ಬಡವರಿಗೆ ಕಡಿಮೆ ದರದಲ್ಲಿ ಊಟ ತಿಂಡಿ ವ್ಯವಸ್ಥೆ ಸ್ವಾಗತಾರ್ಹ ಕ್ರಮ

ಕರ್ನಾಟಕ ಸರಕಾರವು ಈ ಸಲದ ಬಜೆಟಿನಲ್ಲಿ ಐದು ರೂಪಾಯಿಗೆ ತಿಂಡಿ ಮತ್ತು ಹತ್ತು ರೂ ಗೆ ಊಟ ನೀಡುವಂತಹ ವ್ಯವಸ್ಥೆಯನ್ನು ಘೋಷಿಸಿರುವುದು ಜೊತೆಗೆ ಉಚಿತವಾಗಿ ಕೊಡುವ ಅಕ್ಕಿಯನ್ನು ಏಳು ಕೇಜಿಗೆ ಹೆಚ್ಚಿಸಿರುವುದು ಸ್ವಾಗತಾಹ ್ವಾದುದು. ಬೆಂಗಳೂರಂತಹ ಮಹಾನಗರಕ್ಕೆ ಪ್ರತಿನಿತ್ಯ ಸಾವಿರಾರು ಜನರು ರಾಜ್ಯದ ವಿವಿಧ ಭಾಗಗಳಿಂದ ಕೆಲಸವನ್ನು ಹುಡುಕಿಕೊಂಡು ಹೋಗುತ್ತಾರೆ. ಅದರಲ್ಲಿಯೂ ವಿಶೇಷವಾಗಿ ರಾಜಧಾನಿಯ ಸುತ್ತಮುತ್ತಲಿನ ಜನರು ಬೆಳಗಿನ ಜಾವವೇ ಎದ್ದು ರೈಲು ಹಿಡಿದುಕೊಂಡು ಹೋಗುವರು. ಬೆಳಗಿನ ಸಮಯದಲ್ಲಿ ತಿಂಡಿ ಮತ್ತು ಊಟದ ವ್ಯವಸ್ಥೆ ಸಿದ್ದಮಾಡಿಕೊಂಡಿರುವುದಿಲ್ಲ. ಹೀಗೆ ಕೆಲಸಕ್ಕಾಗಿ ಹೋಗುವ ಬಹುತೇಕ ಜನರು ಆ ದಿನದ ಊಟಕ್ಕಾಗಿ ಸಾಕಷ್ಟು ಪರದಾಡುವ ಪರಿಸ್ಥಿತಿಯನ್ನು ಸ್ವತಃ ಅನುಭವಿಸಿದ್ದೇನೆ. ಕಾರಣವೇನಂದರೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದ ಸಂದರ್ಭದಲ್ಲಿ ಊರಿನಿಂದ ತೆಗೆದುಕೊಂಡ ಬಂದ ಐನೂರು-ಸಾವಿರ ರೂಪಾಯಿಗಳು ಊಟಕ್ಕಾಗಿಯೇ ಒಂದೆರಡು ದಿನಕ್ಕೆ ಖಾಲಿಯಾಗುತ್ತವೆ. ಬೆಂಗಳೂರಿನಂತಹ ಮಹಾನಗರದಲ್ಲಿ ಉಪಹಾರಕ್ಕೆ ಕನಿಷ್ಟ ಎಪ್ಪತ್ತರಿಂದ ನೂರು ರೂ ಬೇಕಾಗುತ್ತದೆ. ಎರಡು ಹೊತ್ತಿನ ಊಟ ಸೇರಿಸಿದರೆ ಕನಿಷ್ಟ ಮುನ್ನೂರಿನಿಂದ ನಾಲ್ಕುನೂರವರೆಗೆ ಬೇಕಾಗುತ್ತದೆ. ಕೈಯಲ್ಲಿ ಕೆಲಸವಿಲ್ಲದೇ, ಜೇಬಿನಲ್ಲಿ ಹಣವಿಲ್ಲದೇ ಸಾವಿರಾರು ಜನರು ಹಸಿವನ್ನು ನೀಗಿಸಲಾಗದೇ ನೀರನ್ನು ಕುಡಿದು ಮೆಜಸ್ಟಿಕ್ನಲ್ಲೋ, ರೈಲ್ವೇ ಸ್ಟೇಶನ್ನಲ್ಲೋ , ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಮಲಗಿರುವುದನ್ನು ಕಣ್ಣಾರೆ ನೋಡಿರುವೆ. ಇದರ ಜೊತೆಗೆ ಸಾವಿರಾರು ಬಿಕ್ಷುಕರು ಅನ್ನಕ್ಕಾಗಿ ಪರದಾಡುವುದನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಇಂತಹ ಜನಪರ ಯೋಜನೆಯನ್ನು ಜಾರಿಗೊಳಿಸಿರುವುದರಿಂದ ಕೆಲಸ ಅರಿಸಿಕೊಂಡು ರಾಜ್ಯದ ವಿವಿಧ ಭಾಗಗಳಿಂದ ತೆರಳುವ ಜನರಿಗೆ ಸಾಕಷ್ಟು ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ.
ಸರಕಾರದ ನಿಜವಾದ ಕಳಕಳಿಯನ್ನು ಅರಿತುಕೊಂಡು ಯೋಜನೆ ಜಾರಿಯಾಗಿ ಯಾವುದೇ ರೀತಿಯಲ್ಲಿ ಅವ್ಯವಹಾರಕ್ಕೆ, ಗುಣಮಟ್ಟದಲ್ಲಿ ವ್ಯತ್ಯಯವಾಗದಂತೆ ಯೋಜನೆ ಜಾರಿಯಾಗಿ ಎಲ್ಲರನ್ನು ತಲುಪುವಂತೆ ಆಗಬೇಕು. ಆಗ ಮಾತ್ರ ಸರಕಾರದ ನೈಜ ಕಳಕಳಿ ಸಾರ್ಥಕವಾಗುವುದರಲ್ಲಿ ಸಂದೇಹವಿಲ್ಲ.
ಉಚಿತವಾಗಿ ಅಕ್ಕಿ ಕೊಟ್ಟಾಗ ಜನರು ಸೋಮಾರಿಗಳಾಗುತ್ತಾರೆ ಎಂದು ಬಹಿರಂಗವಾಗಿ ಟೀಕೆ ಮಾಡಿದವರು ಯಾರೂ ಸಹಿತ ತಮ್ಮ ಪಾಲಿನ ರೇಶನ್ ತೆಗೆದುಕೊಳ್ಳುವುದನ್ನು ಬಿಟ್ಟಿಲ್ಲ, ಬಿಡುವುದೂ ಇಲ್ಲ. ಆದರೆ ಟೀಕೆ ಮಾತ್ರ ಬಿಟ್ಟಿಲ್ಲ. ಇದರ ಹಾಗೆ ತಿಂಡಿ ಮತ್ತು ಊಟ ಕೊಡುವುದನ್ನು ಟೀಕೆ ಮಾಡುವುದು ಉಚಿತವಲ್ಲ.
ಒಟ್ಟಿನಲ್ಲಿ ಯೋಜನೆ ಜಾರಿಯಾಗಬೇಕು. ಜೊತೆಗೆ ಗುಣಮಟ್ಟವನ್ನು ಕಾಯ್ದುಕೊಂಡು ಹೋಗುವಂತಾಗಬೇಕು

  • ಮಲ್ಲಪ್ಪ ಕರೇಣ್ಣನವರ 
    ರಾಣೇಬೆನ್ನೂರ