ವಾಟ್ಸಪ್ ಪ್ರಿಯರಿಂದ ರಸ್ತೆ ನಿರ್ಮಾಣ

 ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಎಣ್ಮಕಜೆ ಗ್ರಾಮ ಪಂಚಾಯತಿಯ ಪಡ್ರೆ ಗ್ರಾಮದ ವಾಣಿನಗರ ಕುತ್ತಾಜೆಯಲ್ಲಿ ಸರಳಿಮೂಲೆ-ಕುಂಡಾಪು ತೋಡಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಡ್ಯಾಮ್ ಕಮ್ ಬ್ರಿಡ್ಜ್ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.

ಸಂಪರ್ಕ ರಸ್ತೆ ಕೆಲಸವು ನಡೆಯಬೇಕಾಗಿದ್ದು ಪೆÇ್ರಜೆಕ್ಟ್ ಎಸ್ಟಿಮೇಶನ್ನಿನಲ್ಲಿ ಇದಕ್ಕೆ ಬೇಕಾಗಿರುವ ಅನುದಾನ ಲಭ್ಯತೆ ಇಲ್ಲವಾಗಿದ್ದರಿಂದ ಹಾಗೂ ಪಂಚಾಯತ ವತಿಯಿಂದ ಅನುದಾನ ಪೂರೈಕೆ ಶೀಘ್ರವಾಗಿ ಸಾಧ್ಯವಿಲ್ಲದ್ದರಿಂದ ತಾತ್ಕಾಲಿಕ ಸಂಪರ್ಕ ರಸ್ತೆಯನ್ನು ಊರಿನ ಸಹೃದಯ ಅಭಿವೃದ್ಧಿಪ್ರಿಯರು, ಸುದರ್ಶನ ವಾಟ್ಸಪ್ ತಂಡದಲ್ಲಿರುವವರು ಹಿರಿಯ ನಾಗರಿಕರ ಮಾರ್ಗದರ್ಶನದೊಂದಿಗೆ ಕೈಗೆತ್ತಿಕೊಂಡಿದ್ದಾರೆ.

“ಪ್ರಥಮ ಹಂತವಾಗಿ ವಿದ್ಯುತ್ ಇಲಾಖೆ ಅನುಮತಿಯೊಂದಿಗೆ ವಿದ್ಯುತ್ ಸಂಪರ್ಕ ಕಂಬಗಳ ಸ್ಥಳಾಂತರ ನಡೆಸಲಾಯಿತು. ಇದಕ್ಕೆ ಸುಮಾರು 5,700 ರೂ ವೆಚ್ಚವಾಗಿದ್ದು ದ್ವಿತೀಯ ಹಂತವಾದ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ರವಿವಾರ ಆರಂಭಗೊಳ್ಳಲಿದೆ” ಎಂದು ಸುದರ್ಶನ್ ವಾಟ್ಸಪ್ ಗ್ರೂಪ್ಪಿನ ಅಜಿತ್ ಪತ್ರಿಕೆಗೆ ತಿಳಿಸಿದ್ದಾರೆ. ಇದಕ್ಕೆ ಸುಮಾರು 20 ಗಂಟೆಗಳ ಜೆಸಿಬಿ ಕಾಮಗಾರಿ ಅಗತ್ಯವಿದ್ದು, ಇದರ ವೆಚ್ಚವನ್ನು ಊರಿನ ಸಹೃದಯರೇ ಭರಿಸಲಿರುವುದಾಗಿ ಅವರು ತಿಳಿಸಿದರು. ಈ ರಸ್ತೆ ನಿರ್ಮಾಣದೊಂದಿಗೆ ವಾಣಿನಗರ- ಬೀಜದಕಟ್ಟೆ ಕಿನ್ನಿಂಗಾರು, ಬದಿಯಡ್ಕ ಅತಿ ಸನಿಹ ರಸ್ತೆಯಾಗಿ ಮಾರ್ಪಡಲಿದೆ.