ರೋಗ ನಿರೋಧಕತೆ ಲೋಪ ಮಕ್ಕಳ ಕ್ಷಯ ರೋಗಕ್ಕೆ ಕಾರಣ : ಅಧ್ಯಯನದಿಂದ ಪತ್ತೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದೇಹದಲ್ಲಿನ ರೋಗನಿರೋಧಕತೆ ಕೊರತೆಯಿಂದಾಗಿ ಮಕ್ಕಳಲ್ಲಿ ಕ್ಷಯರೋಗದ ಸೋಂಕು ಬಾಧಿಸುವ ಸಾಧ್ಯತೆಗಳಿವೆ ಎಂದು ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯರು ಕಂಡು ಹಿಡಿದಿದ್ದಾರೆ.

ಕೆಎಂಸಿ ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ರೋಗಶಾಸ್ತ್ರ ವಿಭಾಗದ ಡಾ ಹರ್ಷ ಪ್ರಸಾದ್, ಮುಂಬೈನ ರಾಷ್ಟ್ರೀಯ ರೋಗ ನಿರೋಧಕ ರಕ್ತಶಾಸ್ತ್ರ ಸಂಸ್ಥೆ ಮತ್ತು ಪ್ಯಾರಿಸ್‍ನ ಇಮಾಜಿನ್ ಇನಸ್ಟಿಟ್ಯೂಟಿನಲ್ಲಿ ಸೋಂಕು ರೋಗದಲ್ಲಿ ಮಾನವ ವಂಶವಾಹಿ ಸಂಬಂಧಿ ತಂಡಗಳೊಂದಿಗಿನ ಸಹಭಾಗಿತ್ವದ ಅಧ್ಯಯನದ ಮೂಲಕ ವಂಶವಾಹಿ ಲೋಪದಿಂದಲೂ ಮಕ್ಕಳಲ್ಲಿ ಕ್ಷಯ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಂಡ ನಡೆಸಿದ ಅಧ್ಯಯನದಿಂದ ಕಂಡು ಹಿಡಿದಿದ್ದಾರೆ.

ಇತ್ತೀಚೆಗಷ್ಟೇ ಕೆಎಂಸಿ ಆಸ್ಪತ್ರೆಗೆ ದಾಖಲಾದ ಎರಡು ಮಕ್ಕಳ ಅಪರೂಪದ ಪ್ರಕರಣಗಳಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಎರಡು ಮತ್ತು ಆರು ವರ್ಷದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕ್ಷಯರೋಗದಿಂದ ಬಳಲುತ್ತಿದ್ದ ಇವರ ಚಿಕಿತ್ಸೆ ಮಾಡಿದ ಸಂದರ್ಭದಲ್ಲಿ ಅನುವಂಶಿಕ ಧಾತುಗಳ ಕೊರತೆಯಿಂದಾಗಿ ಈ ರೋಗ ಬಾಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಎರಡು ವರ್ಷದ ಮಗು ಶ್ರೇಯಾ (ಹೆಸರು ಬದಲಿಸಲಾಗಿದೆ) ಅತ್ಯಂತ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ತೀವ್ರ ಜ್ವರ ಮತ್ತು ಗ್ರಂಥಿ ಬಾವು ರೋಗದಿಂದ ಮಗು ಬಳಲುತ್ತಿತ್ತು. ಇನ್ನೊಂದು ಆರು ವರ್ಷದ ಹೆಣ್ಣು ಮಗು ಮೆದುಳಿನ ಮತ್ತು ಕಿಬ್ಬೊಟ್ಟೆಯ ಸೋಂಕು ರೋಗದಿಂದ ಬಳಲುತ್ತಿತ್ತು. ಆಕೆ ದೇಹದ ಬಹುಭಾಗ ಸೋಂಕು ರೋಗಕ್ಕೆ ಒಳಗಾಗಿತ್ತು. ಮಗುವಿನಲ್ಲಿ ಬಹುಲಿಂಪ್ ಗ್ರಂಥಿಗಳ ಊತ ಕಂಡು ಬಂದಿತ್ತು. ಸೈನಸ್ ಹರಿವಿನಿಂದ ಜ್ವರವೂ ಬಾಧಿಸುತ್ತಿತ್ತು. ಆಕೆಗೆ ಆರು ತಿಂಗಳ ಕಾಲ ಕ್ಷಯರೋಗ ನಿರೋಧಕ ಔಷಧಿ ನೀಡಲಾಗಿತ್ತು. ಬಳಿಕ ಈಕೆಯಲ್ಲಿ ಮೈಕ್ರೋಬ್ಯಾಕ್ಟೀರಿಯಲ್ ರೋಗಗಳಿಗೆ ತುತ್ತಾಗಬಹುದಾಗಿದ್ದ ಮೆಂಡೆಲಿಯನ್ ಸೆಸೆಪ್ಟೆಬಿಲಿಟಿ ಇದೆ ಎಂದು ಗುರುತಿಸಲಾಗಿತ್ತು.