ಎನೈಟಿಕೆಯಲ್ಲಿ ಸೈಕಲ್ ಹಂಚಿಕೆ ಸ್ಟಾರ್ಟಪ್ ಜಾರಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಆರೋಗ್ಯಕರ ಜೀವನ ಶೈಲಿ ಪ್ರೋತ್ಸಾಹಿಸುವ ಸಲುವಾಗಿ ಮತ್ತು ಇಂಗಾಲದ ಪ್ರಮಾಣವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಎನೈಟಿಕೆಯ ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು `ವೀಲ್ಸ್ ಆನ್ ರೋಲ್’ ಎಂಬ ಸ್ಟಾರ್ಟಪನ್ನು ಜಾರಿಗೊಳಿಸಿದ್ದಾರೆ. ಭಾನುವಾರ ಸುರತ್ಕಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಈ ಸ್ಟಾರ್ಟಪನ್ನು ಜಾರಿಗೊಳಿಸಲಾಯಿತು.

ವೀಲ್ಸ್ ಆನ್ ರೋಲ್ ಸ್ಟಾರ್ಟಪ್ ತಂಡವು ಅಮಥ್ರ್ಯ ಗುಪ್ತ, ಟಿ ಕೆ ಜೆಸ್ವಂತ್ ರಾಜ್, ಪಿಯುಶ್ ಬನ್ಸಾಲ್ ಮತ್ತು ಪ್ರತ್ಯುಷ್ ಗಿರಿ ಸೇರಿದಂತೆ ನಾಲ್ಕು ಮಂದಿ ಸದಸ್ಯರನ್ನು ಒಳಗೊಂಡಿದೆ. ಸ್ಟಾರ್ಟಪ್ ಸೇವೆಗೆ ಸಂಬಂಧಿಸಿದ ವಿವಿಧ ಪ್ರಕ್ರಿಯೆಗಳನ್ನು ಇವರು ನಿರ್ವಹಿಸಲಿದ್ದಾರೆ. ಈ ತಂಡದ ಸದಸ್ಯರ ಹೊರತಾಗಿ 7 ಸದಸ್ಯರನ್ನು ಒಳಗೊಂಡ ತಂಡ ತಂತ್ರಜ್ಞಾನ ಅಭಿವೃದ್ಧಿಗೆ ಸಹಕರಿಸಲಿದ್ದಾರೆ. ಈ ಸ್ಟಾರ್ಟಪ್ ಸಂಪೂರ್ಣ ಸ್ವಯಂನಿರ್ವಹಣಾ ವ್ಯವಸ್ಥೆಯನ್ನು ಒಳಗೊಂಡಿದ್ದು, ಸಾರ್ವಜನಿಕ ಸೈಕಲ್ ಹಂಚಿಕೆ ಸೇವೆಯನ್ನು ಒದಗಿಸುವ ಉದ್ದೇಶ ಹೊಂದಿದೆ. ಈ ಸ್ಟಾರ್ಟಪ್ ಸಮಗ್ರ ಸ್ವಯಂನಿರ್ವಹಣಾ ವ್ಯವಸ್ಥೆ ವೆಬ್ ಸೈಟ್ ಸಹಾಯದೊಂದಿಗೆ ಆ್ಯಪ್ ಆಧಾರದಲ್ಲಿದೆ.

ವೀಲ್ಸ್ ಆನ್ ರೋಲ್ ಸ್ಟಾರ್ಟಪ್ ಎನೈಟಿಕೆ ಸೈನ್ಸ್ ಮತ್ತು ಟೆಕ್ನಾಲಜಿ ಎಂಟರಪ್ರಿನರ್ಸ್ ಪಾರ್ಕ್ ಇದರಡಿಯಲ್ಲಿ ರಚನೆಯಾಗಿದ್ದು, ಐಬಿಎಂ ಕ್ಲೌಡ್ ಇಂಟಿಗ್ರೇಷನ್ ನಿರ್ದೇಶಕ ಅನ್ಮೋಲ್ ನಾಟಿಯಾಲ್ ಇದಕ್ಕೆ ಮಾರ್ಗದರ್ಶಕರು.

“ಸಿಂಗಲ್ ಸ್ಪೀಡ್ ಮತ್ತು ಮಲ್ಟಿ ಸ್ಪೀಡ್ ಸೈಕಲುಗಳನ್ನು ಅತ್ಯಲ್ಪ ಬಾಡಿಗೆ ದರದಲ್ಲಿ ವಿತರಿಸುವುದು ಮತ್ತು ಜನಸಾಮಾನ್ಯರು ಹಸಿರು ಸಾರಿಗೆಯನ್ನು ಆಯ್ದುಕೊಂಡು ಆರೋಗ್ಯಕರ ಜೀವನ ನಡೆಸುವುದೇ ನಮ್ಮ ಉದ್ದೇಶ” ಎಂದು ಸ್ಟಾರ್ಟಪ್ ಸಂಸ್ಥಾಪಕರು ಹೇಳಿದ್ದಾರೆ.