ನಾವಿಬ್ಬರೂ ಕೊರತೆಯನ್ನು ನೀಗಿಕೊಂಡರೆ ತಪ್ಪೇ ?

ಪ್ರ : ನಾನೊಂದು ಟ್ರಾವೆಲ್ ಏಜೆನ್ಸಿಯಲ್ಲಿ ಮೆನೇಜರ್ ಆಗಿದ್ದೇನೆ. ನನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ನನ್ನ ಹೆಂಡತಿ ಸಾಮಾನ್ಯ ರೂಪಿನವಳು. ಅವಳು ಮನೆಕೆಲಸ ಮಾಡಿಕೊಂಡಿರಲಿಕ್ಕೆ ಲಾಯಕ್ಕು ಅಷ್ಟೇ. ನಾನು ಅವಳ ರೂಪ ನೋಡಿ ಮದುವೆಯಾಗಿದ್ದಲ್ಲ. ಆದರೆ ಅವಳ ಮನೆಯ ಶ್ರೀಮಂತಿಕೆ, ಅವರು ಕೊಡುವ ಉಡುಗೊರೆಗೆ ಮರುಳಾಗಿ ಅವಳನ್ನು ಮದುವೆಯಾದೆ. ಎಣಿಸಿದಂತೆ ಮಾವನ ಮನೆಯಿಂದ ಕಾರು, ಬಂಗಲೆ ಎಲ್ಲವೂ ನನಗೆ ದಕ್ಕಿತು. ಆದರೆ ದಾಂಪತ್ಯದಲ್ಲಿ ಸ್ವಾರಸ್ಯವಿಲ್ಲ. ನನ್ನ ಆ ಕೊರತೆಯನ್ನು ನಾನು ನನ್ನ ಆಫೀಸಿನಲ್ಲಿ ತುಂಬಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನನ್ನ ಕಲೀಗ್ ಒಬ್ಬಳು ತುಂಬಾ ಮಾಡರ್ನ್. ಅವಳ ಗಂಡ ವಿದೇಶದಲ್ಲಿ ಇದ್ದಾನೆ. ಈಗ ನಾವಿಬ್ಬರೂ ಕ್ಲೋಸಾಗಿ ಇದ್ದೇವೆ. ಕೆಲವು ಬಾರಿ ಇಬ್ಬರೇ ಮೂವಿಗೆ ಕೂಡಾ ಹೋಗಿದ್ದೇವೆ. ಅಲ್ಲಿ ಕತ್ತಲಲ್ಲಿ ಅವಳ ಕೈಯನ್ನು ಹಿಡಿದು ಚುಂಬಿಸಿದರೂ ಅವಳು ಕೊಸರಾಡಿಲ್ಲ. ಬದಲಾಗಿ ನನಗೆ ಉತ್ತೇಜನವನ್ನೇ ಕೊಟ್ಟಿದ್ದಾಳೆ. ಕೆಲವೊಮ್ಮೆ ಆಫೀಸಿನಲ್ಲಿ ಇಬ್ಬರೇ ಇರುವ ಸಂದರ್ಭದಲ್ಲಿಯೂ ಅನೇಕ ಬಾರಿ ಚುಂಬಿಸಿಕೊಂಡಿದ್ದೇವೆ. ಅವಳನ್ನು ನಾನು ಸಂಪೂರ್ಣವಾಗಿ ನನ್ನವಳನ್ನಾಗಿ ಮಾಡಿಕೊಳ್ಳುವ ಮನಸ್ಸಾಗುತ್ತಿದೆ. ಅವಳೂ ಅದನ್ನೇ ನನ್ನಿಂದ ನಿರೀಕ್ಷಿಸುತ್ತಿರಬಹುದು.  ನನಗೂ ನನ್ನ ಹೆಂಡತಿಯಲ್ಲಿರುವ ಕೊರತೆಯನ್ನು ಇವಳಿಂದ ಪಡೆಯುವ ಹಂಬಲ. ಅವಳ ಒಂಟಿತನವನ್ನು ನೀಗುವುದರ ಜೊತೆ ನಾನೂ ಖುಶಿಪಟ್ಟರೆ ತಪ್ಪಿದೆಯಾ?

: ರೊಟ್ಟಿ ಹಳಸಿದೆ, ನಾಯಿ ಹಸಿದಿದೆ ಅನ್ನುವ ಕತೆಯಾಯಿತು ನಿಮ್ಮದು. ನಿಮ್ಮ ಆ ಸಹೋದ್ಯೊಗಿ ತನ್ನ ಗಂಡನಿಂದ ಬಹಳ ಕಾಲ ದೂರ ಇದ್ದುದರಿಂದ ಗಂಡಸಿನ ಸಹವಾಸಕ್ಕಾಗಿ ಹಾತೊರೆಯುತ್ತಿರಬಹುದು. ಆದರೆ ಅವಳ ಆ ದುರ್ಬಲತೆಯನ್ನು ನೀವು ದುರುಪ ಯೋಗಪಡಿಸಿಕೊಳ್ಳುವುದು ನೀತಿಯುತವಂತೂ ಅಲ್ಲ. ನೀವು ಮದುವೆಯಾಗುವಾಗ ದುರಾಸೆಯಿಂದ ಮಾವನ ಆಸ್ತಿ ಮೇಲೆ ಮಾತ್ರ ಕಣ್ಣಿಟ್ಟಿರಿ ವಿನಃ ಹುಡುಗಿಯನ್ನು ನೋಡಿಯಲ್ಲ ಅಂದರೆ ನೀವೆಷ್ಟು ಸ್ವಾರ್ಥಿಗಳು ಅಂತ ಅದರಿಂದಲೇ ಪುರಾವೆಯಾಗುತ್ತದೆ. ಆತ್ಮಸಾಕ್ಷಿ ಅನ್ನುವುದೇ ಇಲ್ಲದ ನಿಮ್ಮಂತವರಿಗೆ ಯಾರ ಉಪದೇಶವೂ ಪರಿಣಾಮ ಬೀರಲಿಕ್ಕಿಲ್ಲ. ನಿಮ್ಮ ಮಕ್ಕಳನ್ನು ಹಡೆಯಲು, ಬೇಕೆಂದಾಗ ನಿಮ್ಮ ತೃಷೆ ತೀರಿಸಿಕೊಳ್ಳಲು, ಉಳಿದೆಲ್ಲ ಸೇವೆ ಮಾಡಲು, ನಿಮ್ಮ ಐಷಾರಾಮಿ ಬದುಕಿಗೆ ಹಣ ಹೊಂದಿಸಲು ನಿಮಗೆ ನಿಮ್ಮ ಪತ್ನಿ ಬೇಕು. ಆದರೆ ಉಳಿದೆಲ್ಲ ಮೋಜು ಮಸ್ತಿಗೆ ಮಾಡರ್ನ್ ಹುಡುಗಿಯೇ ಬೇಕು. ನಿಮ್ಮ ಆ ಕಲೀಗ್ ಕೂಡಾ ಅದೇ ರೀತಿಯ ಮನೋಭಾವದವಳಿರಬೇಕು. ದುಡಿಯಲು ಮತ್ತು ಹೆಸರಿಗೆ ಮಾತ್ರ ಒಬ್ಬ ಗಂಡ. ಉಳಿದೆಲ್ಲದಕ್ಕೆ ಇನ್ನೊಬ್ಬ. ಗಂಡ ಹತ್ತಿರವಿರಬೇಕೆಂದಿದ್ದರೆ ಗಂಡನನ್ನೇ ಚಿಕ್ಕ ಕೆಲಸವಾದರೂ ಇಲ್ಲೇ ದುಡಿಯಲು ಹೇಳಬಹುದಲ್ಲ? ನೈತಿಕತೆಯೆನ್ನುವುದು ಸ್ವಲ್ಪವಾದರೂ ಇದ್ದರೆ ನಿಮ್ಮ ಬಾಳಸಂಗಾತಿಯ ಜೊತೆಗೇ ತೃಪ್ತಿಯಿಂದಿರುವುದು ಅಭ್ಯಾಸ ಮಾಡಿಕೊಳ್ಳಿ.