ದಾರಿ ವಿವಾದ : ಪಂ ಕಾರ್ಯದರ್ಶಿಗೆ ವೆಲ್ಫೇರ್ ಪಾರ್ಟಿ ಕಾರ್ಯಕರ್ತರಿಂದ ದಿಗ್ಬಂಧನ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕುಂಜತ್ತೂರು ಸಮೀಪದ ಸನ್ನಡ್ಕದಲ್ಲಿರುವ ಜಮೀನಿಗೆ ಕೃಷಿ ಯಂತ್ರಗಳನ್ನು ಕೊಂಡೊಯ್ಯಲು ದಾರಿ ನೀಡಲು ನಿರಾಕರಿಸುತ್ತಿರುವ ಖಾಸಗಿ ವ್ಯಕ್ತಿಯ ನಿಲುವನ್ನು ಪ್ರತಿಭಟಿಸಿ ವೆಲ್ಫೇರ್ ಪಾರ್ಟಿ ಕಾರ್ಯಕರ್ತರು ಮಂಜೇಶ್ವರ ಪಂ ಕಾರ್ಯದರ್ಶಿ ಧನಂಜಯರನ್ನು ದಿಗ್ಬಂಧನಗೊಳಿಸಿ ಪ್ರತಿಭಟನೆ ನಡೆಸಿದರು.

ಪಂಚಾಯತ್ ಅಧೀನದಲ್ಲಿರುವ ಪರಂಬೋಕು ಸ್ಥಳವನ್ನು ಖಾಸಗಿ ವ್ಯಕ್ತಿಯೊಬ್ಬ ಅತಿಕ್ರಮಿಸಿರುವುದನ್ನು ಕೂಡಲೇ ತೆರವುಗೊಳಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಒಂದು ವರ್ಷದ ಹಿಂದೆ ಆರ್ ಟಿ ಒ ನಿರ್ದೇಶನ ನೀಡಿದ್ದರೂ ಅದನ್ನು ಅನುಷ್ಟಾನಕ್ಕೆ ತರಲು ಪಂಚಾಯತಿ ಕಾರ್ಯದರ್ಶಿ ಮೀನ ಮೇಷ ಎಣಿಸುತ್ತಿರುವುದಾಗಿ ಪ್ರತಿಭಟನಾನಿರತರು ಆರೋಪಿಸಿದರು.

ಸ್ಥಳ ಅತಿಕ್ರಮಿಸಿದ ಖಾಸಗಿ ವ್ಯಕ್ತಿಗೆ ಪಂ ಅಧಿಕೃತರು ರಕ್ಷಣೆ ನೀಡುತ್ತಿರುವುದಾಗಿ ಆರೋಪಿಸಲಾಗಿದೆ. ಎರಡು ದಿನದೊಳಗಾಗಿ ಕ್ರಮ ಕೈಗೊಳ್ಳಲಾಗುವುದೆಂಬ ಕಾರ್ಯದರ್ಶಿಯ ಭರವಸೆಯ ಹಿನ್ನೆಲೆಯಲ್ಲಿ ಕಾರ್ಯದರ್ಶಿಯನ್ನು ದಿಗ್ಬಂಧನಾ ಚಳವಳಿಯಿಂದ ಮುಕ್ತಗೊಳಿಸಲಾಯಿತು.

ಮುಖಂಡರ ಸಹಿತ ಕಾರ್ಯಕರ್ತರು ದಿಗ್ಬಂಧನದಲ್ಲಿ ಪಾಲ್ಗೊಂಡರು.