ವೀರ ವನಿತೆಯರನ್ನು ಅವಮಾನಿಸಿದ ವೆಬ್ ಸೈಟ್ ವಿರುದ್ಧ ಕೇಸು

ಬೆಂಗಳೂರು : ಕರ್ನಾಟಕ ಇತಿಹಾಸದ ವೀರ ವನಿತೆಯರಾದ ಕಿತ್ತೂರ ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಹಾಗೂ ಒನಕೆ ಓಬವ್ವ ಅವರ ಬಗ್ಗೆ ಅವಹೇಳನಕಾರಿ ಲೇಖನವೊಂದನ್ನು ಫೇಸ್ಬುಕ್ಕಿನಲ್ಲಿ ಪೋಸ್ಟ್ ಮಾಡಿದ ಪೋಸ್ಟ್ ಕಾರ್ಡ್ ನ್ಯೂಸ್ ಅಡ್ಮಿನ್ ವಿರುದ್ಧ ಎಫೈಆರ್ ದಾಖಲಾಗಿದೆ. ಈ ವೀರ ವನಿತೆಯರನ್ನು ಪೋಸ್ಟ್ ಕಾರ್ಡ್ ಕನ್ನಡ.ಕಾಂ ಎಂಬ ನಕಲಿ ಸುದ್ದಿ ತಾಣದಲ್ಲಿ ಪ್ರಕಟಿಸಲಾದ ಲೇಖನವೊಂದರಲ್ಲಿ ಅವಮಾನಿಸಲಾಗಿತ್ತು.

ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಿರುವಂತೆ ಪೋಸ್ಟ್ ಕಾರ್ಡ್ ಕನ್ನಡ.ಕಾಂ ಲೇಖನವನ್ನು “ಐ ಸಪೋರ್ಟ್ ಪ್ರತಾಪ್ ಸಿಂಹ” ಹಾಗೂ “ಪ್ರತಾಪ್ ಸಿಂಹ ಫಾರ್ ಸೀಎಂ” ಫೇಸ್ಬುಕ್ ಪುಟಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಎರಡು ಫೇಸ್ಬುಕ್ ಪುಟಗಳನ್ನು ಪೋಸ್ಟ್ ಕಾರ್ಡ್ ನ್ಯೂಸ್ ಅಡ್ಮಿನ್ ನಿರ್ವಹಿಸುತ್ತಿದ್ದಾರೆಂದು ಆಲ್ಟ್ ನ್ಯೂಸ್ ವರದಿ ತಿಳಿಸಿದೆ. ಮೂಲ ಲೇಖನವನ್ನು ಪೋಸ್ಟ್ ಕಾರ್ಡ್ ನ್ಯೂಸ್ ವೆಬ್ ತಾಣದಲ್ಲಿ ಪ್ರಕಟಿಸಲಾಗಿತ್ತಾದರೂ ಅದನ್ನು ನಂತರ ಡಿಲೀಟ್ ಮಾಡಲಾಗಿತ್ತು.

`ಪದ್ಮಾವತಿ’ ವಿವಾದದ ಬಗ್ಗೆ ಕನ್ನಡ ಚಿತ್ರರಂಗ ಯಾವುದೇ ನಿಲುವು ತಳೆಯದೇ ಇರುವುದನ್ನು ಖಂಡಿಸಿರುವ ಲೇಖನ ಅದೇ ಸಮಯ ಕರ್ನಾಟಕದ ವೀರ ವನಿತೆಯರ ಬಗ್ಗೆ ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಿರ್ದಿಷ್ಟ ಫೇಸ್ಬುಕ್ ಪುಟಗಳಿಗೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದರೂ ನವೆಂಬರ್ 13ರಂದು ಅವರು ಟ್ವೀಟ್ ಒಂದರಲ್ಲಿ ಪೋಸ್ಟ್ ಕಾರ್ಡ್ ನ್ಯೂಸ್ ತಂಡದ ವಿವೇಕ್ ಶೆಟ್ಟಿ ಹಾಗೂ ಮಹೇಶ್ ವಿಕ್ರಮ್ ಹೆಗ್ಡೆ ಜತೆಗಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿ ಅವರನ್ನು ತನ್ನ `ಬೆಸ್ಟ್ ಬಡ್ಡೀಸ್’ (ಆತ್ಮೀಯ ಸ್ನೇಹಿತರು) ಎಂದು ಬಣ್ಣಿಸಿದ್ದರೆಂದು ಆಲ್ಟ್ ನ್ಯೂಸ್ ವರದಿ ತಿಳಿಸಿದೆ.