ಭಾರತದ ಪೊಲೀಸರಿಗೆ ಏನಾಗಿದೆ ?

ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಗೆ ಸ್ವಾಯತ್ತತೆ ನೀಡಬೇಕು ಮತ್ತು ಉತ್ತರದಾಯಿತ್ವ ಇರಬೇಕು ಎಂದು ಸುಪ್ರೀಂಕೋರ್ಟ್ ಹತ್ತು ವರ್ಷದ ಹಿಂದೆಯೇ ಹೇಳಿದ್ದರೂ ಪರಿಸ್ಥಿತಿ ಬದಲಾಗಿಲ್ಲ.

  • ಪುಷ್ಕರ್ ರಾಜ್

ಅಪರೂಪ ಎನ್ನಬಹುದಾದರೂ ಕೆಲವೊಮ್ಮೆ ಭಾರತೀಯ ಸಿನಿಮಾಗಳು ಸಾಮಾಜಿಕ ವಾಸ್ತವವನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತವೆ. ಸಮಾಜದ ವೈರುಧ್ಯಗಳಿಗೆ ಜನಸಾಮಾನ್ಯರನ್ನು ಮುಖಾಮುಖಿಯಾಗಿ ನಿಲ್ಲಿಸುತ್ತವೆ. ಇತ್ತೀಚಿನ ಎರಡು ಹಿಂದೀ ಚಿತ್ರಗಳು – ಪಿಂಕ್ ಮತ್ತು ಅಕಿರಾ – ಭಾರತದಲ್ಲಿ ಪೊಲೀಸ್ ವ್ಯವಸ್ಥೆಯ ವಾಸ್ತವ ಸನ್ನಿವೇಶವನ್ನು ನಮ್ಮ ಮುಂದಿಡುತ್ತವೆ.

ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಗೆ ಸ್ವಾಯತ್ತತೆ ನೀಡಬೇಕು ಮತ್ತು ಉತ್ತರದಾಯಿತ್ವ ಇರಬೇಕು ಎಂದು ಸುಪ್ರೀಂಕೋರ್ಟ್ ಹತ್ತು ವರ್ಷದ ಹಿಂದೆಯೇ ಹೇಳಿದ್ದರೂ ಪರಿಸ್ಥಿತಿ ಬದಲಾಗಿಲ್ಲ. 1947ರ ನಂತರವೂ ಭಾರತದ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ನಿಯಂತ್ರಿಸುತ್ತಿರುವುದು 1861ರಲ್ಲಿ ಬ್ರಿಟೀಷರು ರೂಪಿಸಿದ ಕಾಯ್ದೆಗಳೇ. ಸ್ವಾತಂತ್ರ್ಯಾನಂತರ ಹಲವಾರು ಪ್ರಜಾತಾಂತ್ರಿಕ ಕಾನೂನುಗಳನ್ನು ಜಾರಿಗೊಳಿಸಿದ್ದರೂ ಈ ಕಾನುನುಗಳ ಅನುಷ್ಟಾನದ ಹೊಣೆ ಹೊತ್ತಿರುವ ಪೊಲೀಸ್ ಇಲಾಖೆ ಇನ್ನೂ ಸರ್ವಾಧಿಕಾರಿ ಧೋರಣೆಯನ್ನೇ ಅನುಸರಿಸುತ್ತಿದೆ. ಈ ಅಂಶಗಳು `ಪಿಂಕ್’ ಮತ್ತು `ಅಕಿರಾ’ ಚಿತ್ರದಲ್ಲಿ ಸ್ಪಷ್ಟವಾಗುತ್ತವೆ.

`ಪಿಂಕ್’ ಚಿತ್ರದಲ್ಲಿ ವೇಶ್ಯಾವಾಟಿಕೆಯ ಸುಳ್ಳು ಆರೋಪಗಳನ್ನು ಎದುರಿಸುವ ಮೂವರು ಯುವತಿಯರ ಮೇಲೆ ಪೊಲೀಸರ ದೌರ್ಜನ್ಯವನ್ನು ತೋರಿಸಲಾಗಿದೆ. ರಾಜಕಾರಣಿಗಳ ಒತ್ತಡಕ್ಕೆ ಮಣಿದು, ಸುಳ್ಳು ಎಫ್ ಐ ಆರ್ ದಾಖಲಿಸಿ ಮಹಿಳೆಯರನ್ನು ಬಂಧಿಸಲಾಗುತ್ತದೆ. ದೇಶದಲ್ಲಿ ಸಾಮಾನ್ಯವಾಗಿ ನಡೆಯುವಂತೆ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪೊಲೀಸರು ತಮ್ಮ ಕಾರ್ಯನಿರ್ವಹಿಸುತ್ತಾರೆ. ರಾಜಕೀಯ ವಿರೋಧಿಗಳ ಬಂಧನ, ಪ್ರತಿಭಟನಾಕಾರರ ದಮನ, ಮಾನವ ಹಕ್ಕು ಕಾರ್ಯಕರ್ತರ ವಿರುದ್ಧ ಮಿಥ್ಯಾರೋಪ… ಈ ಸಂಗತಿಗಳು ಸಾಮಾನ್ಯವಾಗಿದೆ.

ಮಾಜಿ ಡಿಜಿಪಿ ಪ್ರಕಾಶ್ ಸಿಂಗ್ ಈ ಅಂಶಗಳನ್ನು ಪ್ರಸ್ತಾಪಿಸಿದ ನಂತರವೇ ಸುಪ್ರೀಂ ಕೋರ್ಟು ಪೊಲೀಸ್ ಸುಧಾರಣೆಗಳನ್ನು ಪಟ್ಟಿ ಮಾಡಿ ಆದೇಶ ನೀಡಿತ್ತು. ರಾಜಕೀಯ ಪ್ರೇರಿತ ಪೊಲೀಸರು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸುತ್ತಾರೆ. ಗಾಯಗೊಂಡ ವ್ಯಕ್ತಿಯಿಂದ ಅಪಾರ ಮೊತ್ತದ ಹಣ ಪಡೆದು ಅವನನ್ನು ಹತ್ಯೆ ಮಾಡುವ ಪೊಲೀಸರ ಕೃತ್ಯವನ್ನು ಚಿತ್ರದಲ್ಲಿ ಕಾಣಬಹುದು. ಸಾಕ್ಷಿಗಳನ್ನೂ ನಕಲಿ ಎನ್ಕೌಂಟರಿನಲ್ಲಿ ಕೊಲ್ಲಲಾಗುತ್ತದೆ. ಇತ್ತೀಚಿನ ಸಿಮಿ ಕಾರ್ಯಕರ್ತರ ಘಟನೆಯನ್ನು ಇದು ಬಿಂಬಿಸುತ್ತದೆ.

ಭಾರತದಲ್ಲಿ ಎನ್ಕೌಂಟರ್ ಕೊಲೆಗಳು ಸಾಮಾನ್ಯವಾಗಿವೆ. 2016ರಲ್ಲಿ ಮಾನವ ಹಕ್ಕು ಆಯೋಗ ಸಲ್ಲಿಸಿದ ವರದಿಯೊಂದರಲ್ಲಿ ಕಳೆದ ಒಂದು ವರ್ಷದಲ್ಲಿ 206 ಎನ್ಕೌಂಟರ್ ಹತ್ಯೆಗಳು ನಡೆದಿರುವುದನ್ನು ಉಲ್ಲೇಖಿಸುತ್ತದೆ. ಬಹುತೇಕ ಘಟನೆಗಳು ಪ್ರಶ್ನಾರ್ಹವಾಗಿವೆ ಎಂದು ಆಯೋಗ ಹೇಳುತ್ತದೆ.

ಭಾರತದ ಪೊಲೀಸ್ ಇಲಾಖೆಯಲ್ಲಿ ಗಂಭೀರ ಸಮಸ್ಯೆಗಳು ಹಲವಾರು ಇವೆ. ಒಬ್ಬ ಪೊಲೀಸ್ ಪೇದೆಗೆ ಭಾರತೀಯ ಸಾಕ್ಷಿ ಕಾಯ್ದೆಯ ಮತ್ತು ಅಪರಾಧ ಸಂಹಿತೆಯ ಪರಿಜ್ಞಾನವೇ ಇರುವುದಿಲ್ಲ. ಶೇ 55ರಷ್ಟು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯೇ ಆಗುವುದಿಲ್ಲ. ಏಕೆಂದರೆ ಮೊಕದ್ದಮೆಯ ತಳಹದಿಯೇ ಶಿಥಿಲವಾಗಿರುತ್ತದೆ.

ಪೊಲೀಸ್ ಇಲಾಖೆಯಲ್ಲಿ ಮೂಲ ಸೌಲಭ್ಯಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಅಗತ್ಯವಾದ ಪ್ರೋತ್ಸಾಹ ನೀಡಲಾಗುತ್ತಿಲ್ಲ. ಈ ಸಮಸ್ಯೆಗಳನ್ನು ಶೀಘ್ರ ನಿವಾರಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಆದರೆ ಆಳುವ ವರ್ಗಗಳಿಗೆ, ರಾಜಕೀಯ ಪಕ್ಷಗಳಿಗೆ ಪೊಲೀಸ್ ಇಲಾಖೆಯ ಸುಧಾರಣೆ ಬೇಕಾಗಿಲ್ಲ. ಏಕೆಂದರೆ ಪ್ರಸ್ತುತ ವ್ಯವಸ್ಥೆ ಅವರ ಸ್ವಾರ್ಥ ಸಾಧನೆಗೆ ಅನುಕೂಲಕರವಾಗಿದೆ.

ಈ ಸಂದರ್ಭದಲ್ಲಿ ಸಾಮಾಜಿಕ ಚಳುವಳಿಗಳ ನಾಯಕರೂ ಸಹ ಪೊಲೀಸ್ ಇಲಾಖೆಯ ಸುಧಾರಣೆಗಳಿಗಾಗಿ ಹಕ್ಕೊತ್ತಾಯಗಳನ್ನು ಮಂಡಿಸುವ ಅವಶ್ಯಕತೆ ಇಂದು ಹೆಚ್ಚಾಗಿದೆ. ಆಮ್ ಆದ್ಮಿಯಂತಹ ಪಕ್ಷಗಳನ್ನು ಈ ನಿಟ್ಟಿನಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬಹುದಾಗಿದೆ. `ಪಿಂಕ್’ ಮತ್ತು `ಅಕಿರಾ’ ಚಿತ್ರಗಳು ಈ ವಾಸ್ತವವನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತವೆ. ನಾವು ಬದಲಾವಣೆಯನ್ನು ಬಯಸುತ್ತೇವೆಯೋ ಅಥವಾ ಯಥಾಸ್ಥಿತಿಯನ್ನೇ ಮುಂದುವರೆಸಲು ಇಚ್ಚಿಸುತ್ತೇವೆಯೋ ಎಂದು ನಿರ್ಧಾರ ಮಾಡುವುದು ನಾಗರಿಕ ಸಮಾಜಕ್ಕೆ ಬಿಟ್ಟ ವಿಚಾರ.