲಹೆ ಬೇಕಿಲ್ಲ. ಯು ಎಸ್ ಮಲ್ಯ ಹಾಗೂ ಹನುಮಂತಯ್ಯನವರಂತಹ ಮೇರು ವ್ಯಕ್ತಿತ್ವಗಳ ಜೀವನ, ಅವರ ಸ್ವಾರ್ಥರಹಿತ ಸೇವೆ ಹಾಗೂ ಬದ್ಧತೆಯ ಬಗ್ಗೆ ಅರಿತು ಯುವ ರಾಜಕಾರಣಿಗಳು ಸ್ಫೂರ್ತಿ ಪಡೆಯಬೇಕು. (ಕೃಪೆ : ಮಂಗಳೂರು ಟುಡೆ)