ಕೊನೆಗೂ ಕಿಲ್ಲೆ ಮೈದಾನಕ್ಕೆ ಬಂತು ವಾರದ ಸಂತೆ

ಪ್ರತೀ ಭಾನುವಾರ  ನಡೆಸಲು ನಗರಸಭೆ ತೀರ್ಮಾನ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ಏಸಿ ನಿರ್ದೇಶನದ ಬಳಿಕ ಎಪಿಎಂಸಿಯ ಸಂತೆ ಮಾರುಕಟ್ಟೆಗೆ ಸ್ಥಳಾಂತರವಾಗಿದ್ದ ಸಂತೆಯನ್ನು ಮತ್ತೆ ಕಿಲ್ಲೆ ಮೈದಾನದಲ್ಲೇ ನಡೆಸಲು ಪುತ್ತೂರು ನಗರಸಭಾ ಆಡಳಿತ ತೀರ್ಮಾನಿಸಿದೆ.

ಸಂತೆ ಸ್ಥಳಾಂತರದ ಬಳಿಕ ವಿವಾದ ಹುಟ್ಟಿಕೊಂಡಿತ್ತು. ಎಪಿಎಂಸಿಯಲ್ಲಿ ಸಂತೆ ವ್ಯಾಪಾರ ನಡೆಸುವುದಕ್ಕೆ ಕೆಲವು ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಯನ್ನು ನಡೆಸಿ ಯಾವುದೇ ಕಾರಣಕ್ಕೂ ಸಂತೆಯನ್ನು ಸ್ಥಳಾಂತರ ಮಾಡದಂತೆ ನಗರಸಭಾ ಅಧ್ಯಕ್ಷರಿಗೆ ಮನವಿ ಮಾಡಿತ್ತು. ಆದರೆ ಏಸಿ ಆದೇಶ ಮಾಡಿರುವ ಕಾರಣ ನಗರಸಭಾ ಆಡಳಿತಕ್ಕೆ ಏನೂ ಮಾಡಲಾಗದೆ ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಯಾವುದೇ ಕಾರಣಕ್ಕೂ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಸಲು ಅವಕಾಶ ನೀಡುವುದೇ ಇಲ್ಲ ಎಂದು ಎ ಸಿ ಅವರು ಖಡಕ್ ಎಚ್ಚರಿಕೆಯನ್ನೂ ನೀಡಿದ್ದರು. ಈ ಕಾರಣಕ್ಕೆ ಎಪಿಎಂಸಿ ಯಲ್ಲಿ ನಡೆಯುವ ಸಂತೆಯನ್ನು ಖಾಸಗಿ ಬಸ್ಸು ನಿಲ್ದಾಣದ ಬಳಿ ಇರುವ ಖಾಸಗಿ ವ್ಯಕ್ತಿಯೋರ್ವ ಜಾಗದಲ್ಲಿ ನಡೆಸುವ ಬಗ್ಗೆ ನಗರಸಭೆ ಚಿಂತನೆÀ ನಡೆಸಿತ್ತು. ಆದರೆ ಅದು ಕೊನೇ ಗಳಿಗೆಯಲ್ಲಿ ವಿಫಲವಾಗಿತ್ತು.

ಎಪಿಎಂಸಿಯಲ್ಲಿ ಸಂತೆ ನಡೆಸಿದರೆ ಅದರಿಂದ ಕೆಲವು ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಅಲ್ಲಿಗೆ ತೆರಳಲು ಸಂಕಷ್ಟವಾಗುತ್ತದೆ, ಇದರಿಂದ ಸಂತೆಯನ್ನು ಕಿಲ್ಲೆ ಮೈದಾನದಲ್ಲೇ ನಡೆಸಬೇಕು ಎಂದು ಆಗ್ರಹಿಸಿ ನಗರಸಭಾ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಮಾಡಲಾಗಿತ್ತು.

ಈ ನಡುವೆ ಅಂದಿನ ಎ ಸಿ ಅವರನ್ನು ವರ್ಗಾವಣೆ ಮಾಡಿ ಈಗ ನೂತನ ಎ ಸಿ ಅವರ ಆಗಮನವೂ ಆಗಿದೆ. ಈ ನಡುವೆ ನಗರಸಭೆ ವಾರದಲ್ಲಿ ಒಂದು ದಿನ ಪ್ರತೀ ಭಾನುವಾರ ಕಿಲ್ಲೆ ಮೈದಾನದಲ್ಲಿ ಸಂತೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವುದಾಗಿ ತಿರ್ಮಾನಿಸಿದೆ. ಸೋಮವಾರದಂದು ಸಂತೆ ಮರುಕಟ್ಟೆಯಲ್ಲೇ ಸಂತೆ ನಡೆಯಲಿದೆ. ಭಾನುವಾರ ಸಂತೆ ನಡೆದರೆ ಇದರಿಂದ ಜನಜಂಗುಳಿಯನ್ನು ತಪ್ಪಿಸಲು ಸಾಧ್ಯವಾಗುತ್ತದೆ ಮತ್ತು ಯಾವುದೇ ಟ್ರಾಫಿಕ್ ಸಮಸ್ಯೆ ಉಂಟಾಗುವುದಿಲ್ಲ.

ಅಂತೂ ಕಳೆದ ಎರಡು ತಿಂಗಳಿಂದ ಅಲ್ಲೋಲಕಲ್ಲೋಲವಾಗಿದ್ದ ಪುತ್ತೂರಿನ ಸಂತೆ ಸಮಸ್ಯೆಯನ್ನು ಕೊನೆಗೂ ಪರಿಹರಿಸಿದ ನಗರಸಭಾ ಆಡಳಿತಕ್ಕೆ ಜನ ಅಬಿನಂದನೆ ಸಲ್ಲಿಸಿದ್ದಾರೆ.