2019ರ ನಿರೀಕ್ಷೆ ಏನಿರಬಹುದು ?

ಇತ್ತೀಚಿನ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಸಾಧಿಸಿರುವ ಗೆಲುವು 2019ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಗೆಲ್ಲುವುದನ್ನು ಖಚಿತಪಡಿಸಿದೆ.

  • ಆಕಾರ್ ಪಟೇಲ್

ಊಹೆ  ಮಾಡುವುದು ಬಹಳ ಕಷ್ಟ, ಅದರಲ್ಲೂ ಭವಿಷ್ಯದ ಬಗ್ಗೆ ಊಹೆ ಮಾಡುವುದು ಇನ್ನೂ ಕಷ್ಟ ಎಂಬ ವಿಡಂಬನಾತ್ಮಕ ಮಾತುಗಳನ್ನು ಅಮೆರಿಕದ ಬೇಸ್ಬಾಲ್ ಆಟಗಾರ ಯೋಗಿ ಬೆರ್ರಾ ಹೇಳುತ್ತಾನೆ. ಹಾಗೆಂದ ಮಾತ್ರಕ್ಕೆ  2019ರಲ್ಲಿ ಭಾರತದ ರಾಜಕೀಯ ಚಿತ್ರಣ ಹೇಗಿರಬಹುದು ಎಂದು ಯೋಚಿಸುವುದನ್ನು ನಾವೇನೂ ಕೈಬಿಡಬೇಕಿಲ್ಲ.

2014ರ ಚುನಾವಣೆಗಳ ಫಲಿತಾಂಶವನ್ನೇ  ಆಧರಿಸಿ 2019ರ ಬಗ್ಗೆ ಅಂದಾಜು ಮಾಡಬಹುದು. ಇತ್ತೀಚಿನ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಸಾಧಿಸಿರುವ ಗೆಲುವು 2019ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಗೆಲ್ಲುವುದನ್ನು ಖಚಿತಪಡಿಸಿದೆ. ಕಳೆದ ಚುನಾವಣೆಗಳ ಮತ ಎಣಿಕೆ ಆರಂಭವಾಗುವ ಮುನ್ನ ನರೇಂದ್ರ ಮೋದಿ, ತಮ್ಮ ಸಾರ್ವಜನಿಕ ಸಭೆಗಳಲ್ಲಿ ನೆರೆದಿದ್ದ ಜನಸ್ತೋಮ ತಮ್ಮ ಗೆಲುವಿನ ವಿಶ್ವಾಸ ಹೆಚ್ಚಿಸಿವೆ ಎಂದು ಹೇಳುತ್ತಿದ್ದರು. ಅದರಂತೆಯೇ 282 ಸ್ಥಾನಗಳನ್ನು ಬಿಜೆಪಿ ಗಳಿಸಿತ್ತು.

ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ ಬಹುತೇಕ ರಾಜ್ಯಗಳಲ್ಲಿ ಪಕ್ಷ ಅಧಿಕಾರದಲ್ಲಿದ್ದುದನ್ನೂ ಗಮನಿಸಬೇಕು. ಈ ಉತ್ತರ ಭಾರತದ ರಾಜ್ಯಗಳ ಪೈಕಿ ಗುಜರಾತ್ 26, ರಾಜಸ್ಥಾನ 25, ಮಧ್ಯಪ್ರದೇಶ 27, ಜಾರ್ಖಂಡ್ 12, ಹಿಮಾಚಲ್ ಪ್ರದೇಶ 4, ಹರಿಯಾಣ 7, ದೆಹಲಿ 7, ಛತ್ತಿಸಘಡ್ 10, ಉತ್ತರಖಂಡ 10 ಮತ್ತು ಉತ್ತರ ಪ್ರದೇಶ 71 ಸ್ಥಾನಗಳನ್ನು ನೀಡುವ ಮೂಲಕ ಇನ್ನೂರರ ಗಡಿ ದಾಟಿಸಿದ್ದವು. ಇತರ ರಾಜ್ಯಗಳಲ್ಲಿ ಮಹತ್ತರ ಸಾಧನೆಯ ಅವಶ್ಯಕತೆಯೇ ಇರಲಿಲ್ಲ.

ಆದರೆ 2019ರಲ್ಲಿ ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಅದೇ ಸಾಧನೆಯ ಪುನರಾವರ್ತನೆಯಾಗುವುದು ಸುಲಭವಲ್ಲ. ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಲ ಮತ್ತು ಒಡಿಷಾದಲ್ಲಿ ಉತ್ತಮ ಸಾಧನೆ ತೋರಬಹುದು. ಈ ಬಲದ ಹಿನ್ನೆಲೆಯಲ್ಲೇ ಮೋದಿ ದಕ್ಷಿಣ ಭಾರತದ ರಾಜ್ಯಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ತೋರುವುದಿಲ್ಲ.

ಆರೆಸ್ಸೆಸ್ ಕಾರ್ಯಕರ್ತರ ನಿರಂತರ ಶ್ರಮ ಮತ್ತು ಚಟುವಟಿಕೆಯ ಪರಿಣಾಮವಾಗಿ ಬಿಜೆಪಿ ಕೇರಳದಂತಹ ರಾಜ್ಯದಲ್ಲೂ ಶೇ 10ರಷ್ಟು ಮತ ಗಳಿಸಲು ಸಾಧ್ಯವಾಗಿದೆ. ಇತರ ದಕ್ಷಿಣ ರಾಜ್ಯಗಳಲ್ಲೂ ಕಾಂಗ್ರೆಸ್ ದುರ್ಬಲವಾಗಿರುವುದು ಬಿಜೆಪಿಗೆ ನೆರವಾಗಲಿದೆ.

ಆದರೆ 2004ರಲ್ಲಿ ಇದೇ ರೀತಿಯ ವಿಶ್ವಾಸದಿಂದ ಚುನಾವಣೆ ಎದುರಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಸೋಲು ಎದುರಿಸಬೇಕಾಯಿತು. 2019ರಲ್ಲೂ ಇದೇ ಸನ್ನಿವೇಶ ಉಂಟಾಗಬಹುದು. ಅನೇಕ ಸರ್ಕಾರಗಳು, ನಾಯಕರು ಅಲ್ಪಾವಧಿಯಲ್ಲೇ ತಮ್ಮ ಜನಪ್ರಿಯತೆ ಕಳೆದುಕೊಂಡಿದ್ದಾರೆ. ಮೋದಿ ಸಹ ಒಬ್ಬರಾಗಬಹುದು.