`ಕಮ್ಯುನಿಸ್ಟರಿಗೆ ಬಾರಿಸುವ ತಾಕತ್ತು ನಮಗಿದೆ’

ಕೇರಳ ರಾಜ್ಯ ಬಿಜೆಪಿ ಸಮಿತಿಯ ಸಭೆಯಲ್ಲಿ ಮಾತಾಡಿದ ನಳಿನ್

ಕೇರಳದಲ್ಲಿ ಗುಡುಗಿದ ದ ಕ ಸಂಸದ ನಳಿನ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮಂಗಳೂರು ಸಮೀಪದ ಕೊಣಾಜೆಯಲ್ಲಿ ಇತ್ತೀಚೆಗೆ ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯೊಂದರಲ್ಲಿ ತಮ್ಮ `ಬೆಂಕಿ’ ಹೇಳಿಕೆಯಿಂದ ಸಾಕಷ್ಟು ವಿವಾದಕ್ಕೀಡಾಗಿದ್ದ ದಕ್ಷಿಣ ಕನ್ನಡ ಸಂಸದ ನಳಿನಕುಮಾರ್ ಕಟೀಲ್ ಮತ್ತೊಮ್ಮೆ ತಾನು ಪ್ರಚೋದನಾತ್ಮಕ ಭಾಷಣಗಳನ್ನು ನೀಡುವುದರಲ್ಲಿ ನಿಸ್ಸೀಮ ಎಂದು ಸಾಬೀತುಪಡಿಸಿದ್ದಾರೆ.

ಮಂಗಳವಾರ ಕೊಟ್ಟಾಯಂನಲ್ಲಿ ನಡೆದ ಕೇರಳ ರಾಜ್ಯ ಬಿಜೆಪಿ ಸಮಿತಿಯ ಸಭೆಯೊಂದರಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಕನ್ನಡದಲ್ಲಿ ಮಾತನಾಡಿದ ಮಂಗಳೂರಿನ ಸಂಸದ, “ಕೇರಳದ ಸಿಪಿಐ(ಎಂ) ಪಕ್ಷವು ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ದಾಳಿ ನಡೆಸುವುದನ್ನು ಮುಂದುವರಿಸಿದ್ದೇ ಆದಲ್ಲಿ ಕರ್ನಾಟಕದಲ್ಲೂ ಕಮ್ಯುನಿಸ್ಟರನ್ನು ಹಿಡಿದು ಹೊಡೆಯುವ ತಾಕತ್ತು ಬಿಜೆಪಿಗಿದೆ” ಎಂದು ಗುಡುಗಿದ್ದಾರೆ.

ಕಟೀಲ್ ಮಾತುಗಳು ಸಭೆಯಲ್ಲಿ ಹಾಜರಿದ್ದವರ ಕರತಾಡನಕ್ಕೆ ಕಾರಣವಾದರೂ, ಅವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿ ಹೇಳುತ್ತಿದ್ದ ಕೇರಳ ಬಿಜೆಪಿ ನಾಯಕ ಕೆ ಸುರೇಂದ್ರನ್, ನಳಿನ್ ಹೇಳಿಕೆಯ ಕಾವನ್ನು ಇಳಿಸುವ ಪ್ರಯತ್ನ  ಮಾಡುವ ಸಲುವಾಗಿ “ನೀವು ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ದಾಳಿ ನಡೆಸಿದರೆ ಕರ್ನಾಟಕದಲ್ಲಿ ಸಿಪಿಐ(ಎಂ) ಕಾರ್ಯಕರ್ತರು ತಮ್ಮ ಜೀವಗಳನ್ನು ಉಳಿಸಲು ಓಡಬೇಕಾದೀತು” ಎಂದು ಹೇಳಿದರು.

“ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲಿನ ಹಲವು ದಾಳಿ ಪ್ರಕರಣಗಳೇ ರಾಜ್ಯದ ಪಿಣರಾಯಿ ವಿಜಯನ್ ನೇತೃತ್ವದ ಸರಕಾರದ ಏಕೈಕ ಸಾಧನೆ. ಇದೇ ರೀತಿಯಾಗಿ ಮುಂದುವರಿದರೆ ಕೇಂದ್ರ ಮಧ್ಯ ಪ್ರವೇಶಿಸಿ ಬಲಪ್ರಯೋಗದಿಂದ ಇಂತಹ ಘಟನೆಗಳನ್ನು ನಿಲ್ಲಿಸಬಹುದು” ಎಂದು ನಳಿನ್ ತಮ್ಮ ಭಾಷಣದಲ್ಲಿ ಹೇಳಿದರು.

ಪಿಣರಾಯಿ ಸರಕಾರವನ್ನು `ಜಂಗಲ್ ರಾಜ್’ ಹಾಗೂ `ತುಘ್ಲಕ್ ರಾಜ್’ ಎಂದೂ ಬಣ್ಣಿಸಿದ ನಳಿನ್, ಮೋದಿಯನ್ನು ಆಧುನಿಕ ತುಘ್ಲಕ್ ಎಂದು ಬಣ್ಣಿಸಿದ್ದ ಸಿಪಿಐ(ಎಂ) ನಾಯಕರನ್ನು ವ್ಯಂಗ್ಯವಾಡಿದರು.