ಉತ್ತಮ ಆಡಳಿತ ಬೇಕಿದೆ : ಯಚೂರಿ

ನವದೆಹಲಿ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉತ್ತಮ ಆಡಳಿತ ದಿನಾಚರಣೆಯನ್ನು ಆಚರಿಸುವ ಮೂಲಕ ಏನನ್ನೂ ಸಾಧಿಸಲಾಗುವುದಿಲ್ಲ ಎಂದು ಹೇಳಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ, ನೋಟು ಅಮಾನ್ಯೀಕರಣದ ನಂತರದಲ್ಲಿ ದೇಶದ ಜನಸಾಮಾನ್ಯರನ್ನು ಸಂಕಷ್ಟಕ್ಕೀಡುಮಾಡುವುದೇ ಉತ್ತಮ ಆಡಳಿತವೇ ಎಂದು ಟಾಂಗ್ ನೀಡಿದ್ದಾರೆ.

ಅಮಾನ್ಯೀಕರಣದ ನಂತರ ಜನಸಾಮಾನ್ಯರ ಬವಣೆ ಹೇಳತೀರದಾಗಿದ್ದು ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಸಾಲುಗಟ್ಟಿ ನಿಲ್ಲುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ, ಆದರೆ ಪ್ರಧಾನಿ ನರೇಂದ್ರ ಮೋದಿಯ ಉದ್ದೇಶಿತ ಧ್ಯೇಯಗಳಾವುದೂ ಈಡೇರುವಂತೆ ಕಾಣುತ್ತಿಲ್ಲ ಎಂದು ಹೇಳಿರುವ ಯಚೂರಿ, ಇದನ್ನೇ ಉತ್ತಮ ಆಡಳಿತ ಎನ್ನುವುದಾದರೆ ಸರ್ಕಾರದ ಆಡಳಿತ ವೈಖರಿಯೇ ಪ್ರಶ್ನಾರ್ಹವಾಗುತ್ತದೆ ಎಂದು ಹೇಳಿದ್ದಾರೆ.

ಡಿಸೆಂಬರ್ 25ರ ಭಾನುವಾರ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಆಚರಣೆಯ ಸಂದರ್ಭವನ್ನು ಉತ್ತಮ ಆಡಳಿತ ದಿನ ಎಂದು ಆಚರಿಸಿದ ಮೋದಿ ಸರ್ಕಾರ ಆಡಳಿತ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನೇ ಮರೆತಿದೆ ಎಂದು ಯಚೂರಿ ಹೇಳಿದ್ದಾರೆ.  ಸರ್ಕಾರ ತನ್ನ ಅರಾಜಕತೆ ಸೃಷ್ಟಿಸುವ ನೀತಿಗಳನ್ನು ಬದಿಗಿಟ್ಟು ಮುಂಬರುವ ಹೊಸ ವರ್ಷದಲ್ಲಿ ದೇಶದ ಜನಸಾಮಾನ್ಯರ ಜೀವನವನ್ನು ಹಸನಾಗಿಸಲು ಯತ್ನಿಸಬೇಕು ಎಂದು ಯಚೂರಿ ಹೇಳಿದ್ದಾರೆ.

ಸರ್ಕಾರದ ಇತ್ತೀಚಿನ ನೀತಿಗಳು ಸಮಾಜದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದು ಸಾಮಾನ್ಯ ಜನತೆಯ ಬವಣೆ ಹೇಳತೀರದಾಗಿದೆ, ಈ ಸಮಸ್ಯೆಗಳು ಪರಿಹಾರವಾಗುವ ಯಾವುದೇ ಸಾಧ್ಯತೆಗಳು ಕಾಣುತ್ತಿಲ್ಲ ಎಂದು ಹೇಳಿರುವ ಸಿಪಿಎಂ ನಾಯಕ, ಇದು ಜನರ ಮುಂದಿರುವ ಸವಾಲು ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.