ನಿಮ್ಮ ಕಾರಿನ ವಿಮಾ ಪಾಲಿಸಿಯಲ್ಲಿರುವ ಐಡಿವಿ ಎಂದರೇನು ?

ನಿಮ್ಮ ಕಾರಿಗೆ ಹಾನಿಯುಂಟಾದಲ್ಲಿ ಅದಕ್ಕೆ ಎಷ್ಟು ವಿಮಾ ಮೊತ್ತ ದೊರಕಬಹುದೆಂಬುದನ್ನು ಲೆಕ್ಕ ಹಾಕಲು ಐಡಿವಿ ಬಹಳ ಮಹತ್ವದ್ದಾಗಿದೆ.

  • ನೀರಜ್ ಗುಪ್ತ

ನಿಮ್ಮ ವಿಮಾ ಏಜಂಟರು ಐಡಿವಿ ಎಂಬ ಪದ ಉಲ್ಲೇಖಿಸುವುದನ್ನು ಅಥವಾ ನಿಮ್ಮ ವಾಹನ ವಿಮಾ ಪಾಲಿಸಿಯಲ್ಲಿ ಐಡಿವಿ ಎಂದು ಬರೆದಿರುವುದನ್ನು ನೀವು ಗಮನಿಸಿರಬಹುದು. ಈ ಐಡಿವಿ ಎಂದರೇನೆಂದು ನಿಮಗೆ ಗೊತ್ತೇ ?

ಅದರ ಪೂರ್ಣರೂಪ ಇನ್ಶೂರ್ಡ್ ಡಿಕ್ಲೇರ್ಡ್ ವೇಲ್ಯು, ಅಂದರೆ  ಅದು ನಿಮ್ಮ ವಾಹನದ ಹಾಲಿ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಅದಕ್ಕೆ ಹಾನಿಯೇನಾದರೂ ಆದಲ್ಲಿ ವಿಮಾ ಕಂಪೆನಿ  ಕೊಡಬಹುದಾದ  ವಿಮಾ ಮೊತ್ತವಾಗಿರುತ್ತದೆ.

ಸಾಮಾನ್ಯವಾಗಿ ಐಡಿವಿ ವಾಹನವೊಂದರ ಮಾರಾಟ ದರದ ಶೇ 95ರಷ್ಟಿರುತ್ತದೆ.  ಈ ಮೊತ್ತ ರಿಜಿಸ್ಟ್ರೇಶನ್ ಮತ್ತು ಇತರ ಎಸ್ಸಸ್ಸರೀಸ್ ವೆಚ್ಚ ಒಳಗೊಂಡಿರುವುದಿಲ್ಲ. ಆದರೆ ನೀವು ನಿಮ್ಮ ವಾಹನವನ್ನು ಮಾರಾಟ ಮಾಡಲು ನಿರ್ಧರಿಸಿದರೆ ನೀವು ಐಡಿವಿ ದರದಷ್ಟೇ ಮೊತ್ತಕ್ಕೆ ಅದನ್ನು  ಮಾರಾಟ ಮಾಡುವ ಹಾಗಿಲ್ಲ.

ಉದಾ : ನೀವು ಹೊಸ ಕಾರೊಂದನ್ನು ಎಕ್ಸ್-ಶೋರೂಂ ದರವಾದ ರೂ 10 ಲಕ್ಷಕ್ಕೆ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳಿ. ಮೊದಲ ವರ್ಷದ ವಿಮಾ ಪಾಲಿಸಿಯಲ್ಲಿ ನಿಮ್ಮ ವಾಹನದ ಐಡಿವಿ ರೂ 9.5 ಲಕ್ಷ ಆಗಿದ್ದರೂ ನೀವು  ಆ ಕಾರನ್ನು ಒಂದು ತಿಂಗಳ ತನಕ ಚಲಾಯಿಸಿ ನಂತರ ಅದನ್ನು ಮಾರಾಟ ಮಾಡಿದರೆ ರೂ 9.5 ಲಕ್ಷ ನಿಮಗೆ ದೊರೆಯುವುದಿಲ್ಲ.

ಇನ್ನೊಂದು ಉದಾಹರಣೆಯಲ್ಲಿ ನೀವು ಹೊಸ ಕಾರನ್ನು ಖರೀದಿಸಿ ಅದಕ್ಕೆ ಕೆಲವೊಂದು ಮಾರ್ಪಾಟುಗಳನ್ನು ರೂ 4 ಲಕ್ಷ ವೆಚ್ಚದಲ್ಲಿ ಮಾಡಿದರೆ ನಿಮ್ಮ ಕಾರಿನ ಮಾರುಕಟ್ಟೆ ಮೌಲ್ಯ ಐಟಿವಿಗಿಂತ  ರೂ 2-3 ಲಕ್ಷ ಹೆಚ್ಚಾಗಬಹುದು. ಆದುದರಿಂದ ಐಡಿವಿ ನಿಮ್ಮ ಕಾರಿನ ನಿಖರ ಮಾರುಕಟ್ಟೆ ಮೌಲ್ಯವಾಗಿರುವುದಿಲ್ಲ.

ವಿಮಾ ನಿಯಂತ್ರಕ ಸಂಸ್ಥೆ ಐಆರ್ಡಿಎಐ  ಐದು ವರ್ಷದ ತನಕದ ವಾಹನಗಳ ಐಡಿವಿ ನಿರ್ಧರಿಸಲು ಕೆಲ ನಿಯಮಗಳನ್ನು ರೂಪಿಸಿದೆ. ಐದು ವರ್ಷಗಳ ನಂತರ ನಿಮ್ಮ ವಿಮಾ ಕಂಪೆನಿ ನಿಮ್ಮ ಕಾರಿನ ಮೌಲ್ಯವನ್ನು ಶೇ 5ರಿಂದ 10ರ ತನಕ ಕಡಿಮೆಗೊಳಿಸುತ್ತದೆ.

ಟ ಐಡಿವಿ ಏಕೆ ಮುಖ್ಯ ?

ನಿಮ್ಮ ಕಾರಿಗೆ ಹಾನಿಯುಂಟಾದಲ್ಲಿ ಅದಕ್ಕೆ ಎಷ್ಟು ವಿಮಾ ಮೊತ್ತ ದೊರಕಬಹುದೆಂಬುದನ್ನು ಲೆಕ್ಕ ಹಾಕಲು ಐಡಿವಿ ಬಹಳ ಮಹತ್ವದ್ದಾಗಿದೆ. ವಾಹನವೊಂದು ಕಳ್ಳತನವಾದರೆ ಅಥವಾ ಅಪಘಾತವೊಂದರಲ್ಲಿ ಹಾನಿಗೀಡಾದರೆ ಸಿಗಬಹುದಾದ  ಮೊತ್ತ ಇದಾಗಿರುತ್ತದೆ.  ವಾಹನ ದುರಸ್ತಿಗೆ ತಗಲುವ ಒಟ್ಟು ಮೊತ್ತ ಐಡಿವಿಗಿಂತ ಶೇ 75ರಷ್ಟು ಹೆಚ್ಚಾಗಿದ್ದರೆ ಅದು ವಾಹನದ ಸಂಪೂರ್ಣ ನಷ್ಟವೆಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ವಿಮಾ ಕಂಪನಿ ಕೆಲ ವೆಚ್ಚಗಳನ್ನು ಕಡಿತಗೊಳಿಸಿ ನಿಮಗೆ ಐಡಿವಿ ಪಾವತಿಸುತ್ತದೆ.

ಟ ನಿಮ್ಮ ಕಾರಿನ ನಿಖರ ಐಡಿವಿಯನ್ನು ನೀವೇಕೆ ಘೋಷಿಸಬೇಕು ?

 ಹೊಸ ವಿಮಾ ಪಾಲಿಸಿಯೊಂದನ್ನು ಖರೀದಿಸುವಾಗ ಅಥವಾ ಇರುವ ಪಾಲಿಸಿಯನ್ನು ನವೀಕರಿಸುವಾಗ ಗ್ರಾಹಕರು ತಮ್ಮ ನಿಖರ ಐಡಿವಿಯನ್ನು ಬಹಿರಂಗಪಡಿಸಬೇಕು. ಇದಕ್ಕಿರುವ ಒಂದು ಮಾನದಂಡವೆಂದರೆ ಪ್ರತಿ ವರ್ಷ ಕಾರಿನ ಮೌಲ್ಯದಲ್ಲಿ ಶೇ 10ರಷ್ಟು ಕಡಿತ. ಕೆಲವೊಮ್ಮೆ ಜನರು ತಾವು ಪಾವತಿಸಬೇಕಾದ ವಿಮಾ ಪ್ರೀಮಿಯಂ ಮೊತ್ತ ಕಡಿಮೆಯಾಗುವಂತೆ ಮಾಡಲು ತಮ್ಮ ವಾಹನಗಳಿಗೆ ಕಡಿಮೆ ಐಡಿವಿ ನಿರ್ಧರಿಸಲು ಒಪ್ಪುತ್ತಾರೆ. ಹೀಗೆ ಮಾಡಿದಲ್ಲಿ ಮುಂದೆ ಅವರಿಗೆ ಅಗತ್ಯವಾದಾಗ ಕ್ಲೇಮ್ ಮೊತ್ತ ಕಡಿಮೆ ದೊರೆಯುವುದು.

ಹೆಚ್ಚಿನ ಐಡಿವಿ ಮೊತ್ತ ಘೋಷಿಸಿದರೂ ಕ್ಲೇಮ್ ಪಾವತಿಸುವ ವಿಚಾರ ಬಂದಾಗ ಕಂಪೆನಿಗೆ ಇದು ತಿಳಿದು ಬಂದಲ್ಲಿ ಸೂಕ್ತ ತಪಾಸಣೆ ನಡೆಸಿಯೇ ವಿಮಾ ಮೊತ್ತವನ್ನು ನೀಡಲಾಗುತ್ತದೆ.