ಯಾವುದನ್ನು ಆರಿಸಲಿ : ಪ್ರೀತೀನಾ? ಹಣಾನಾ?

ಪ್ರ : ಚಿಕ್ಕಂದಿನಿಂದಲೂ ನಾನು ನೋಡಿದ್ದು ಬಡತನವನ್ನೇ. ಅಮ್ಮನಿಗೆ ಯಾವಾಗ ನೋಡಿದರೂ ಆರೋಗ್ಯ ಸರಿ ಇರುತ್ತಿರಲಿಲ್ಲ. ಅಪ್ಪ ಡ್ರೈವರ್ ಕೆಲಸ ಮಾಡಿದರೂ ಅವರ ದುಡಿಮೆಯಲ್ಲಿ ಅರ್ಧಕ್ಕರ್ಧ ಹೋಗುವುದು ಕುಡಿತಕ್ಕೆ. ಹೈಸ್ಕೂಲಿನಲ್ಲಿ ಓದುತ್ತಿರುವ ಇಬ್ಬರು ತಂಗಿಯರಿಗೋಸ್ಕರ ನಾನು ಪಿಯುಸಿಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾದರೂ ಮುಂದೆ ಓದದೇ ಕೆಲಸಕ್ಕೆ ಸೇರಿಕೊಂಡೆ. ನಾನು ಹಣವಂತರ ಮನೆಯಲ್ಲಿ ಹುಟ್ಟದಿದ್ದರೂ ದೇವರು ನನಗೆ ಒಳ್ಳೆಯ ರೂಪ, ಮಾತುಗಾರಿಕೆ ಮತ್ತು ಚುರುಕುತನ ದಯಪಾಲಿಸಿದ್ದಾನೆ. ನನಗೆ ಬರುವ ಸಂಬಳದಲ್ಲಿಯೇ ಮನೆಯನ್ನೂ ನಿಭಾಯಿಸಿಕೊಂಡು ಹೆಚ್ಚು ದುಬಾರಿಯದಲ್ಲದಿದ್ದರೂ ಆಕರ್ಷಕವಾಗಿರುವ ಡ್ರೆಸ್‍ಗಳನ್ನು ಖರೀದಿಸಿ ನೀಟಾಗಿ ಆಫೀಸಿಗೆ ಹೋಗುತ್ತಿದ್ದೆ. ನಮ್ಮ ಮನೆಯಲ್ಲಿ ಬಡತನವಿದೆ ಎನ್ನುವ ಸುಳಿವು ಉಳಿದವರಿಗೆ ಸಿಗದ ಹಾಗೆ ವರ್ತಿಸುತ್ತಿದ್ದೆ. ನನ್ನ ಡಿಪಾರ್ಟ್‍ಮೆಂಟಿನಲ್ಲಿಯೇ ಕೆಲಸ ಮಾಡುವ ಸಹೋದ್ಯೋಗಿಯೊಬ್ಬ ನನ್ನನ್ನು ಪ್ರೀತಿಸುತ್ತಿದ್ದಾನೆ. ನನಗೂ ಅವನೆಂದರೆ ಮಧುರ ಭಾವನೆ ಇದೆ. ಅವನೂ ನನ್ನ ಹಾಗೇ ಬಡಕುಟುಂಬದಿಂದಲೇ ಬಂದವನು. ಮಧ್ಯಾಹ್ನದ ಹೊತ್ತು ನಾವು ತಂದ ಟಿಫಿನ್ ಹಂಚಿಕೊಂಡು ಹರಟುತ್ತಿದ್ದೆವು. ಈಗ ಕೆಲವು ಸಮಯದಿಂದ ನಮ್ಮ ಕಂಪೆನಿಯ ಬಿಸಿನೆಸ್ ಪಾರ್ಟ್‍ನರಿನ ತಮ್ಮ ಕೂಡಾ ನಮ್ಮ ಆಫೀಸಿಗೆ ಬರುತ್ತಿದ್ದಾನೆ. ಅವನೀಗ ನನ್ನ ಹಿಂದೆ ಬಿದ್ದಿದ್ದಾನೆ. ಅವನು ಮಾರ್ಕೆಟಿಂಗ್ ಸೆಕ್ಷನ್ನಿನ ಹೆಡ್ ಆಗಿರುವುದರಿಂದ ಕೆಲವೊಮ್ಮೆ ಸಹಾಯಕ್ಕೋಸ್ಕರ ನನ್ನನ್ನೂ ಹೊರಗಡೆ ಹೋಗುವಾಗ ಕರೆಯುತ್ತಾನೆ. ಅವನ ಜೊತೆ ಎಸಿ ಕಾರಿನಲ್ಲಿ ಹೋಗುವಾಗ ನನಗೇನೋ ಸಂತಸ. ಹಲವು ಬಾರಿ ಅವನು ದೊಡ್ಡ ರೆಸ್ಟಾರೆಂಟಿನಲ್ಲಿ ನನಗೆ ತಿಂಡಿ ಕೊಡಿಸಿದ್ದ. ಅವನೂ ನನಗೆ ಪ್ರಪೋಸ್ ಮಾಡಿದ್ದಾನೆ. ಹುಟ್ಟಿದಾಗಿನಿಂದ ಪ್ರತೀ ಪೈಸೆಗೆ ಕಷ್ಟಪಡುತ್ತಿದ್ದ ನನಗೆ ಅವನ ಜೊತೆ ತಿರುಗುವುದು ಇಷ್ಟವಾಗುತ್ತಿದೆ. ಆದರೆ ಇವನ ಜೊತೆ ನನ್ನ ಡಿಪಾರ್ಟ್‍ಮೆಂಟಿನಲ್ಲಿ ಕೆಲಸ ಮಾಡುತ್ತಿರುವ ಸಹೋದ್ಯೋಗಿ ಜೊತೆಗಿರುವ ಸಲುಗೆ ಇಲ್ಲ. ಇವನು ಸ್ವಲ್ಪ ಮುಂಗೋಪಿ. ಅವನು ಹೇಳಿದ್ದೇ ನಡೆಯಬೇಕು. ಕರೆದ ಕೂಡಲೇ ಹೋಗದಿದ್ದರೆ ಅಸಹನೆ ತೋರಿಸುತ್ತಾನೆ. ಆದರೆ ಇವನನ್ನು ಮದುವೆಯಾದರೆ ನನ್ನ ಬಡತನ ನೀಗುತ್ತದೆ. ತಂಗಿಯರಿಗೂ ಒಳ್ಳೆಯ ಜೀವನ ಕೊಡಬಹುದು. ಚಿಕ್ಕಂದಿನಿಂದಲೂ ಕಂಡ ಕನಸೂ ನೆರವೇರುತ್ತದೆ. ಆದರೆ ನನ್ನನ್ನು ಮನಸಾರೆ ಪ್ರೀತಿಸುವ ನನ್ನ ಆ ಕಲೀಗನ್ನೂ ಕಳೆದುಕೊಳ್ಳಲೂ ಮನಸ್ಸಾಗುತ್ತಿಲ್ಲ. ಯಾರನ್ನು ಆರಿಸಲಿ ಅನ್ನುವ ಗೊಂದಲದಲ್ಲಿದ್ದೇನೆ. ಸಲಹೆ ಕೊಡುವಿರಾ?

ಉ : ಇಂತಹ ಪರಿಸ್ಥಿತಿಯಲ್ಲಿ ನೀವೇ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಯಾಕೆಂದರೆ ನಿಮ್ಮ ಪ್ರಯೋರಿಟಿ ನಿಮಗಿಂತ ಚೆನ್ನಾಗಿ ಗೊತ್ತಿರುವುದು ಯಾರಿಗೂ ಇಲ್ಲ. ನಿಮ್ಮ ಜೀವನದಲ್ಲಿ ಈಗ ಯಾವುದು ಮುಖ್ಯ ಅಂತ ನೀವೇ ಕೂಲಾಗಿ ಆಲೋಚಿಸಿ. ನೀವು ಮತ್ತು ನಿಮ್ಮ ಕಲೀಗ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೀರಿ. ಆದರೆ ಅವರನ್ನು ಮದುವೆಯಾದರೆ ನಿಮ್ಮ ಜೀವನದಲ್ಲಿ ಹೆಚ್ಚು ಬದಲಾವಣೆ ಸಾಧ್ಯವಿಲ್ಲ. ನೀವು ಬಯಸುವ ಐಷಾರಾಮಿ ಜೀವನ ನಿಮಗೆ ಸಿಗಲಿಕ್ಕಿಲ್ಲ.  ಆದರೆ ಇಬ್ಬರ ದುಡಿತದಿಂದ ಬರುವ ಹಣದಲ್ಲಿಯೇ ತೃಪ್ತಿಯಿಂದ ಬಾಳು ಸಾಗಿಸಲು ಸಾಧ್ಯವಿದೆ. ಆ ಮನಸ್ಸು ನಿಮ್ಮದಾಗಿದ್ದರೆ ಮಾತ್ರ ಅವನನ್ನೇ ಮದುವೆಯಾಗಿ. ಇಲ್ಲಾ ನೀವೀಗ ಬಾಸ್ ತಮ್ಮನನ್ನು ಮದುವೆಯಾದರೆ ನೀವು ಚಿಕ್ಕಂದಿನಿಂದಲೂ ಕನಸು ಕಾಣುತ್ತಿರುವ ಶ್ರೀಮಂತಿಕೆಯ ಜೀವನ ನಿಮ್ಮದಾಗಬಹುದು. ಆದರೆ ನಿಜವಾದ ಪ್ರೀತಿ ಮಾತ್ರ ನಿಮಗೆ ಸಿಗಲಿಕ್ಕಿಲ್ಲ. ಅವನ ಶ್ರೀಮಂತಿಕೆಯ ದರ್ಪವನ್ನು ಸಹಿಸಿಕೊಂಡಿರಬೇಕಾಗಬಹುದು. ನಿಮ್ಮ ತಂಗಿಯರಿಗೆ ಒಳ್ಳೆಯ ಜೀವನ ಕೊಡಬಹುದು ಎನ್ನುವ ಆಸೆ ನಿಮ್ಮದಾಗಿದ್ದರೂ ಅವನು ಅವರಿಗೆ ಸಹಾಯ ಮಾಡಲು ಬಿಡುತ್ತಾನೆ ಎನ್ನುವ ಗ್ಯಾರೆಂಟಿ ಏನು? ಎಲ್ಲವನ್ನೂ ಕೂಲಂಕುಶವಾಗಿ ಯೋಚಿಸಿ. ಪ್ರೀತಿಯೇ ಮುಖ್ಯ, ಅದೊಂದಿದ್ದರೆ ಯಾವ ರೀತಿಯ ಬದುಕನ್ನಾದರೂ ಸಾಗಿಸಬಹುದು ಅಂತ ನಿಮ್ಮ ಮನಸ್ಸು ಹೇಳಿದರೆ ನಿಮ್ಮ ಸಹೋದ್ಯೋಗಿಯನ್ನೇ ಮದುವೆಯಾಗಿ. ಇಲ್ಲಾ ಹಣವೊಂದಿದ್ದರೆ ಎಲ್ಲವನ್ನೂ ಕೊಂಡುಕೊಳ್ಳಬಹುದು ಅಂತ ನಿಮಗೆ ಬಲವಾಗಿ ಅನಿಸಿದರೆ ನಿಮ್ಮ ಬಾಸ್ ತಮ್ಮನನ್ನೇ ವಿವಾಹವಾಗಿ. ಆದರೆ ಈಗ ನೀವು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಮುಂದೆ ಪಶ್ಚಾತ್ತಾಪ ಪಡುವಂತಾಗಬಾರದು ಅಷ್ಟೇ.

LEAVE A REPLY