ರಾತೋರಾತ್ರಿ ಮದುವೆ ಮನೆ ಅಡುಗೆ ಸಾಮಾನು ನಾಪತ್ತೆ !

ಸಾಂದರ್ಭಿಕ ಚಿತ್ರ

ಕ್ಯಾಟರಿಂಗ್ ಮಾಲಕನ ವಿರುದ್ಧ ದೂರು

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮದುವೆ ಸಮಾರಂಭಕ್ಕೆ ನೀಡಿದ್ದ ಅಡುಗೆ ಸಾಮಗ್ರಿಗಳನ್ನು ರಾತೋರಾತ್ರಿ ಕಳವುಗೈದ ಆರೋಪಿಗಳಾದ ಕ್ಯಾಟರಿಂಗ್ ಮಾಲಕ ಕಮ್ ಅಡುಗೆಭಟ್ಟ ಹಾಗೂ ಆತನ ಸಹಚರ 16 ಮಂದಿ ಅಡುಗೆಭಟ್ಟರ ವಿರುದ್ಧ ಹುಡುಗಿ ಮನೆಯವರು ಮಂಗಳವಾರ ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.

ಮಣಿಪಾಲ ಠಾಣೆಯ ಇನಸ್ಪೆಕ್ಟರ್ ಸುದರ್ಶನ್ ದೂರನ್ನು ದಾಖಲಿಸದೇ, ಕ್ಯಾಟರಿಂಗ್ ಮಾಲಕ ಕಮ್ ಅಡುಗೆಭಟ್ಟನ ಪ್ರಭಾವಕ್ಕೆ ಮಣಿದಿದ್ದು, ಸುದರ್ಶನ್ ವಿರುದ್ಧ ಈಗಾಗಲೇ ಮೌಖಿಕವಾಗಿ ಉಡುಪಿ ಎಸ್ಪಿ

ಸಂಜೀವ ಪಾಟೀಲರಿಗೆ ತಿಳಿಸಿದ್ದು, ಬುಧವಾರ ದೂರು ನೀಡುತ್ತೇವೆ ಎಂದು ಹುಡುಗಿ ಮನೆಯ ಸಂಬಂಧಿ ಉಡುಪಿ ನಗರದ ಹೊರವಲಯದ ಗರಡಿಮಜಲಿನ ಪ್ರದೀಪ್ ಆಚಾರ್ಯ ತಿಳಿಸಿದ್ದಾರೆ.

2017, ಸೆಪ್ಟಂಬರ್ 3ರಂದು ಮಣಿಪಾಲ-ದೊಡ್ಡಣ್ಣಗುಡ್ಡೆ ನಿವಾಸಿಗಳಾದ ವಿಶ್ವಕರ್ಮ ಸಮಾಜಕ್ಕೆ ಸೇರಿದ ಹುಡುಗಿ-ಹುಡುಗಗೆ ಮಣಿಪಾಲದ ಆರ್ ಎಸ್ ಬಿ ಸಭಾಭವನದಲ್ಲಿ ಮದುವೆ ನಡೆದಿತ್ತು. ಮದುವೆ ಸಮಾರಂಭದ ಅಡುಗೆ ಉಸ್ತುವಾರಿಯನ್ನು ಉಡುಪಿ ನಗರದ ಹೊರವಲಯದ ಕೊಡವೂರಿನ ಕಲ್ಕೂರ ಕ್ಯಾಟರಿಂಗ್ ಮಾಲಕ ಕಮ್ ಅಡುಗೆಭಟ್ಟ ಶ್ರೀಕಾಂತ್ ಕಲ್ಕೂರಿಗೆ ನೀಡಲಾಗಿತ್ತು. ಸುಮಾರು 2 ಸಾವಿರ ಮಂದಿಯ ಊಟಕ್ಕಾಗಿ ಅಡುಗೆ ಸಾಮಗ್ರಿಗಳನ್ನು ಹುಡುಗಿ ಕಡೆಯವರು ನೀಡಿದ್ದರು. ಅಡುಗೆ ತಯಾರಿಗೆ ಸುಮಾರು 27 ಮಂದಿ ಅಡುಗೆ ಭಟ್ಟರು ಬರುತ್ತಾರೆ ಎಂದು ತಿಳಿಸಲಾಗಿದ್ದರೂ, ಕೊನೆಗೆ 16 ಮಂದಿ ಬಂದಿದ್ದರು.

ಮದುವೆ ಸಮಾರಂಭದಲ್ಲಿ ಕೇವಲ 800 ಮಂದಿಗಷ್ಟೇ ಊಟ ಬಡಿಸುವಾಗ ಊಟ ಕೊರತೆ ಕಂಡು ಬಂದಿದೆ. ಇದರಿಂದಾಗಿ ಸುಮಾರು 1 ಸಾವಿರಕ್ಕೂ ಮಿಕ್ಕಿ ಊಟ ಇಲ್ಲದೇ ಬರಿಹೊಟ್ಟೆಯಲ್ಲಿ ವಾಪಾಸಗಿದ್ದಾರೆ. ಮದುವೆಯ ಊಟದ ಉಸ್ತುವಾರಿ ನೀಡಿದ್ದ ಹುಡುಗಿ ಮನೆಯವರು ಆರ್ ಎಸ್ ಬಿ ಸಭಾಭವನದ ಸೀಸಿಟೀವಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಫುಟೇಜಿನಲ್ಲಿ ಅಡುಗೆ ವಹಿಸಿಕೊಂಡ ಆರೋಪಿ ಕೊಡವೂರಿನ ಕಲ್ಕೂರ ಕ್ಯಾಟರಿಂಗ್ ಮಾಲಕ ಕಮ್ ಅಡುಗೆ ಭಟ್ಟ ಹಾಗೂ ಆತನೊಂದಿಗಿದ್ದ 16 ಮಂದಿ ಅಡುಗೆ ಭಟ್ಟರು ಮದುವೆ ಮುನ್ನ ದಿನ ಆರ್ ಎಸ್ ಬಿ ಸಭಾಭವನದಲ್ಲಿ ರಾತೋರಾತ್ರಿ ಅಡುಗೆ ಸಾಮಗ್ರಿಗಳನ್ನು ವ್ಯಾಗನರ್ ಕಾರಿನಲ್ಲಿ ಕಳವುಗೈದಿರುವುದು ಪತ್ತೆಯಾಗಿದೆ. ಈ ಬಗ್ಗೆ ಹುಡುಗಿ ಮನೆಯ ಸಂಬಂಧಿ ಪ್ರದೀಪ್ ಆಚಾರ್ಯ ಆರೋಪಿ ಕ್ಯಾಟರಿಂಗ್ ಮಾಲಕ ಕಮ್ ಅಡುಗೆ ಭಟ್ಟ ಶ್ರೀಕಾಂತ್ ಕಲ್ಕೂರ ಹಾಗೂ ಆತನೊಂದಿಗೆ ಕೆಲಸ ಮಾಡುವ 16 ಮಂದಿ ಆರೋಪಿ ಅಡುಗೆ ಭಟ್ಟರ ವಿರುದ್ಧ ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆಗಾಗಿ ವರದಿಗಾರ ಕ್ಯಾಟರಿಂಗ್ ಮಾಲಕನನ್ನು ಸಂಪರ್ಕಿಸಲು ಯತ್ನಿಸಿದ್ದು ಅವರು ದೂರವಾಣಿಗೆ ಸಿಗಲಿಲ್ಲ.