`ನಾವು ಚರ್ಚೆಗೆ ಸಿದ್ಧ, ಆದರೆ ಪ್ರಧಾನಿಯೆಲ್ಲಿ ?’

“ನೋಟು ರದ್ದತಿಯ ವಿಚಾರವನ್ನು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಘೋಷಿಸಿದವರು ಪ್ರಧಾನ ಮಂತ್ರಿ. ಆದುದರಿಂದ ಅವರು ಸಂಸತ್ತಿನಲ್ಲಿ ಹಾಜರಿದ್ದು ಚರ್ಚೆಯನ್ನು ಆಲಿಸಬೇಕು. ಅವರು ಸದನಕ್ಕೆ ಬರಬೇಕು ಎಂಬ ನಮ್ಮ ಆಗ್ರಹದಲ್ಲಿ ತಪ್ಪೇನೂ ಇಲ್ಲ.”

ನೋಟು ಅಮಾನ್ಯೀಕರಣದ ವಿಚಾರದಲ್ಲಿ ಸಂಸತ್ತಿನ ಕಲಾಪ ಸದಸ್ಯರ ಗದ್ದಲದಲ್ಲಿ ಸತತ ನಾಲ್ಕನೇ ವಾರ ಬಾಧಿತವಾಗಿರುವಂತೆಯೇ ಪ್ರಧಾನಿ ಸಂಸತ್ತಿನ ಚರ್ಚೆಯಲ್ಲಿ ಭಾಗವಹಿಸಬೇಕೆಂದು ಆಗ್ರಹಿಸುತ್ತಿರುವ ವಿಪಕ್ಷಗಳ ಬೇಡಿಕೆಯಿನ್ನೂ ಈಡೇರಿಲ್ಲ.  ಹಿರಿಯ ಕಾಂಗ್ರೆಸಿಗ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್  ಈ ಬಗ್ಗೆ ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ.


  • ಕಳೆದ ಮೂರು ವಾರಗಳಿಂದ ಸಂಸತ್ತಿನ ಕಲಾಪಗಳು ಸರಿಯಾಗಿ ನಡೆಯುತ್ತಿಲ್ಲ. ಸರಕಾರ ನೋಟು ಅಮಾನ್ಯದ ವಿಚಾರದಲ್ಲಿ ಚರ್ಚೆಗೆ ಸಮ್ಮತ್ತಿಸಿದ್ದರೂ ಪ್ರಯೋಜನವಾಗಿಲ್ಲ. ಕಾರಣವೇನು ?

ನೋಟು ರದ್ದತಿಯ ವಿಚಾರವನ್ನು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಘೋಷಿಸಿದವರು ಪ್ರಧಾನ ಮಂತ್ರಿ. ಆದುದರಿಂದ ಅವರು ಸಂಸತ್ತಿನಲ್ಲಿ ಹಾಜರಿದ್ದು ಚರ್ಚೆಯನ್ನು ಆಲಿಸಬೇಕು. ಅವರು ಸದನಕ್ಕೆ ಬರಬೇಕು ಎಂಬ ನಮ್ಮ ಆಗ್ರಹದಲ್ಲಿ ತಪ್ಪೇನೂ ಇಲ್ಲ.  ನೋಟು ರದ್ದತಿ ನಿರ್ಧಾರವನ್ನು ಸರಿಯಾದ ನಿಟ್ಟಿನಲ್ಲಿ ಯೋಚಿಸದೆ ತೆಗೆದುಕೊಂಡಿರುವುದೇ ಸಮಸ್ಯೆಗೆ ಕಾರಣ.  ಇದೀಗ ಸರಕಾರಕ್ಕೆ ಉತ್ತರ ನೀಡಲು ಕಷ್ಟವಾಗುತ್ತಿದೆ.


  • ಸಂಸತ್ತು ಧರಣಿ ಮತ್ತು ಗಲಾಟೆ ನಡೆಸುವ ಸ್ಥಳವಲ್ಲ. ಅಲ್ಲಿ ಚರ್ಚೆ ಹಾಗೂ ಸಂವಾದಗಳಷ್ಟೇ ನಡೆಯಬೇಕು ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ. ನೀವೇನಂತೀರಿ ?

ಅವರ ಮಾತುಗಳನ್ನು  ನಾನು ಒಪ್ಪುತ್ತೇನೆ. ಆದರೆ ಸಂಸತ್ತಿನ ಕಲಾಪಗಳು ಬಾಧಿತವಾಗಲು ಆಡಳಿತ ಪಕ್ಷವೇ ಕಾರಣವೆಂದು ನಾನು ಹೇಳುತ್ತೇನೆ. ಸಂಸತ್ತಿನ ಕಾರ್ಯಕಲಾಪಗಳು ಸುಸೂತ್ರವಾಗಿ ನಡೆದುಕೊಂಡು ಹೋಗುವಂತೆ ನೋಡಿಕೊಳ್ಳುವುದು ಆಡಳಿತ ಪಕ್ಷದ ಜವಾಬ್ದಾರಿಯೇ ಹೊರತು ವಿಪಕ್ಷಗಳದ್ದಲ್ಲ. ತಾವು ವಿಪಕ್ಷದಲ್ಲಿದ್ದೇವೆಯೇ ಅಥವಾ ಸರಕಾರದ ಭಾಗವಾಗಿದ್ದೇವೆಯೇ ಎಂಬುದು ಆಡಳಿತ ಪಕ್ಷಕ್ಕೇ ಗೊತ್ತಿಲ್ಲ. ಅವರು ಅಧಿಕಾರಕ್ಕೆ ಬಂದ ನಂತರವೂ ವಿಪಕ್ಷದ ಪಾತ್ರ ನಿರ್ವಹಿಸುತ್ತಿದ್ದಾರೆ.


  • ಸಂಸತ್ತಿನ ಈ ಗಲಾಟೆಯಲ್ಲಿ ಪ್ರಮುಖ ವಿಷಯಗಳು ಚರ್ಚೆಗೆ ಬಾರದೆ  ಜನಸಾಮಾನ್ಯರ ದನಿಗಳನ್ನು ಇಲ್ಲವಾಗಿಸಿದೆಯೇ ?

ನಾವೆಲ್ಲರೂ ಜನಪ್ರತಿನಿಧಿಗಳು. ಆದರೆ ಸರಕಾರಕ್ಕೆ ನಮ್ಮ ಮಾತುಗಳನ್ನು ಕೇಳುವ ಇಚ್ಛೆಯಿಲ್ಲ. ನೋಟು ಅಮಾನ್ಯಗೊಂಡು ಒಂದು ತಿಂಗಳ ಮೇಲಾಗಿದೆ. ನೂರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ ? ಮೊದಲು ತಾವು ಕಪ್ಪು ಹಣದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಹೇಳಿದ ಅವರು ನಂತರ ನಕಲಿ ನೋಟ್ ಹಾವಳಿ ತಪ್ಪಿಸುವುದಾಗಿ ಹೇಳಿದರು. ಈಗ ಕ್ಯಾಶ್ ಲೆಸ್ ಬಗ್ಗೆ ಮಾತನಾಡುತ್ತಿದ್ದಾರೆ.


  • ವಿಪಕ್ಷಗಳು ಚರ್ಚೆಗಳಿಂದ ದೂರ ಓಡಿ ಹೋಗುತ್ತಿವೆಯೆಂದು ಸರಕಾರ ಹೇಳುತ್ತಿದೆ. ಸಂಸತ್ತಿನಲ್ಲಿ  ಬಂದು ಚರ್ಚಿಸುವಂತೆ ಅವರು ನಿಮಗೆ ಸವಾಲು ಹಾಕಿದ್ದಾರೆ. ನಿಮ್ಮ ಪ್ರತಿಕ್ರಿಯೆ ?

ಯಾವು ಯಾವಾಗ ಚರ್ಚೆಯಿಂದ ದೂರ ಓಡಿದ್ದೇವೆ ? ನಾವು ಯಾವತ್ತೂ ಸಿದ್ಧರಿದ್ದೇವೆ. ಚರ್ಚೆ ಆರಂಭಿಸಿದವರೇ ನಾವು. ಆದರೆ ಈ ನಿರ್ಧಾರ ಪ್ರಕಟಿಸಿದ  ಪ್ರಧಾನಿ ಎಲ್ಲಿದ್ದಾರೆ ? ಈ ಘೋಷಣೆ ಮಾಡಿದಂದಿನಿಂದ ಸರಕಾರ ಸುಮಾರು  120 ಸೂಚನೆಗಳನ್ನು ಹೊರಡಿಸಿದೆ.  ಅವರು ಈ ನಿರ್ಧಾರದ ಪರಿಣಾಮಗಳ ಬಗ್ಗೆ ಮೊದಲೇ ಅಂದಾಜಿಸಿರಲಿಲ್ಲವೆಂಬುದನ್ನು ಇದು ಪುಷ್ಠೀಕರಿಸುತ್ತದೆ. ಜನರು ಪ್ರತಿ ದಿನ ಸರತಿ ಸಾಲುಗಳಲ್ಲಿ ನಿಲ್ಲುತ್ತಿದ್ದಾರೆ. ಇದರಿಂದ ಎಷ್ಟು ಗಂಟೆಗಳ ಕೆಲಸ ನಷ್ಟವಾಗುತಿದೆ ಎಂದು ನಿಮಗೆ ಗೊತ್ತೇ ?


  • ಸರಕಾರ ಕ್ಯಾಶ್ ಲೆಸ್ ಇಕಾನಮಿಯ ಬಗ್ಗೆ ಮಾತನಾಡುತ್ತಿದೆ. ಇದರ ಬಗ್ಗೆ ನಿಮಗೇನಾದರೂ ಸಮಸ್ಯೆಯಿದೆಯೇ ?

ಇದಕ್ಕಾಗಿ ಮೂಲಭೂತ ಸೌಕರ್ಯಗಳು ಲಭ್ಯವಿವೆಯೇ ಎಂದು ನಾನು ಪ್ರಶ್ನಿಸಬಯಸುತ್ತೇನೆ. ಇಂಟರ್ ನೆಟ್ ಸ್ಪೀಡ್ ಹೇಗಿದೆ ? ಮೊದಲಾಗಿ ನಮಗೆ ಹೆಚ್ಚು ಎಟಿಎಂ ಹಾಗೂ ಬ್ಯಾಂಕ್ ಶಾಖೆಗಳ ಅಗತ್ಯವಿದೆ. ಜಪಾನ್, ಅಮೆರಿಕಾ, ಇಂಗ್ಲೆಂಡ್ ದೇಶಗಳನ್ನು ನೋಡಿ, ಅವುಗಳೇನು ಕ್ಯಾಶ್ ಲೆಸ್ ಇಕಾನಮಿಗಳಾಗಿಲ್ಲ. ನಾನು ಈ ದೇಶಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಅವರು ನಗದು ಸ್ವೀಕರಿಸಲಾಗುವುದಿಲ್ಲ, ಕಾರ್ಡ್ ಮೂಲಕವೇ ಪಾವತಿಸಬೇಕು ಎಂದೇನೂ ಹೇಳುವುದಿಲ್ಲ.


  • ನೋಟು ರದ್ದತಿಯಿಂದ ಉದ್ಭವಿಸಿರುವ ಸಮಸ್ಯೆ ಅಲ್ಪ ಕಾಲ ಮಾತ್ರ. ಅದರಿಂದ ಭವಿಷ್ಯದಲ್ಲಿ ಹಲವಾರು ಪ್ರಯೋಜಗಳಿವೆ ಎಂದು ಸರಕಾರ ಹೇಳುತ್ತಿದೆಯಲ್ಲ ?

ಬಿಜೆಪಿಯಲ್ಲಿ ಕೆಲವರಿಗೆ ಈ ನಿರ್ಧಾರದ ಬಗ್ಗೆ ಮೊದಲೇ ತಿಳಿದಿತ್ತು, ನೋಟು ರದ್ದತಿ ಘೋಷಣೆಯಾಗುವ ಮೊದಲೇ ಪಕ್ಷ ಹಲವೆಡೆ ಭೂಮಿ ಖರೀದಿಸಿತ್ತು,  ಹೊಸ ನೋಟುಗಳನ್ನು ಅಕ್ರಮವಾಗಿ ಶೇಖರಿರಿಸಿದ ಆರೋಪದ ಮೇಲೆ ಬಿಜೆಪಿಯ ಹಲವು ಮಂದಿಯೇ ಬಂಧನಕ್ಕೊಳಗಾಗುತ್ತಿರುವುದು ಆಶ್ಚರ್ಯಕಾರಿ. ಕಾಳಧನಿಕರು ತಮ್ಮ ಬಳಿ ಇರುವ ರದ್ದುಗೊಂಡಿರುವ ನೋಟುಗಳನ್ನು ಕಮಿಷನ್ ಆಧಾರದಲ್ಲಿ ಹೊಸ ನೋಟುಗಳಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಬ್ಯಾಂಕುಗಳು ಹಾಗೂ ಎಟಿಎಂಗಳಲ್ಲಿ ಹಣ ದೊರೆಯುತ್ತಿಲ್ಲ.


  • ಇನ್ನು ಮುಂದಾದರೂ ಸಂಸತ್ತಿನ ಕಾರ್ಯಕಲಾಪಗಳು ನಡೆಯಬಹುದೇ ?

ನಮ್ಮಲ್ಲಿ ವಿನಾಶಕಾರಿ ಆಡಳಿತ ಪಕ್ಷವನ್ನು ಹೋಲಿಸಿದಲ್ಲಿ ಉತ್ತಮ ವಿಪಕ್ಷವಿದೆ. ನಾವು ಚರ್ಚೆಗೆ ಯಾವತ್ತೂ ಸಿದ್ಧರಿದ್ದೇವೆ. ಆದರೆ ಈ ನಿಟ್ಟಿನಲ್ಲಿ ಮುಂದಡಿಯಿಡಬೇಕಾದವರು ಆಡಳಿತ ಪಕ್ಷದವರು. ಅವರಿಗೆ ಸಂಸತ್ತಿನ ಕಲಾಪ ನಡೆಸಲು ಇಷ್ಟವಿಲ್ಲದ ಕಾರಣ ಅವರು ವಿಪಕ್ಷ ಸದಸ್ಯರನ್ನು ಕೆಣಕುತ್ತಿದ್ದಾರೆ.