ಬಾಲಿವುಡ್ ಹೋರಾಡದಿದ್ದರೇನು, ನಾವು ಹೋರಾಡಬೇಕಿದೆ

ಜಾಲಿ ಎಲ್ ಎಲ್ ಬಿ 2

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಸೆಟೆದು ನಿಲ್ಲಬೇಕಿದೆ.

ಹಿಂದಿ ಚಿತ್ರವೊಂದರಲ್ಲಿ ಅಕ್ಷೇಪಣೀಯ ದೃಶ್ಯಗಳಿರುವುದನ್ನು ಮತ್ತೊಮ್ಮೆ ಹಲವು ಸಂಘಟನೆಗಳ ಒತ್ತಡಕ್ಕೆ ಮಣಿದು ಕತ್ತರಿಸಲಾಗಿದೆ. ಹಿಂದಿ ಚಿತ್ರ ನಿರ್ಮಾಪಕರು ಮತ್ತೊಮ್ಮೆ ಒತ್ತಡದ ರಾಜಕಾರಣಕ್ಕೆ ಶರಣಾಗಿದ್ದಾರೆ.  ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ವಿಡಂಬನೆ ಮಾಡುವ ಕಥಾವಸ್ತು ಹೊಂದಿರುವ `ಜಾಲಿ ಎಲ್‍ಎಲ್‍ಬಿ2′ ಚಿತ್ರದ ನಿರ್ಮಾಪಕರ ಮುಂಬಯಿ ಹೈಕೋರ್ಟ್ ಆದೇಶದ ಮೇರೆಗೆ  ನಾಲ್ಕು ದೃಶ್ಯಗಳನ್ನು ತೆಗೆದುಹಾಕಿದ್ದಾರೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದ ನಿರ್ಮಾಪಕರು ನಂತರ ಫೆಬ್ರವರಿ 10ರಂದು ಬಿಡುಗಡೆ ಮಾಡುವ ಉದ್ದೇಶದಿಂದ ನಾಲ್ಕು ದೃಶ್ಯಗಳನ್ನು ತೆಗೆದುಹಾಕಿದ್ದಾರೆ. ತಮ್ಮ ಮೇಲ್ಮನವಿಯನ್ನೂ ಹಿಂಪಡೆದಿದ್ದಾರೆ.

ಕೇಂದ್ರ ಸೆನ್ಸಾರ್ ಮಂಡಲಿ ಈ ಚಿತ್ರದಲ್ಲಿ ಯಾವುದೇ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ ವಕೀಲರೊಬ್ಬರು ಈ ಚಿತ್ರದಲ್ಲಿ ವಕೀಲರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಚಿತ್ರದ ಹೆಸರಿನಲ್ಲಿ ಎಲ್ ಎಲ್ ಬಿ ಪದವನ್ನು ತೆಗೆದುಹಾಕುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ್ದ ವಕೀಲರು ಚಿತ್ರವನ್ನು ಪೂರ್ತಿಯಾಗಿ ನೋಡಿರಲಿಲ್ಲವಾದ್ದರಿಂದ ಮುಂಬಯಿ ಹೈಕೋರ್ಟ್ ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿ ಚಿತ್ರದ ಬಗ್ಗೆ ವರದಿ ಸಲ್ಲಿಸಲು ಕೋರಿತ್ತು. ಆದರೆ ಈ ಸಮಿತಿಯ ಸದಸ್ಯರು ಚಲನಚಿತ್ರ ತಜ್ಞರೇ ಅಲ್ಲವೇ ಎನ್ನುವುದು ಅನುಮಾನಾಸ್ಪದವಾಗಿದೆ. ಸಮಿತಿಯ ಸದಸ್ಯರು ಚಿತ್ರದಲ್ಲಿ ವಕೀಲರನ್ನು ಅವಹೇಳನಕಾರಿಯಾಗಿ ಚಿತ್ರಿಸಿರುವುದನ್ನು ದೃಢಪಡಿಸಿದ್ದಾರೆ.

ಹೈಕೋರ್ಟ್ ಆದೇಶದ ನಂತರ ತಮಗೆ ಅನ್ಯ ಮಾರ್ಗ ಇರಲಿಲ್ಲ ಎಂದು ಚಿತ್ರ ನಿರ್ಮಾಪಕರು ಸಮಜಾಯಿಷಿ ನೀಡಿದ್ದಾರೆ.  ತಾವು ಚಿತ್ರದಲ್ಲಿ ಹೂಡಿರುವ ಬಂಡವಾಳವನ್ನು ಲಾಭದೊಂದಿಗೆ ಮರಳಿ ಪಡೆಯಲು ನಿಗದಿತ ದಿನಾಂಕದಂದು ಬಿಡುಗಡೆ ಮಾಡುವುದು ಅತ್ಯಗತ್ಯ ಎಂದು ನಿರ್ಮಾಪಕರು ಹೇಳಿದ್ದಾರೆ. ಆದರೆ ಬಾಲಿವುಡ್ ಚಿತ್ರರಂಗ ಈ ರೀತಿಯ ಒತ್ತಡ ಮತ್ತು ಬೆದರಿಕೆಗೆ ಮಣಿಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಈ ದೌರ್ಬಲ್ಯವನ್ನು ಪಟ್ಟಭದ್ರ ಹಿತಾಸಕ್ತಿಗಳು, ಪ್ರಚಾರದ ಗೀಳು ಇರುವ ಸಂಘಟನೆಗಳು ಬಳಸಿಕೊಳ್ಳುತ್ತಿವೆ.

ಈ ಬೆಳವಣಿಗೆಗೆ ಇತ್ತೀಚಿನ ಎರಡು ಉದಾಹರಣೆಗಳನ್ನು ಉಲ್ಲೇಖಿಸಬಹುದು. ಸಂಜಯ್ ಲೀಲಾ ಬನ್ಸಾಲಿ ತಮ್ಮ ಮೇಲೆ ಹಲ್ಲೆ ನಡೆಸಿದ ಪುಂಡರ ಗುಂಪಿಗೆ ಹೆದರಿ ಅಕ್ರಮಣಕಾರರೊಂದಿಗೆ ರಾಜಿಯಾಗಿದ್ದರು. ಚಿತ್ರದ ಹೀರೊಯಿನ್ ದೀಪಿಕಾ ಪಡುಕೋಣೆ ಹಲ್ಲೆಕೋರರನ್ನು ಖಂಡಿಸುವ ಬದಲು ತಮ್ಮ ಚಿತ್ರವನ್ನು ಸಮರ್ಥಿಸಲಷ್ಟೇ ಪ್ರಯತ್ನಿಸಿದ್ದರು.

ಇದಕ್ಕೂ ಮುನ್ನ ಕರಣ್ ಜೋಹರ್ ತಮ್ಮ ಚಿತ್ರವೊಂದರಲ್ಲಿ ಪಾಕಿಸ್ತಾನದ ನಟರಿಗೆ ಅವಕಾಶ ನೀಡುವ ವಿಚಾರದಲ್ಲಿ ತೀವ್ರ ವಿರೋಧ ಎದುರಿಸಬೇಕಾಗಿತ್ತು. ಶಿವಸೇನೆಯ ರಾಜ್ ಥಾಕ್ರೆ ಮತ್ತು ಸಂಗಡಿಗರ ಬೆದರಿಕೆಗೆ ಮಣಿದು ಕರಣ್ ಜೋಹರ್ ತಮ್ಮ ದೇಶಭಕ್ತಿಯನ್ನು ಪ್ರದರ್ಶಿಸಿದ್ದೂ ಅಲ್ಲದೆ ಸೇನಾ ಕಲ್ಯಾಣ ನಿಧಿಗೆ ಐದು ಕೋಟಿ ರೂ ದೇಣಿಗೆ ನೀಡುವ ಮೂಲಕ ಪ್ರಾಯಶ್ಚಿತ್ತ ಮಾಡಿಕೊಂಡಿದ್ದರು.

ಇಂದು ಚಿತ್ರ ನಿರ್ಮಾಪಕನೊಬ್ಬ ತನ್ನ ಕಲೆಗೆ ಬದ್ಧನಾಗಿದ್ದರೆ ಸರ್ಕಾರದಿಂದಾಗಲೀ ಸಂಸ್ಥೆಗಳಿಂದಾಗಲೀ ಯಾವುದೇ ಬೆಂಬಲ ನಿರೀಕ್ಷಿಸಲಾಗುವುದಿಲ್ಲ. `ಒರೇ ಒರು ಗ್ರಾಮತ್ತಿಲೆ’ ಚಿತ್ರದ ವಿವಾದದ ನಂತರ 1989ರಲ್ಲಿ ಸುಪ್ರೀಂ ಕೋರ್ಟ್ ಯಾವುದೇ ಒಬ್ಬ ವ್ಯಕ್ತಿ ಸೆನ್ಸಾರ್ ಮಂಡಲಿಯ ನಿರ್ಧಾರವನ್ನು ನಿರಾಕರಿಸಲಾಗುವುದಿಲ್ಲ ಎಂದು ಹೇಳಿದ್ದರೂ ಸಹ ಎಲ್ ಎಲ್ ಬಿ ಪ್ರಕರಣದಲ್ಲಿ ಹೈಕೋರ್ಟ್ ಅರ್ಜಿಯನ್ನು ಪುರಸ್ಕರಿಸಿರುವುದು ದುರಂತ. ಬಾಲಿವುಡ್ಡಿನಿಂದ ಐಕ್ಯತೆ ನಿರೀಕ್ಷಿಸಲಾಗುವುದಿಲ್ಲ. ಬಾಲಿವುಡ್ ನಿರ್ಮಾಪಕರು  ತಮ್ಮ ಸ್ವಂತಿಕೆ ಕಳೆದುಕೊಂಡಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಸೆಟೆದು ನಿಲ್ಲಬೇಕಿದೆ. ಇಂದು ಪುಸ್ತಕಗಳು, ಚಲನಚಿತ್ರಗಳು ಆಕ್ರಮಣಕ್ಕೊಳಗಾಗುತ್ತಿವೆ. ನಾಳೆ ಪತ್ರಿಕೊದ್ಯಮವೂ ಬಲಿಯಾಗಬಹುದು. ನಾವು ಜಾಗೃತರಾಗಬೇಕಿದೆ. ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ನಾಗರಿಕ ಸಮಾಜದ ನಾವು ಕೂಡಲೇ ಮುಂದಾಗಬೇಕಿದೆ. (ಕೃಪೆ – ದ ವೈರ್)